ಸುಪ್ರೀಂ ಕೋರ್ಟ್ ಮತ್ತು ಮಕ್ಕಳ ಇಂಟರ್ನೆಟ್ ಬಳಕೆ 
ದೇಶ

ಮಕ್ಕಳ ಇಂಟರ್‌ನೆಟ್‌ ಬಳಕೆಗೆ ಸಂಪೂರ್ಣ ನಿಷೇಧ ಬೇಡ; child mode ಜಾರಿಗೆ ಸುಪ್ರೀಂ ಕೋರ್ಟ್‌ ಸಲಹೆ!

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್‌ ಚಂದ್ರನ್‌ ಅವರನ್ನೊಳಗೊಂಡ ಪೀಠವು ಅಕ್ಟೋಬರ್‌ 15ರಂದು ನೀಡಿದ ಆದೇಶದಲ್ಲಿ, ಇಂಟರ್‌ನೆಟ್‌ ಬಳಕೆಯ ಹಕ್ಕು ಮಕ್ಕಳಿಗೂ ಅನ್ವಯಿಸುತ್ತದೆ ಎಂದು ಹೇಳಿದೆ.

ನವದೆಹಲಿ: ಮಕ್ಕಳ ಆನ್‌ಲೈನ್‌ ಸುರಕ್ಷತೆಯ ಹೆಸರಿನಲ್ಲಿ ಅವರ ಇಂಟರ್‌ನೆಟ್‌ ಬಳಕೆಗೆ ಸಂಪೂರ್ಣ ನಿರ್ಬಂಧ ವಿಧಿಸುವುದು ಸೂಕ್ತವಲ್ಲ. ಮಕ್ಕಳಿಗೆ ಸುರಕ್ಷತೆಯೂ ಬೇಕು, ಸ್ವಾತಂತ್ರ್ಯವೂ ಬೇಕು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ‘ಚೈಲ್ಡ್‌ ಮೋಡ್‌’ ವ್ಯವಸ್ಥೆ ಜಾರಿಗೆ ತರುವುದೂ ಸೇರಿದಂತೆ, ವಯಸ್ಸಿಗೆ ಅನುಗುಣವಾದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್‌ ಚಂದ್ರನ್‌ ಅವರನ್ನೊಳಗೊಂಡ ಪೀಠವು ಅಕ್ಟೋಬರ್‌ 15ರಂದು ನೀಡಿದ ಆದೇಶದಲ್ಲಿ, ಇಂಟರ್‌ನೆಟ್‌ ಬಳಕೆಯ ಹಕ್ಕು ಮಕ್ಕಳಿಗೂ ಅನ್ವಯಿಸುತ್ತದೆ ಎಂದು ಹೇಳಿದೆ.

ಈ ಹಕ್ಕು ಸಂವಿಧಾನದ 21ನೇ ವಿಧಿ ಹಾಗೂ 19(1)(a) ವಿಧಿಯ ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. “ಮಕ್ಕಳ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯ ಪರಸ್ಪರ ವಿರೋಧವಾದ ಸಂಗತಿಗಳಲ್ಲ. ಮಕ್ಕಳಿಗೆ ಎರಡೂ ಹಕ್ಕುಗಳಿವೆ” ಎಂಬುದು ನ್ಯಾಯಪೀಠದ ಸ್ಪಷ್ಟ ನಿಲುವಾಗಿದೆ.

ಮಕ್ಕಳಿಗೆ ಪ್ರತ್ಯೇಕ ‘ಚೈಲ್ಡ್‌ ಮೋಡ್‌’

ಮಕ್ಕಳನ್ನು ಆನ್‌ಲೈನ್‌ ಅಪಾಯಗಳಿಂದ ರಕ್ಷಿಸುವ ಹೆಸರಿನಲ್ಲಿ ಇಂಟರ್‌ನೆಟ್‌ನಿಂದ ಸಂಪೂರ್ಣವಾಗಿ ದೂರವಿಡುವುದಕ್ಕಿಂತ, ಹಾನಿಕಾರಕ ವಿಷಯಗಳನ್ನು ನಿಯಂತ್ರಿಸುವುದು ಹಾಗೂ ಅವುಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ಮುಖ್ಯ ಎಂದು ನ್ಯಾಯಾಲಯ ಹೇಳಿದೆ.

ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಗೆಂದೇ ಪ್ರತ್ಯೇಕ ‘ಚೈಲ್ಡ್‌ ಮೋಡ್‌’ ವ್ಯವಸ್ಥೆ ರೂಪಿಸಬಹುದು. ಈ ವ್ಯವಸ್ಥೆಯಲ್ಲಿ ಮಕ್ಕಳ ಖಾತೆಗಳನ್ನು ಪೂರ್ವನಿಯೋಜಿತವಾಗಿ ಖಾಸಗಿಯಾಗಿಡುವುದು, ಅಪರಿಚಿತ ವಯಸ್ಕರಿಂದ ಬರುವ ಸಂದೇಶಗಳನ್ನು ನಿಯಂತ್ರಿಸುವುದು ಹಾಗೂ ಮಕ್ಕಳಿಗೆ ತಲುಪುವ ಜಾಹೀರಾತು ಮತ್ತು ವಿಷಯಗಳ ಮೇಲೆ ನಿಗಾ ವಹಿಸುವಂತಹ ಕ್ರಮಗಳನ್ನು ಅಳವಡಿಸಬಹುದು ಎಂದು ನ್ಯಾಯಪೀಠ ಸೂಚಿಸಿದೆ.

