ಮಧುರೈ: ಇತ್ತೀಚಿನ ದಿನಗಳಲ್ಲಿ ಈ ಸಾಮಾಜಿಕ ಜಾಲತಾಣಗಳ ಅವಾಂತರ ಒಂದೆರಡಲ್ಲ.. ಈ ಪಟ್ಟಿಗೆ ಹೊಸ ಸೇರ್ಪಡೆ ಎಂಬಂತೆ ವ್ಯಕ್ತಿಯೊಬ್ಬರು ಹಬ್ಬಕ್ಕೆಂದು ಉಚಿತ ಗಿಫ್ಟ್ ಕೇಳಿದ್ದೇ ತಡ ನೆಟ್ಟಿಗರು ಆತನಿಗೆ ನಾನಾ ಬಗೆಯ ವಸ್ತುಗಳನ್ನು ಆರ್ಡರ್ ಮಾಡಿ ಕಾಟ ಕೊಡುತ್ತಿದ್ದಾರೆ.
ತಮಿಳುನಾಡಿನ ಮಧುರೈ ಮೂಲದ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ವೀರಮಣಿ (Veeramani_121) ದೀಪಾವಳಿ ಸಂದರ್ಭದಲ್ಲಿ ಉಚಿತ ಸಿಹಿ ಪ್ಯಾಕೆಟ್ ನೀಡುವಂತೆ ಮನವಿ ಮಾಡಿದ್ದರು. ಈ ವೇಳೆ ತಮ್ಮ ಫೋನ್ ನಂಬರ್ ಮತ್ತು ಮನೆ ವಿಳಾಸವನ್ನು ಕೂಡ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು.
ಆದರೆ, ಈ ಮನವಿಯೇ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮನೆಯ ವಿಳಾಸವನ್ನು ಹಂಚಿಕೊಂಡ ಬಳಿಕ, ಕೆಲವರು ಅವರ ಹೆಸರಿನಲ್ಲಿ ನೂರಾರು ನಕಲಿ ಆರ್ಡರ್‌ಗಳನ್ನು ಮಾಡಿರುವುದಾಗಿ ವರದಿಯಾಗಿದೆ.
ಬರೊಬ್ಬರಿ 500ಕ್ಕೂ COD ಆರ್ಡರ್
ಉಚಿತ ಸಿಹಿ ಬೇಕೆಂದು ಕೇಳಿದ್ದ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್‌ಗೆ ನೆಟ್ಟಿಗರು ನೀಡಿದ 'ಉಡುಗೊರೆ' ಆತನಿಗೆ ಭಾರಿ ಆಘಾತವನ್ನೇ ಉಂಟು ಮಾಡಿದ್ದು, 500ಕ್ಕೂ ಹೆಚ್ಚು ಕ್ಯಾಶ್ ಆನ್ ಡೆಲಿವರಿ (COD) ಆರ್ಡರ್‌ಗಳನ್ನು ಮಾಡಲಾಗಿದೆ. ಆಘಾತಕಾರಿ ಎಂದರೆ ಅದರಲ್ಲಿ ಬರೊಬ್ಬರಿ 70 ಕೋಟಿ ರೂ. ಮೌಲ್ಯದ ಟಿ-90ಎಸ್ ಮಿಲಿಟರಿ ಟ್ಯಾಂಕ್ ಮತ್ತು ಪಿಎಸ್‌ಎಲ್‌ವಿ ರಾಕೆಟ್ ಕೂಡ ಸೇರಿವೆ ಎಂಬ ವರದಿಗಳು ವೈರಲ್ ಆಗಿವೆ!
ಹಾಲು, ಟಿವಿ, ಫ್ರಿಡ್ಜ್‌ನಿಂದ ಮಿಲಿಟರಿ ಟ್ಯಾಂಕ್‌ವರೆಗೆ! ಏನೆಲ್ಲಾ ಆರ್ಡರ್ ಮಾಡಿದ್ದಾರೆ ಗೊತ್ತಾ!
ಆರಂಭದಲ್ಲಿ ಹಾಲು, ಟಿವಿ, ಫ್ರಿಡ್ಜ್ ಸೇರಿದಂತೆ ವಿವಿಧ ವಸ್ತುಗಳ ಆರ್ಡರ್‌ಗಳು ಬರತೊಡಗಿದವು. ಆದರೆ, ನಂತರ ಈ ಪ್ರ್ಯಾಂಕ್ ಅತಿರೇಕಕ್ಕೆ ತಲುಪಿದೆ ಎನ್ನಲಾಗಿದೆ.
ನೆಟ್ಟಿಗರು ವೀರಮಣಿ ಅವರ ಹೆಸರಿನಲ್ಲಿ ಬರೋಬ್ಬರಿ 70 ಕೋಟಿ ರೂ. ಮೌಲ್ಯದ ಟಿ-90ಎಸ್ ಮಿಲಿಟರಿ ಟ್ಯಾಂಕ್ ಹಾಗೂ ಪಿಎಸ್‌ಎಲ್‌ವಿ ರಾಕೆಟ್‌ಗೂ ಆರ್ಡರ್ ಮಾಡಿದ್ದಾರೆ. ಈ ಬಗ್ಗೆ ಇನ್ ಫ್ಲುಯೆನ್ಸರ್ ವೀರಮಣಿ ಅವರೇ ತಮ್ಮ ಖಾತೆಯಲ್ಲಿ ಸರಣಿ ವಿಡಿಯೋಗಳನ್ನು ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿರುವ ಹಾಸ್ಯಭರಿತ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕಿಡ್ನಿ ದಾನಕ್ಕೂ ಇವನದ್ದೇ ಅಡ್ರೆಸ್
ಇನ್ನೂ ಅಚ್ಚರಿ ಎಂದರೆ ಇವರ ವಿಳಾಸ ನೀಡಿ ಕಿಡ್ನಿ ದಾನ ಮಾಡುತ್ತಾರೆ ಎಂದೂ ವದಂತಿ ಹಬ್ಬಿಸಲಾಗಿತ್ತಂತೆ. ಈ ಬಗ್ಗೆಯೂ ವೀರಮಣಿ ವಿಡಿಯೋ ಮಾಡಿ ಆಕ್ರೋಶ ಹೊರ ಹಾಕಿದ್ದರು.
