ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆಯೋಜಿಸಿದ್ದ ಪ್ರತಿಭಟನೆಯ ವೇಳೆ ವಶಕ್ಕೆ ಪಡೆದ ಪೊಲೀಸರು  
ದೇಶ

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಜೆಪಿಯ ರಾಷ್ಟ್ರೀಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರೂ ಪಕ್ಷ ತನ್ನ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯನ್ನು ಮತ್ತೆ ಆರಂಭಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (CJP) ಘೋಷಿಸಿದೆ. ಇಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿರುವ ಪಕ್ಷ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದೆ. ದೆಹಲಿಯಲ್ಲಿ ನಿನ್ನೆ ಶನಿವಾರ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದ ಒಂದು ದಿನದ ಬಳಿಕ ಪಕ್ಷ ಈ ಘೋಷಣೆ ಮಾಡಿದೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಜೆಪಿಯ ರಾಷ್ಟ್ರೀಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರೂ ಪಕ್ಷ ತನ್ನ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಇಂದು ನಮ್ಮನ್ನು ವಶಕ್ಕೆ ಪಡೆದ ಬಳಿಕ ನಾವು ಮನೆಗೆ ಮರಳುತ್ತೇವೆ ಎಂದು ಸರ್ಕಾರ ಭಾವಿಸಿರಬಹುದು. ಮೋದಿ, ಶಾ ಅವರ ಈ ಭಯವೇ ನಾವು ಹೋರಾಟದ ಅರ್ಧದಷ್ಟು ಗೆದ್ದಿದ್ದೇವೆ ಎಂಬುದನ್ನು ತೋರಿಸುತ್ತದೆ ಎಂದು ಶಿಂಧೆ ಹೇಳಿದರು.

ನೀವು ಎಷ್ಟು ಜನರನ್ನು ವಶಕ್ಕೆ ಪಡೆದರೂ, ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ನಾವು ಹಿಂದೆ ಸರಿಯುವುದಿಲ್ಲ. ಇಂದು ಬೆಳಗ್ಗೆ 10 ಗಂಟೆಗೆ ಮತ್ತೆ ಜಂತರ್ ಮಂತರ್‌ಗೆ ತೆರಳುತ್ತೇವೆ ಎಂದು ಅವರು ತಿಳಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡಿದ ಅವರು, ಪೊಲೀಸರು ಎಲ್ಲಿ ತಡೆದರೂ ಅಲ್ಲಿಯೇ ಪ್ರತಿಭಟನೆ ಮುಂದುವರಿಸುವಂತೆ ಮನವಿ ಮಾಡಿದರು.

13 ಕೋಟಿ ಮತಗಳನ್ನು ಅಳಿಸಲಾಗಿದೆ ಹಾಗೂ ತಿರುಚಲಾಗಿದೆ ಎಂಬ ಆರೋಪಗಳ ಕುರಿತು ಹೊಣೆಗಾರಿಕೆ ನಿಗದಿಪಡಿಸುವವರೆಗೆ ದೇಶಾದ್ಯಂತ ನಾಗರಿಕ ಅಸಹಕಾರ ಚಳವಳಿ ಮತ್ತು ಬೀದಿ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಪಕ್ಷ ಹೇಳಿದೆ.

ಪಕ್ಷದ ನಾಯಕರು ಹಾಗೂ ಇತರ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿರುವುದನ್ನು ಸಿಜೆಪಿ ಪ್ರತಿನಿಧಿಗಳು ಖಂಡಿಸಿದರು. ಶಾಂತಿಯುತವಾಗಿ ಸಭೆ ಸೇರುವುದನ್ನು ತಡೆಯಲು ಅಧಿಕಾರಿಗಳು ‘ಘೋಷಣೆಯಾಗದ ತುರ್ತು ಪರಿಸ್ಥಿತಿ’ಯನ್ನು ಹೇರಿದ್ದಾರೆ ಎಂದು ಆರೋಪಿಸಿದರು.

