ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ನಡೆದ SIR ಪ್ರತಿಭಟನೆಯ ವೇಳೆ ಮೂರು ತಿಂಗಳ ಗರ್ಭಿಣಿ ಪತ್ರಕರ್ತೆಯೊಬ್ಬರನ್ನು ತಳ್ಳಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ದೇಶದ ರಾಜಕಾರಣದಲ್ಲಿ ಭಾರಿ ವಿವಾದ ಸೃಷ್ಟಿಯಾಗಿದೆ. ಸೋಮವಾರ, ದೆಹಲಿಯಲ್ಲಿ ಮತದಾನದ ಅಕ್ರಮಗಳ ವಿರುದ್ಧ ವಿರೋಧ ಪಕ್ಷಗಳು ಹಮ್ಮಿಕೊಂಡಿದ್ದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಆರೋಪ?
ಡಿಜಿಟಲ್ ಮಾಧ್ಯಮವೊಂದರಲ್ಲಿ ಕಾರ್ಯನಿರ್ವಹಿಸುವ ರಿಚಾ ಪರಾಶರ್ ಎಂಬ ಪತ್ರಕರ್ತೆ ತಮಗೆ ಆದ ಅನುಭವವನ್ನು ಆಸ್ಪತ್ರೆಯ ಹಾಸಿಗೆಯಿಂದಲೇ ವಿವರಿಸಿದ್ದಾರೆ. "ನಾವು ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದಾಗ ರಾಹುಲ್ ಗಾಂಧಿ ಅವರ ಬಳಿ ಮೈಕ್ ಹಿಡಿದೆವು. ಅವರು ಸಿಟ್ಟಿನಿಂದ ನನ್ನ ಎಡ ಹೆಗಲನ್ನು ಹಿಡಿದು ತಳ್ಳಿದರು. ಅದೇ ಸಮಯದಲ್ಲಿ ಅವರ ಅಂಗರಕ್ಷಕರು (ಬಾಡಿಗಾರ್ಡ್ಸ್) ನನ್ನನ್ನು ಜೋರಾಗಿ ನೂಕಿದ್ದರಿಂದ ನಾನು ಮೆಟ್ಟಿಲುಗಳ ಮೇಲೆ ಮುಖ ಹಾಗೂ ಹೊಟ್ಟೆಯ ಭಾಗ ತಾಗಿ ಬಿದ್ದೆ. ನನ್ನ ಮೇಲೆ ಕ್ಯಾಮೆರಾಮನ್ ಕೂಡ ಬಿದ್ದರು" ಎಂದು ಅವರು ಆರೋಪಿಸಿದ್ದಾರೆ. ಈ ಘಟನೆಯ ಬಳಿಕ ತಾವು ಗರ್ಭಿಣಿ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾಗಿ ರಿಚಾ ತಿಳಿಸಿದ್ದಾರೆ.
ಮುಂದುವರೆದು, ತಳ್ಳಾಟದ ನೂಕಾಟದಿಂದಾಗಿ ಗಾಯಗೊಂಡಿರುವ ಪತ್ರಕರ್ತೆಯನ್ನು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ, ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಸೇರಿದಂತೆ ಹಲವು ನಾಯಕರು ರಿಚಾ ಪರಾಶರ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. "ಮಹಿಳಾ ಸಬಲೀಕರಣ ಮತ್ತು ಪಿತೃಪ್ರಧಾನ ವ್ಯವಸ್ಥೆ ವಿರುದ್ಧ ಮಾತನಾಡುವ ರಾಹುಲ್ ಗಾಂಧಿ ಅವರ ಅಸಲಿ ಮುಖವಾಡ ಕಳಚಿದೆ" ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಆದರೆ, ಕಾಂಗ್ರೆಸ್ ಪಕ್ಷವು ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಈ ಆರೋಪಗಳು ರಾಜಕೀಯ ಪ್ರೇರಿತ ಮತ್ತು ಸುಳ್ಳು ಎಂದು ಹೇಳಿರುವ ಕಾಂಗ್ರೆಸ್, ಘಟನೆಯ ಸಮಯ ಹಾಗೂ ಆಸ್ಪತ್ರೆಗೆ ದಾಖಲಾದ ದಿನಾಂಕಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.