ಡೆಲಿವರಿ ಸಿಬ್ಬಂದಿಗೂ ಸಂಕಷ್ಟ
ಈ ನಕಲಿ ಆರ್ಡರ್‌ಗಳಿಂದ ಇನ್‌ಫ್ಲುಯೆನ್ಸರ್ ಮಾತ್ರವಲ್ಲದೆ ಡೆಲಿವರಿ ಸಿಬ್ಬಂದಿಯೂ ತೊಂದರೆ ಅನುಭವಿಸಿದ್ದಾರೆ ಎನ್ನಲಾಗಿದೆ. ನಿರಂತರ ಕರೆಗಳು, ಆರ್ಡರ್‌ಗಳು ಮತ್ತು ವ್ಯರ್ಥ ಪ್ರಯಾಣಗಳಿಂದ ಸಿಬ್ಬಂದಿಗೆ ಕಿರಿಕಿರಿ ಉಂಟಾಗಿದೆ ಎಂದು ವರದಿಯಾಗಿದೆ.
ನಿಮ್ಗೆ ಕೈ ಮುಗೀತೀನಿ ಬಿಟ್ ಬಿಡ್ರೋ
ಇತ್ತ, ವೀರಮಣಿ ಕೂಡ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಇಂತಹ ಕೃತ್ಯಗಳನ್ನು ನಿಲ್ಲಿಸುವಂತೆ ಮನವಿ ಮಾಡಿ ಭಾವನಾತ್ಮಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಎಷ್ಟು ಗಂಭೀರವಾಯಿತೆಂದರೆ, ಅವರು ತಮ್ಮ ಮನೆಯನ್ನು ತೊರೆಯಬೇಕಾಯಿತು ಎಂದೂ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಾರೆ.
ತಮಾಷೆಯ ಹೆಸರಿನಲ್ಲಿ ಕಿರುಕುಳ!
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆ ಮತ್ತು ಕಿರುಕುಳದ ನಡುವಿನ ಗೆರೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಒಬ್ಬರ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು ನಕಲಿ ಆರ್ಡರ್‌ಗಳನ್ನು ಮಾಡುವುದು ಆ ವ್ಯಕ್ತಿಗೆ ಮಾತ್ರವಲ್ಲದೆ ಡೆಲಿವರಿ ಸಿಬ್ಬಂದಿ ಮತ್ತು ವ್ಯಾಪಾರಿಗಳಿಗೂ ಅನಗತ್ಯ ತೊಂದರೆ ಉಂಟುಮಾಡಬಹುದು ಎಂಬ ಟೀಕೆಗಳು ಕೇಳಿಬಂದಿವೆ.
ವ್ಯಾಪಕ ಕಮೆಂಟ್ ಗಳು
ಇನ್ನು ಒಂದು ಬಾಕ್ಸ್ ಸೋನ್ ಪಾಪ್ಡಿ ಕೇಳಿದವನಿಗೆ ಇಡೀ ಬಾಹ್ಯಾಕಾಶ ಕಾರ್ಯಕ್ರಮವನ್ನೇ ಆರ್ಡರ್ ಮಾಡಿದಂತಾಗಿದೆ ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಫ್ರಿಡ್ಜ್ ಅಥವಾ ಟಿವಿ ತಲುಪಿಸಲು ಬಂದ ಡೆಲಿವರಿ ಸಿಬ್ಬಂದಿಗೆ ಮಿಲಿಟರಿ ಟ್ಯಾಂಕ್‌ನಂತಹ ಆರ್ಡರ್ ಎದುರಾದರೆ ಹೇಗಿರಬಹುದು ಎಂಬ ಹಾಸ್ಯಮಯ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.
'ಸರ್, ನಿಮ್ಮ 70 ಕೋಟಿ ರೂ. COD ಬಿಲ್ ಆಗಿದೆ. ಯುಪಿಐ ಮಾಡುತ್ತೀರಾ ಅಥವಾ ನಗದು ಕೊಡುತ್ತೀರಾ?' ಎಂಬ ರೀತಿಯ ತಮಾಷೆಯ ಕಾಮೆಂಟ್‌ಗಳು ವೈರಲ್ ಆಗಿವೆ. ದೀಪಾವಳಿಗೆ ಉಚಿತ ಸಿಹಿ ಕೇಳಿದರೆ ಉಡುಗೊರೆಯ ಬದಲು ಇಡೀ ಸೇನೆಯನ್ನೇ ಮನೆಗೆ ಕಳುಹಿಸುವ ಕಾಲ ಇದು ಎಂದು ಕೆಲವರು ವ್ಯಂಗ್ಯವಾಡುತ್ತಿದ್ದರೆ, ಇಂತಹ ಪ್ರ್ಯಾಂಕ್‌ಗಳು ಮತ್ತೊಬ್ಬರಿಗೆ ಕಿರುಕುಳವಾಗಬಾರದು ಎಂದು ಹಲವರು ಎಚ್ಚರಿಸಿದ್ದಾರೆ.