ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಚೊಚ್ಚಲ ಎಕ್ಸ್ ಪೋಸ್ಟ್ ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೊಂದಿಗಿನ ತಮ್ಮ ಪ್ರೇಮಕಥೆ ಪ್ರಾರಂಭವಾಗಿದ್ದು ಹೇಗೆ ಎಂಬುದನ್ನು ಹಂಚಿಕೊಂಡಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೊಂದಿಗಿನ ತಮ್ಮ ಪ್ರೇಮಕಥೆ 1965 ರಲ್ಲಿ ಇಂಗ್ಲೆಂಡ್ನ ಕೇಂಬ್ರಿಡ್ಜ್ನಲ್ಲಿರುವ ದಿ ವಾರ್ಸಿಟಿ ಎಂಬ ಸಣ್ಣ ಗ್ರೀಕ್ ರೆಸ್ಟೋರೆಂಟ್ನಲ್ಲಿ ಹೇಗೆ ಪ್ರಾರಂಭವಾಯಿತು ಎಂಬುದನ್ನು ನೆನಪಿಸಿಕೊಳ್ಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಸೋನಿಯಾ ಗಾಂಧಿ ಹಂಚಿಕೊಂಡಿದ್ದಾರೆ.
ಎಕ್ಸ್ನಲ್ಲಿ ತಮ್ಮ ಚೊಚ್ಚಲ ಪೋಸ್ಟ್ನಲ್ಲಿ, ಸೋನಿಯಾ ಗಾಂಧಿ ಅವರು ನವೆಂಬರ್ 10 ರಂದು ಬಿಡುಗಡೆಯಾಗಲಿರುವ ತಮ್ಮ ಮುಂಬರುವ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಗ್ಗೆ ಮಾತನಾಡಿದ್ದಾರೆ. ಅವರು ರಾಜೀವ್ ಗಾಂಧಿಯವರೊಂದಿಗಿನ ತಮ್ಮ ಜೀವನದ ವೈಯಕ್ತಿಕ ನೆನಪುಗಳನ್ನು ಸಹ ಹಂಚಿಕೊಂಡಿದ್ದಾರೆ. ನೆನಪುಗಳು ಮತ್ತು ಹಳೆಯ ಛಾಯಾಚಿತ್ರಗಳ ಮೂಲಕ ಅವರ ಸಂಬಂಧದ ಆರಂಭಿಕ ದಿನಗಳ ಒಂದು ನೋಟವನ್ನು ನೀಡಿದ್ದಾರೆ.
"ಕೇಂಬ್ರಿಡ್ಜ್ನ ಒಂದು ಚಿಕ್ಕ ಗ್ರೀಕ್ ರೆಸ್ಟೋರೆಂಟ್ನಲ್ಲಿ ನನ್ನ ಪ್ರೇಮಯಾತ್ರೆ ಆರಂಭವಾಯಿತು. ರಾಜೀವ್ ಮತ್ತು ನಾನು ಪ್ರೀತಿ, ನಗು ಹಾಗೂ ನೆನಪುಗಳಿಂದ ತುಂಬಿದ ಒಂದು ಲೋಕವನ್ನು ಸೃಷ್ಟಿಸಿಕೊಂಡೆವು. ನವೆಂಬರ್ 10ರಂದು, ಆ ಲೋಕವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ," ಎಂದು ಸೋನಿಯಾ ಗಾಂಧಿ ಹೇಳಿದರು.
1965ರಲ್ಲಿ ಕೇಂಬ್ರಿಡ್ಜ್ನ ಆ ಗ್ರೀಕ್ ರೆಸ್ಟೋರೆಂಟ್ನಲ್ಲಿ ನಡೆದ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡ ಸೋನಿಯಾ, ರಾಜೀವ್ ಗಾಂಧಿ ಅವರ ಬಗ್ಗೆ ಮತ್ತು ಅವರಲ್ಲಿನ ಯಾವ ಗುಣಗಳು ತಮ್ಮನ್ನು ಆಕರ್ಷಿಸಿದವು ಎಂಬುದರ ಕುರಿತು ಮಾತನಾಡಿದರು.