ದೆಹಲಿಯಲ್ಲಿ ಭಾರಿ ಪ್ರಮಾಣದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವುದು ಮತ್ತು ವಿಧಿಸಿರುವ ನಿರ್ಬಂಧಗಳ ಬಗ್ಗೆಯೂ ಟೀಕಿಸಿದರು. ದೆಹಲಿಯನ್ನು ‘ಕಂಟೋನ್ಮೆಂಟ್ ಅಥವಾ ಕೋಟೆ’ಯಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ರಾಜಕೀಯ ಮುಖಂಡರು ಸೇರಿದಂತೆ 15,000ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ ಅಥವಾ ಅವರು ಪೊಲೀಸ್ ಕ್ರಮವನ್ನು ಎದುರಿಸಿದ್ದಾರೆ ಎಂದು ಪ್ರತಿಪಾದಿಸಿದರು. ಸಾರ್ವಜನಿಕ ಸಾರಿಗೆಯ ಮೇಲಿನ ನಿರ್ಬಂಧಗಳು ಹಾಗೂ ಸಿಗ್ನಲ್ ಜಾಮರ್‌ಗಳ ಬಳಕೆಯು ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶ ಹೊಂದಿದೆ ಎಂದೂ ಆರೋಪಿಸಿದರು.

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿರುವ ನಾಗರಿಕ ಸಮಾಜದ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ವಕ್ತಾರ ಅನೀಶ್ ಗವಾಂಡೆ ಆರೋಪಿಸಿದರು.

ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ವೇಳೆ ವಿರೋಧ ಪಕ್ಷಗಳು ಹಾಗೂ ನಾಗರಿಕ ಸಮಾಜದ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿವೆ. ಹೊಣೆಗಾರಿಕೆಯನ್ನು ನಿಗದಿಪಡಿಸುವಂತೆ ಆಗ್ರಹಿಸಲು ಈ ಒಗ್ಗಟ್ಟಿನ ಹೋರಾಟ ಮುಂದುವರಿಯಲಿದೆ ಎಂದು ಗವಾಂಡೆ ಹೇಳಿದರು.

ಭಾರತದ ವಿದ್ಯಾರ್ಥಿ ಒಕ್ಕೂಟದ (SFI) ಸೃಜನ್ ಭಟ್ಟಾಚಾರ್ಯ, ಸರ್ವಾಧಿಕಾರದ ವಿರುದ್ಧ ಸಾಧ್ಯವಾದಷ್ಟು ವ್ಯಾಪಕವಾದ ಒಗ್ಗಟ್ಟಿನೊಂದಿಗೆ ನಾವು ಹೋರಾಡುತ್ತಿದ್ದೇವೆ ಎಂದರು.

ಜಂತರ್ ಮಂತರ್‌ಗೆ ತೆರಳಲು ವಿಧಿಸಿರುವ ನಿರ್ಬಂಧಗಳು, ಮೆಟ್ರೋ ನಿಲ್ದಾಣಗಳನ್ನು ಮುಚ್ಚಿರುವುದು, ರೈಲು ಸೇವೆಗಳನ್ನು ಸ್ಥಗಿತಗೊಳಿಸಿರುವುದು ಮತ್ತು ಸಾರಿಗೆ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಜನರನ್ನು ವಶಕ್ಕೆ ಪಡೆದಿರುವುದನ್ನೂ ಸಿಜೆಪಿ ಪ್ರತಿನಿಧಿಗಳು ಟೀಕಿಸಿದರು. ಈ ಕ್ರಮಗಳು ಶಾಂತಿಯುತವಾಗಿ ಸಭೆ ಸೇರುವ ಹಕ್ಕಿಗೆ ಅಡ್ಡಿಯಾಗಿವೆ ಎಂದು ಆರೋಪಿಸಿದರು.

ಸಾಂವಿಧಾನಿಕ ಹಕ್ಕುಗಳಿಗೆ ರಕ್ಷಣೆ ದೊರೆಯುವವರೆಗೆ ಹಲವು ರಾಜ್ಯಗಳಲ್ಲಿ ಚುನಾವಣಾ ಪಾರದರ್ಶಕತೆಗಾಗಿ ತಮ್ಮ ಅಭಿಯಾನ ಮುಂದುವರಿಯಲಿದೆ ಎಂದು ಸಂಘಟಕರು ತಿಳಿಸಿದರು.

