ಕುನೊ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು 8 ತಿಂಗಳ ಹಿಂದೆ ನಮೀಬಿಯಾದ ಚೀತಾ 'ಆಶಾ'ಗೆ ಜನಿಸಿದ ಮರಿಯೊಂದು ಸಾವನ್ನಪ್ಪಿದೆ.
5 ಮರಿಗಳ ಪೈಕಿ ಒಂದು ಮರಿಯು ಸೋಮವಾರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಗಿನ ಪರಿಶೀಲನೆಯ ಸಮಯದಲ್ಲಿ, ಆಶಾ ಕೇವಲ ನಾಲ್ಕು ಮರಿಗಳೊಂದಿಗೆ ಕಂಡುಬಂದಿತು. ಕಾಣೆಯಾದ ಮರಿಯನ್ನು ಪತ್ತೆಹಚ್ಚಲು ವ್ಯಾಪಕ ಶೋಧ ನಡೆಸಿದಾಗ ಅದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಯಿತು ಎಂದು ಅಧಿಕಾರಿ ಹೇಳಿದರು.
ಸಾವು ಸಂಭವಿಸಲು ನಿಖರ ಕಾರಣ ತಿಳಿದುಬಂದಿಲ್ಲ ಮತ್ತು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಹೆಚ್ಚಿನ ವಿವರಗಳು ಲಭ್ಯವಾಗಲಿವೆ ಎಂದು ಅವರು ತಿಳಿಸಿದರು.
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಈಗ ಒಟ್ಟು 53 ಚಿರತೆಗಳಿವೆ; ಇದರಲ್ಲಿ ಭಾರತದಲ್ಲಿ ಜನಿಸಿದ 40 ಚೀತಾಗಳೂ ಸೇರಿವೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಈ 53 ಚೀತಾಗಳ ಪೈಕಿ 15 ಚೀತಾಗಳು ಪ್ರಸ್ತುತ ಕಾಡಿನಲ್ಲಿ ಮುಕ್ತವಾಗಿ ಸಂಚರಿಸುತ್ತಿವೆ.
ಭಾರತದಲ್ಲಿನ ಒಟ್ಟು ಚೀತಾಗಳ ಸಂಖ್ಯೆ 59 ರಷ್ಟಿದೆ. ಇದರಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (KNP) 53, ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ನಾಲ್ಕು ಮತ್ತು ಸಾಗರ್ ಜಿಲ್ಲೆಯ ವೀರಂಗನ ದೇವಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (VDTR) ಎರಡು ಚೀತಾಗಳು ಸೇರಿವೆ ಎಂದು ಅಧಿಕಾರಿ ತಿಳಿಸಿದರು.