ಮಕ್ಕಳ ವಯಸ್ಸಿಗೆ ಅನುಗುಣವಾದ ರಕ್ಷಣೆ, ಪೋಷಕರ ಒಪ್ಪಿಗೆ ಮತ್ತು ಮೇಲ್ವಿಚಾರಣೆಗೆ ಆದ್ಯತೆ ನೀಡಬೇಕು. ಮಕ್ಕಳಿಗೆ ಹಾನಿಕಾರಕವಾದ ನಿರ್ದಿಷ್ಟ ವರ್ಗದ ವಿಷಯಗಳು ಅಥವಾ ಸೇವೆಗಳ ಮೇಲೆ ಸೂಕ್ತ ನಿರ್ಬಂಧಗಳನ್ನು ವಿಧಿಸುವುದಕ್ಕೂ ಈ ಅಭಿಪ್ರಾಯ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಕ್ಕಳ ಲೈಂಗಿಕ ಶೋಷಣೆಯ ವಿಷಯಗಳ ವಿರುದ್ಧ ಕ್ರಮಕ್ಕೆ ಒತ್ತು

ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು (CSEAM) ಪತ್ತೆಹಚ್ಚಿ ತೆಗೆದುಹಾಕುವ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಮಕ್ಕಳಿಗೆ ಇಂಟರ್‌ನೆಟ್‌ ಪ್ರವೇಶ ನಿರಾಕರಿಸುವ ಬದಲು, ಇಂತಹ ಹಾನಿಕಾರಕ ವಿಷಯಗಳನ್ನು ಸೃಷ್ಟಿಸುವವರು, ಹಂಚುವವರು ಮತ್ತು ಅವುಗಳನ್ನು ತಡೆಯಲು ವಿಫಲವಾಗುವ ವೇದಿಕೆಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂಬುದಕ್ಕೆ ನ್ಯಾಯಾಲಯ ಒತ್ತು ನೀಡಿದೆ. ಈ ಸಂಬಂಧ ಅಗತ್ಯ ಮಾರ್ಗಸೂಚಿ ಮತ್ತು ನಿಯಮಗಳನ್ನು ರೂಪಿಸುವ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ.

ಇಂಟರ್‌ನೆಟ್‌ ಮಕ್ಕಳಿಗೆ ಶಿಕ್ಷಣ, ಮಾಹಿತಿ ಮತ್ತು ಅಭಿವ್ಯಕ್ತಿಗೆ ಪ್ರಮುಖ ಸಾಧನವಾಗಿದೆ. ವಿಶೇಷವಾಗಿ ದೂರದ ಪ್ರದೇಶಗಳಲ್ಲಿರುವ ಮಕ್ಕಳಿಗೆ ಅದು ಕಲಿಕೆಯ ಪ್ರಮುಖ ಮೂಲವಾಗಬಹುದು. ಹೀಗಾಗಿ, ಮಕ್ಕಳನ್ನು ಡಿಜಿಟಲ್‌ ಜಗತ್ತಿನಿಂದ ಸಂಪೂರ್ಣವಾಗಿ ದೂರವಿಡುವುದಕ್ಕಿಂತ ಸುರಕ್ಷಿತವಾಗಿ ಬಳಸಲು ನೆರವಾಗುವ ಕ್ರಮಗಳನ್ನು ರೂಪಿಸುವುದು ಅಗತ್ಯ ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್‌ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ ನಾಯಕಿ ಸೌಮ್ಯಾ ರೆಡ್ಡಿ ದಿಢೀರ್ ರಾಜಿನಾಮೆ!

ಮುಖ್ಯಮಂತ್ರಿಯೂ ಬಲಿಪಶುವಾಗಿರಬಹುದು, ರಾಜಕೀಯ ನಾಯಕತ್ವ ನಿಯಂತ್ರಣಕ್ಕೆ 'ಸ್ಟಿಂಗ್ ಆಪರೇಷನ್' ವಿಡಿಯೋ ಬಳಕೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

‘ನ್ಯಾಯಕ್ಕಾಗಿ ಹೋರಾಡುವ ಧೈರ್ಯವಿರಲಿ, ಕೇಳಿಸದ ಧ್ವನಿಗಳಿಗೂ ಕಿವಿಯಾಗಿ’: ಕಾನೂನು ಪದವೀಧರರಿಗೆ CJI ಸೂರ್ಯಕಾಂತ್‌ ಕರೆ

ದೇವರಾಯನದುರ್ಗ ಟ್ರೆಕ್ಕಿಂಗ್‌ ಹೋಗಿ ವಾಪಸ್‌ ಆಗುವಾಗ ದುರಂತ; ನೆಲಮಂಗಲ ಬಳಿ ಲಾರಿ ಡಿಕ್ಕಿಗೆ ಕೇರಳ ಮೂಲದ ಯುವತಿ ಬಲಿ

ರಷ್ಯಾ ವಸ್ತುಗಳ ಸುಂಕಗಳಿಗೆ ಡೊನಾಲ್ಡ್ ಟ್ರಂಪ್ ವಿನಾಯಿತಿ; ತೈಲ ಆಮದಿಗೆ ಭಾರತ ನಿಟ್ಟುಸಿರು