ನವದೆಹಲಿ: ಜುಲೈನಲ್ಲಿ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನೇಮಿಸಿದ ಉನ್ನತ ಅಧಿಕಾರದ ವಿಚಾರಣಾ ಸಮಿತಿ ( HPEC) ಪೆಲೆಟ್ ಗನ್ ಬಳಕೆ ಮತ್ತು ಮಹಿಳಾ ಪ್ರತಿಭಟನಾಕಾರರ ಮೇಲಿನ ಕಿರುಕುಳದ ಕುರಿತು ಸಂತ್ರಸ್ತರ ವಾದಗಳನ್ನು ಆಲಿಸಲು ಮತ್ತು ಸಾಕ್ಷ್ಯಗಳನ್ನು ದಾಖಲಿಸಲು ಸಮಿತಿಯು ಅಕ್ಟೋಬರ್ 29 ಮತ್ತು 30 ರಂದು ಇಲ್ಲಿ ಎರಡು ದಿನಗಳ ವಿಚಾರಣೆ ನಡೆಸಲಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸಮಿತಿಯು 17 ರೌಸ್ ಅವೆನ್ಯೂ ಸಂಸ್ಥೆಯ ಶಿಕ್ಷಾ ಸದನ್ನಲ್ಲಿರುವ ತನ್ನ ಕಚೇರಿಯಲ್ಲಿ ಬೆಳಿಗ್ಗೆ 11 ರಿಂದ ತನ್ನ ಕಲಾಪಗಳನ್ನು ನಡೆಸಲಿದೆ ಎಂದು ಅವರು ಹೇಳಿದರು. ಸಾರ್ವಜನಿಕರು ಮತ್ತು ಹಿಂಸಾಚಾರದಿಂದ ಬಾಧಿತರಾದವರು ಅಕ್ಟೋಬರ್ 29 ಮತ್ತು 30 ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 3 ರವರೆಗೆ ದೂರುಗಳು ಅಥವಾ ಸಾಕ್ಷ್ಯಗಳನ್ನು ಸಲ್ಲಿಸಬಹುದಾಗಿದೆ.
ಸಮಿತಿಯು ಪೆಲೆಟ್ ಗನ್ಗಳ ಬಳಕೆ, ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಮಹಿಳಾ ಪ್ರತಿಭಟನಾಕಾರರ ಮೇಲಿನ ಕಿರುಕುಳ ಅಲ್ಲದೇ ಎರಡೂ ಕಡೆಗಳಲ್ಲಿ ಅತಿಯಾದ ಬಲಪ್ರಯೋಗ ಮತ್ತು ಆಸ್ತಿ ಹಾನಿಯ ಪ್ರಕರಣಗಳನ್ನು ನಿರ್ದಿಷ್ಟವಾಗಿ ಪರಿಶೀಲಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಆರ್ ಸುಭಾಷ್ ರೆಡ್ಡಿ ಅಧ್ಯಕ್ಷತೆಯಲ್ಲಿ ಐದು ಸದಸ್ಯರ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿದ್ದು, ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದ ಹೋರಾಟದ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಎಸಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಹಲವಾರು ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಜೊತೆಗೆ ಪೊಲೀಸ್ ಸಿಬ್ಬಂದಿ ವಿರುದ್ಧ ಹಿಂಸಾಚಾರದ ಆರೋಪಗಳನ್ನು ಹೊರಿಸಿದೆ.
ಸಮಿತಿಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರವಿಶಂಕರ್ ಝಾ, ದೆಹಲಿ ಹೈಕೋರ್ಟ್ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಶಾಲಿಂದರ್ ಕೌರ್, ಸಿಬಿಐನ ಮಾಜಿ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ ಮತ್ತು ಮೇಘಾಲಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಲ್ ಆರ್ ಬಿಷ್ಣೋಯ್ ಕೂಡ ಇದ್ದಾರೆ.
ಸಾರ್ವಜನಿಕರ ಭಾಗವಹಿಸುವಿಕೆ ಉತ್ತೇಜಿಸಲು ಮತ್ತು ದುರ್ಬಲ ಸಾಕ್ಷಿಗಳನ್ನು ರಕ್ಷಿಸಲು, ಸಮಿತಿಯು 'hpec.nic.in' ಎಂಬ ಆನ್ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಸಂತ್ರಸ್ತರು, ಸಾಕ್ಷಿಗಳು ಮತ್ತು ಸಂಬಂಧಿತ ಪಾಲುದಾರರು ಈ ಪೋರ್ಟಲ್ನಲ್ಲಿ ಲಭ್ಯವಿರುವ ನಿಗದಿತ ನಮೂನೆಗಳನ್ನು ಬಳಸಿಕೊಂಡು ತಮ್ಮ ಹೇಳಿಕೆಗಳು, ಮನವಿಗಳು ಮತ್ತು ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು.
ದುರ್ಬಲ ಸಾಕ್ಷಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಹಾಗೂ ಸಂತ್ರಸ್ತರು ಮತ್ತು ಇತರ ಸಂಬಂಧಿತ ಪಾಲುದಾರರು ದಾಖಲೆಗಳನ್ನು ಸಲ್ಲಿಸಲು ಅನುಕೂಲವಾಗುವಂತೆ, ಸುಪ್ರೀಂ ಕೋರ್ಟ್ನ ನಿರ್ದೇಶನಗಳಿಗೆ ಅನುಗುಣವಾಗಿ ಈ ಆನ್ಲೈನ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ" ಎಂದು ಈ ಹಿಂದೆ ಹೊರಡಿಸಲಾದ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ದುರ್ಬಲ ಸಾಕ್ಷಿಗಳಿಗೆ ಸಂಪೂರ್ಣ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್ HPEC ಗೆ ನಿರ್ದೇಶಿಸಿದೆ. ಸಾಕ್ಷಿಗಳ ಗುರುತು ಗೌಪ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಅವರು ಸಲ್ಲಿಸುವ ಹೇಳಿಕೆಗಳು ಮತ್ತು ಸಾಕ್ಷ್ಯಗಳನ್ನು ಅತ್ಯಂತ ಗೌಪ್ಯವಾಗಿಡಬೇಕೆಂದು ನ್ಯಾಯಾಲಯ ಸೂಚಿಸಿದೆ.
ಜುಲೈ 20 ರಂದು CJP ನೇತೃತ್ವದಲ್ಲಿ ಸಂಸತ್ತಿನ ಕಡೆಗೆ ನಡೆಸುತ್ತಿದ್ದ ಮೆರವಣಿಗೆಯ ವೇಳೆ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದವು. ಈ ಸಂದರ್ಭದಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಬಳಸಿದರು ಮತ್ತು ಲಾಠಿಚಾರ್ಜ್ ನಡೆಸಿದರು. ಪೆಲೆಟ್ ಗನ್ಗಳ (ಸಣ್ಣ ಲೋಹದ ಗುಂಡುಗಳನ್ನು ಸಿಡಿಸುವ ಬಂದೂಕುಗಳು) ಬಳಕೆಯಿಂದಾಗಿ ಗಾಯಗೊಂಡ ಕೆಲವು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಜೂನ್ 20 ರಂದು ಜಂತರ್ ಮಂತರ್ನಲ್ಲಿ ಪ್ರಾರಂಭವಾಗಿ ಹಲವು ನಗರಗಳಿಗೆ ವ್ಯಾಪಿಸಿದ್ದ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಯು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ ಜುಲೈ 25 ರಂದು ಕೊನೆಗೊಂಡಿತು.