"ಖಂಡಿತವಾಗಿಯೂ ಅವರು ತುಂಬಾ ಸುಂದರವಾಗಿದ್ದರು," ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಆ ದಿನಗಳಲ್ಲಿ ಇಂಗ್ಲೆಂಡ್ನಲ್ಲಿ ಒಳ್ಳೆಯ ಆಹಾರವನ್ನು ಕಂಡುಕೊಳ್ಳುವುದು ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ಅವರು ನೆನಪಿಸಿಕೊಂಡರು. ಅಲ್ಲಿ ರೆಸ್ಟೋರೆಂಟ್ಗಳು ಬಹಳ ಕಡಿಮೆ ಇದ್ದವು, ಆದರೆ ಅಂತಿಮವಾಗಿ ಅವರು ಗ್ರೀಕ್ ರೆಸ್ಟೋರೆಂಟ್ ಒಂದನ್ನು ಕಂಡುಕೊಂಡರು; ಅಲ್ಲಿಗೆ ಭಾರತೀಯ ಮತ್ತು ಇಟಾಲಿಯನ್ ವಿದ್ಯಾರ್ಥಿಗಳು ಹೆಚ್ಚಾಗಿ ಹೋಗುತ್ತಿದ್ದರು. ತಮ್ಮ ಸಂಬಂಧದ ಆರಂಭಕ್ಕೆ ಆ ರೆಸ್ಟೋರೆಂಟ್ ಹೇಗೆ ವೇದಿಕೆಯಾಯಿತು ಎಂಬುದನ್ನು ಅವರು ಸ್ಮರಿಸಿಕೊಂಡರು.
"ಅದೇ ರೆಸ್ಟೋರೆಂಟ್ನಲ್ಲಿ ನಾನು ರಾಜೀವ್ ಅವರನ್ನು ಭೇಟಿಯಾದೆ. ಅವರನ್ನು ಮೊದಲ ಬಾರಿ ನೋಡಿದಾಗ, ಇವರ ಜೊತೆ ಇರಲು ನನಗೆ ತುಂಬಾ ಇಷ್ಟವಾಗುತ್ತದೆ ಎಂದು ತಕ್ಷಣವೇ ಅನ್ನಿಸಿತು. ಅವರಿಗೆ ಕೂಡ ಹಾಗೆಯೇ ಅನಿಸಿತ್ತು ಎಂದು ನಂತರ ತಿಳಿಯಿತು. ನಮ್ಮಿಬ್ಬರಿಗೂ ಪರಿಚಯವಿದ್ದ ಸ್ನೇಹಿತರೊಬ್ಬರು ನಮ್ಮನ್ನು ಪರಿಚಯಿಸಿದರು, ಆ ಬಳಿಕ ನಾವು ಸ್ನೇಹಿತರಾದೆವು. ನಾವು ಸ್ನೇಹಿತರೊಂದಿಗೆ ಪಾರ್ಟಿಗಳಿಗೆ ಹೋಗುತ್ತಿದ್ದೆವು," ಎಂದು ಸೋನಿಯಾ ನೆನಪಿಸಿಕೊಂಡರು.
ರಾಜೀವ್ ಗಾಂಧಿ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾ, ಅವರ ಸೌಮ್ಯ ಸ್ವಭಾವವು ಮೊದಲಿನಿಂದಲೂ ತನ್ನ ಮೇಲೆ ಗಾಢವಾದ ಪ್ರಭಾವ ಬೀರಿತ್ತು ಎಂದು ಅವರು ಹೇಳಿದರು.
"ಅವರು ನೋಡಲು ಬಹಳ ಸೌಮ್ಯವಾಗಿದ್ದರು. ಅವರು ತುಂಬಾ ಸುಂದರವಾಗಿದ್ದರು ಎಂಬುದು ನಿಜ, ಆದರೆ ಅವರ ಆ ಸೌಮ್ಯತೆ ಎದ್ದು ಕಾಣುತ್ತಿತ್ತು. ಅದು ನನ್ನ ಮನಸ್ಸನ್ನು ಆಳವಾಗಿ ಮುಟ್ಟಿತು. ಅವರನ್ನು ಮೊದಲ ಬಾರಿ ಭೇಟಿಯಾದ ಆ ಕ್ಷಣವನ್ನು ನಾನು ಎಂದಿಗೂ ಮರೆಯಲಾರೆ," ಎಂದು ಅವರು ಹೇಳಿದರು.
'ಎಕ್ಸ್' (X) ಸಾಮಾಜಿಕ ಜಾಲತಾಣದಲ್ಲಿ ಸೋನಿಯಾ ಗಾಂಧಿ ಮಾಡಿದ ಈ ಪೋಸ್ಟ್, ಆ ವೇದಿಕೆಯಲ್ಲಿ ಅವರ ಮೊದಲ ಪೋಸ್ಟ್ ಆಗಿದೆ.
