ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಕಾಕ್‌ರೋಚ್ ಜನತಾ ಪಾರ್ಟಿ (CJP) ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರ ನ್ಯಾಯಾಂಗ ಬಂಧನ ವಿಸ್ತರಣೆ ಕುರಿತು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಬುಧವಾರ ಆದೇಶ ಕಾಯ್ದಿರಿಸಿದ್ದಾರೆ.
ಇಬ್ಬರ ಜೈಲು ಕಸ್ಟಡಿಯನ್ನು ಇನ್ನೂ ಮೂರು ದಿನಗಳ ಕಾಲ ವಿಸ್ತರಿಸುವಂತೆ ದೆಹಲಿ ಪೊಲೀಸರು ಮನವಿ ಸಲ್ಲಿಸಿದ್ದಾರೆ. ಬುಧವಾರ ಇಬ್ಬರು ನಾಯಕರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ವೇಳೆ ಅವರ ಜಾಮೀನುದಾರರಿಗೆ ಸಂಬಂಧಿಸಿದ ದಾಖಲೆಗಳನ್ನೂ ಸಲ್ಲಿಸಲಾಯಿತು.
ಶಾಂತಿ ಕಾಪಾಡುವ ಸಂಬಂಧ ನೀಡಿದ್ದ ಬಾಂಡ್‌ಗಳ ಷರತ್ತುಗಳನ್ನು ಉಲ್ಲಂಘಿಸಿ, ಬೀಗ ಹಾಕಲಾಗಿದ್ದ ಗೇಟ್ ಹತ್ತಿ ಜಂತರ್ ಮಂತರ್ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಅಕ್ಟೋಬರ್ 13ರಂದು ದಾಸ್ ಮತ್ತು ರಂಕಾ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಈ ಹಿಂದೆ ಜಂತರ್ ಮಂತರ್ ಅನ್ನು ಪ್ರತಿಭಟನೆ ನಡೆಸಲು ಗೊತ್ತುಪಡಿಸಿದ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಲಾಗಿತ್ತು.
ಅಕ್ಟೋಬರ್ 14ರಂದು ಇಬ್ಬರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಕ್ಟೋಬರ್ 19ರಂದು ಮತ್ತೆ ಎರಡು ದಿನಗಳ ಕಾಲ ಬಂಧನ ವಿಸ್ತರಿಸಲಾಗಿತ್ತು. ಈ ಅವಧಿ ಬುಧವಾರ ಮುಕ್ತಾಯಗೊಳ್ಳಬೇಕಿತ್ತು.
ಇದಕ್ಕೂ ಮುನ್ನ, ದಾಸ್ ಮತ್ತು ರಂಕಾ ಅವರ ನ್ಯಾಯಾಂಗ ಬಂಧನದ ವಿಚಾರದಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಮೊದಲು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ನಡೆಯಲಿರುವ ವಿಚಾರಣೆಯ ಫಲಿತಾಂಶಕ್ಕಾಗಿ ಕಾಯುವಂತೆ ಸೂಚಿಸಿತ್ತು. ಅಲ್ಲಿಯೂ ತಮ್ಮ ಅಹವಾಲಿಗೆ ಪರಿಹಾರ ಸಿಗದಿದ್ದರೆ ಮೇಲ್ಮನವಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ತಿಳಿಸಿತ್ತು.
ಇದೀಗ ಇಬ್ಬರ ನ್ಯಾಯಾಂಗ ಬಂಧನವನ್ನು ವಿಸ್ತರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಆದೇಶದ ನಿರೀಕ್ಷೆಯಿದೆ.