ನವದೆಹಲಿ: ಚುನಾವಣೆಗಳಲ್ಲಿ ಗೆಲ್ಲಲು ಕೇವಲ ಚುನಾವಣಾ ಆಯೋಗವನ್ನು (EC) ನಿಂದಿಸಿದರೆ ಸಾಲದು ಎಂದು ಹೇಳುವ ಮೂಲಕ ಜೆಡಿಯು ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ಟೀಕಿಸಿದೆ.
ಮುಖ್ಯ ಚುನಾವಣಾ ಆಯುಕ್ತ (CEC) ಜ್ವಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ತಮ್ಮ ಟೀಕಾಪ್ರಹಾರವನ್ನು ತೀವ್ರಗೊಳಿಸಿರುವ ಹಾಗೂ 'ಮತಗಳ್ಳತನ'ದ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ದೂರು ಸಲ್ಲಿಸಲು 'ಇಂಡಿಯಾ' (INDIA) ಮೈತ್ರಿಕೂಟದ ನಾಯಕರು ಸೋಮವಾರ ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಈ ಹೇಳಿಕೆ ಹೊರಬಿದ್ದಿದೆ.
ಜನತಾ ದಳ (ಯುನೈಟೆಡ್) ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಪ್ರಸಾದ್, 'ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಭಿನ್ನಾಭಿಪ್ರಾಯ ಮತ್ತು ಅರಾಜಕತೆಗಳ ನಡುವೆ ವ್ಯತ್ಯಾಸವಿದೆ; ರಾಹುಲ್ ಗಾಂಧಿ ಮತ್ತು ಇಡೀ ವಿರೋಧ ಪಕ್ಷವು ಇದನ್ನು ಅರ್ಥಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಗೆಲ್ಲಲು ಕೇವಲ ಚುನಾವಣಾ ಆಯೋಗವನ್ನು ದೂಷಿಸಿದರೆ ಸಾಲದು; ನೀವು ಜನರ ಬಳಿಗೆ ಹೋಗಬೇಕು ಮತ್ತು ತಳಮಟ್ಟದಲ್ಲಿ ಕೆಲಸ ಮಾಡಬೇಕು' ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಭಾರತದ ಸ್ವಾತಂತ್ರ್ಯ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಪಕ್ಷವು ಕಳೆದ ಕೆಲವು ದಶಕಗಳಿಂದ ನಿರಂತರವಾಗಿ ಕ್ಷೀಣಿಸುತ್ತಿದೆ ಎಂದು ಅವರು ಹೇಳಿದರು.
'ವಿಶೇಷವಾಗಿ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ, ಪದೇ ಪದೆ ಪ್ರಯತ್ನಗಳನ್ನು ನಡೆಸಿದರೂ ಪಕ್ಷವು ಸತತ ಮೂರು ಲೋಕಸಭೆ ಚುನಾವಣೆಗಳಲ್ಲಿ 100 ಸ್ಥಾನಗಳ ಗಡಿ ದಾಟುವಲ್ಲಿ ವಿಫಲವಾಗಿದೆ. ಹಲವು ರಾಜ್ಯಗಳಲ್ಲಿ ಪಕ್ಷದ ಬೆಂಬಲದ ನೆಲೆ ಕುಸಿದಿದ್ದು, ಈಗ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಮಾತ್ರ ಅದು ಉಳಿದುಕೊಂಡಿದೆ. ಇದು ಆತ್ಮಾವಲೋಕನಕ್ಕೆ ಎಡೆಮಾಡಿಕೊಟ್ಟಿದ್ದು, ಪಕ್ಷದ ಅವನತಿಗೆ ಕಾರಣವಾದ ಅಂಶಗಳ ಬಗ್ಗೆ ರಾಹುಲ್ ಗಾಂಧಿ ಚಿಂತನೆ ನಡೆಸಬೇಕಿದೆ' ಎಂದು ಪ್ರಸಾದ್ ಹೇಳಿದರು.
'ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಅದು ಸಂಕಷ್ಟಗಳನ್ನು ಎದುರಿಸುತ್ತಿದೆ. ಈ ಅವಧಿಯಲ್ಲಿ ಕಾಂಗ್ರೆಸ್ ಕೆಲವು ರಾಜ್ಯಗಳಲ್ಲಿ ಸರ್ಕಾರಗಳನ್ನು ರಚಿಸಿದ್ದರೂ, ಅದು ಅಧಿಕಾರದಲ್ಲಿರುವ ಆ ಕೆಲವೇ ರಾಜ್ಯಗಳಲ್ಲೂ ಅಸಮಾಧಾನವು ತಲೆದೋರುತ್ತಿದೆ. ಪಕ್ಷವು ಸಂಕಷ್ಟಗಳನ್ನು ಎದುರಿಸುತ್ತಿರುವ ರಾಜ್ಯಗಳಿಗೆ ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಉದಾಹರಣೆಗಳಾಗಿವೆ' ಎಂದರು.
'ವಿರೋಧ ಪಕ್ಷದ ಸ್ಥಾನದಲ್ಲಿರುವ ಪಂಜಾಬ್ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಪಕ್ಷದೊಳಗೆ ತೀವ್ರ ಆಂತರಿಕ ಕಲಹ ನಡೆಯುತ್ತಿದೆ. ಕಾಂಗ್ರೆಸ್‌ನಲ್ಲಿನ ಭಿನ್ನಾಭಿಪ್ರಾಯ ಮತ್ತು ರಾಹುಲ್ ಗಾಂಧಿ ಅವರ ದೂರದೃಷ್ಟಿಯ ಕೊರತೆಯಿಂದ ಉಂಟಾದ ಹಾನಿಯು ಪಕ್ಷವನ್ನು ದುರ್ಬಲಗೊಳಿಸಿದೆ. ಈ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಅವರು ಚುನಾವಣಾ ಆಯೋಗವನ್ನು ಟೀಕಿಸುತ್ತಿದ್ದಾರೆ' ಎಂದು ಪ್ರಸಾದ್ ಆರೋಪಿಸಿದರು.