ಜೈಲು ತುಂಬುವವರೆಗೆ ಮತ್ತು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವವರೆಗೆ ನಾಗರಿಕ ಅಸಹಕಾರ ಹಾಗೂ ಬೀದಿ ಪ್ರತಿಭಟನೆಗಳು ನಿರಂತರವಾಗಿ ಮುಂದುವರಿಯಲಿವೆ. ಪ್ರಜಾಪ್ರಭುತ್ವ ಮಾರಾಟಕ್ಕಿಲ್ಲ ಎಂದು ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೆಹಲಿಯಲ್ಲಿ ಸಂಚಾರ ವ್ಯತ್ಯಯ ಸಾಧ್ಯತೆ: ಸಂಚಾರ ಪೊಲೀಸರಿಂದ ಸಲಹೆ

ಇದೇ ವೇಳೆ, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾನುವಾರ, ಅಕ್ಟೋಬರ್ 11ರಂದು ನವದೆಹಲಿ ಮತ್ತು ಮಧ್ಯ ದೆಹಲಿಯ ಹಲವು ಪ್ರದೇಶಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂದು ದೆಹಲಿ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.

ಸ್ಥಳದ ಪರಿಸ್ಥಿತಿಗೆ ಅನುಗುಣವಾಗಿ ಬೆಳಿಗ್ಗೆ 6 ಗಂಟೆಯಿಂದಲೇ ಸಂಚಾರ ಮಾರ್ಗ ಬದಲಾವಣೆಗಳು ಜಾರಿಗೆ ಬರಬಹುದು. ಜಂತರ್ ಮಂತರ್, ಸಂಸದ್ ಮಾರ್ಗ್, ಕನ್ನಾಟ್ ಪ್ಲೇಸ್, ಮಂಡಿ ಹೌಸ್, ರೈಲ್ ಭವನ, ಪಟೇಲ್ ಚೌಕ್, ಧೌಲಾ ಕುವಾನ್, ಲೋಧಿ ರಸ್ತೆ ಮತ್ತು ಸರ್ದಾರ್ ಪಟೇಲ್ ಮಾರ್ಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚಾರದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.

ರೈಲು ನಿಲ್ದಾಣಗಳು, ಅಂತರರಾಜ್ಯ ಬಸ್ ಟರ್ಮಿನಲ್‌ಗಳು ಮತ್ತು ವಿಮಾನ ನಿಲ್ದಾಣದತ್ತ ಪ್ರಯಾಣಿಸುವವರು ಹೆಚ್ಚುವರಿ ಸಮಯವನ್ನು ಮೀಸಲಿಡುವಂತೆ ಹಾಗೂ ಅನಗತ್ಯ ಪ್ರಯಾಣಗಳನ್ನು ತಪ್ಪಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ನಿರ್ಬಂಧಗಳಲ್ಲಿ ಬದಲಾವಣೆಗಳಾಗಬಹುದು. ಸಾರ್ವಜನಿಕರು ದೆಹಲಿ ಸಂಚಾರ ಪೊಲೀಸರ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಮಾಹಿತಿಯನ್ನು ಗಮನಿಸುವಂತೆ ಮನವಿ ಮಾಡಿದ್ದಾರೆ.

ಶನಿವಾರ ನಡೆದ ಭದ್ರತಾ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಸಿಜೆಪಿ ಮತ್ತೆ ಪ್ರತಿಭಟನೆಗೆ ಕರೆ ನೀಡಿದೆ. ಈ ಕಾರ್ಯಾಚರಣೆಯಲ್ಲಿ ಜಂತರ್ ಮಂತರ್‌ಗೆ ತೆರಳುವ ಮಾರ್ಗಗಳು ಸೇರಿದಂತೆ ದೆಹಲಿಯ ಹಲವು ಸ್ಥಳಗಳಲ್ಲಿ ಪ್ರತಿಭಟನಾಕಾರರು, ಕಾರ್ಯಕರ್ತರು, ರಾಜಕೀಯ ಮುಖಂಡರು ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ನಿಗದಿತ ಸ್ಥಳವನ್ನು ತಲುಪುವ ಮೊದಲೇ ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ

‘Gen Z ಪ್ರತಿಭಟನೆಗಳಿಂದ ಮೋದಿ ಸರ್ಕಾರಕ್ಕೆ ನಡುಕ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್