ಗುರುವಾರವಷ್ಟೇ ಅವರು ಇನ್ಸ್ಟಾಗ್ರಾಮ್ಗೂ ಸೇರ್ಪಡೆಗೊಂಡಿದ್ದರು. ಅಲ್ಲಿ ಅವರು ತಮ್ಮ ಮುಂಬರುವ ಆತ್ಮಚರಿತ್ರೆಯ ಬಗ್ಗೆ ಪರಿಚಯ ನೀಡುತ್ತಾ, ಅದರ first look ಓದುಗರಿಗೆ ಹಂಚಿಕೊಳ್ಳಲು ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
"ಎಲ್ಲರಿಗೂ ನಮಸ್ಕಾರ, ಈ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಸಂತೋಷ ಮತ್ತು ಕೃತಜ್ಞತೆ ಇದೆ. ಇದು, ನನ್ನ ಪುಸ್ತಕ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ನ ಮೊದಲ ನೋಟ. ಇದು ಪ್ರೀತಿ, ಕರ್ತವ್ಯ, ನಷ್ಟ ಮತ್ತು ತಮಗೆ ಸೇರಿದ್ದೊಂದು ಜಾಗವನ್ನು ಕಂಡುಕೊಳ್ಳುವ ಕಥೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಉತ್ಸುಕಳಾಗಿದ್ದೇನೆ," ಎಂದು ಸೋನಿಯಾ ಗಾಂಧಿ ತಮ್ಮ ಮೊದಲ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಸೋನಿಯಾ ಗಾಂಧಿ ತಮ್ಮ ಪುಸ್ತಕದ ಮೊದಲ ಪ್ರತಿಗಳನ್ನು ಸ್ವೀಕರಿಸುತ್ತಿರುವುದನ್ನು ಕಾಣಬಹುದು. ಅವರು ತಮ್ಮ ಮಗಳು ಹಾಗೂ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸಿಹಿತಿಂಡಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಅಪ್ಪಿಕೊಳ್ಳುವುದನ್ನೂ ಕಾಣಬಹುದು.
ಈ ಪುಸ್ತಕ ನವೆಂಬರ್ 10 ರಂದು ಬಿಡುಗಡೆಯಾಗಲಿದ್ದು, ಇದೀಗ ಮುಂಗಡ ಬುಕಿಂಗ್ (pre-orders) ಆರಂಭವಾಗಿದೆ. ಈ ಆತ್ಮಚರಿತ್ರೆಯನ್ನು 'ಆಲ್ಫ್ರೆಡ್ ಎ. ನಾಫ್' (Alfred A. Knopf) ಜಾಗತಿಕವಾಗಿ ಪ್ರಕಟಿಸುತ್ತಿದ್ದು, ಭಾರತದಲ್ಲಿ 'ಹಾರ್ಪರ್ ಕಾಲಿನ್ಸ್ ಇಂಡಿಯಾ' (HarperCollins India) ಮೂಲಕ ಬಿಡುಗಡೆಯಾಗುತ್ತಿದೆ. 544 ಪುಟಗಳನ್ನು ಹೊಂದಿರುವ ಈ ಪುಸ್ತಕವು, ಯುದ್ಧೋತ್ತರ ಇಟಲಿಯಲ್ಲಿ ಕಳೆದ ಸೋನಿಯಾ ಗಾಂಧಿ ಅವರ ಬಾಲ್ಯದಿಂದ ಹಿಡಿದು, ರಾಜೀವ್ ಗಾಂಧಿ ಅವರೊಂದಿಗಿನ ಭೇಟಿ ಮತ್ತು ನಂತರದ ಅವರ ಸಂಬಂಧದವರೆಗಿನ ಪಯಣವನ್ನು ವಿವರಿಸುತ್ತದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳಂತಹ, ಅವರ ಜೀವನವನ್ನು ರೂಪಿಸಿದ ವೈಯಕ್ತಿಕ ದುರಂತಗಳ ಬಗ್ಗೆಯೂ ಇದು ಬೆಳಕು ಚೆಲ್ಲುತ್ತದೆ ಹಾಗೂ ತರುವಾಯ ಭಾರತೀಯ ರಾಜಕೀಯದಲ್ಲಿ ಅವರು ವಹಿಸಿದ ಪಾತ್ರವನ್ನು ತಿಳಿಸುತ್ತದೆ.