ಗೊಂಡಿಯಾ: ದಿನವಿಡೀ ಕಷ್ಟಪಟ್ಟು ದುಡಿದು ಗಾಢ ನಿದ್ರೆಯಲ್ಲಿದ್ದ ಕಾರ್ಮಿಕರ ಮೇಲೆ ದಾಳಿ ಮಾಡಲು ಬಂದ ಚಿರತೆಯನ್ನು ಕಾರು ಚಾಲಕ ತನ್ನ ಸಮಯ ಪ್ರಜ್ಞೆಯಿಂದ ರಕ್ಷಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನವೇಗಾಂವ್ಬಾಂಧ್ ರಾಷ್ಟ್ರೀಯ ಉದ್ಯಾನದ ಸಮೀಪ ಈ ಘಟನೆ ನಡೆದಿದ್ದು, ಆಹಾರ ಅರಸುತ್ತಾ ಬಂದಿದ್ದ ಚಿರತೆಯೊಂದು ಮಲಗಿದ್ದ ಕಾರ್ಮಿಕರ ಬಳಿ ಬಂದಿದ್ದು, ಈ ವೇಳೆ ಅದೇ ಸಮಯದಲ್ಲಿ ಅಲ್ಲಿಗೆ ಬಂದ ಕಾರು ಚಾಲಕ ತನ್ನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿಸಿದ್ದಾನೆ.
ಕಾರ್ಮಿಕರ ಬಳಿ ಚಿರತೆ ಬರುತ್ತಿದ್ದಂತೆಯೇ ಅಪಾಯ ಮನಗಂಡ ಚಾಲಕ ಕೂಡಲೇ ನಿರಂತರವಾಗಿ ಹಾರ್ನ್ ಬಾರಿಸಿ ಅದನ್ನು ಓಡಿಸುತ್ತಿರುವ ಮೈ ಜುಮ್ಮೆನಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭತ್ತದ ಕೊಯ್ಲಿಗೆ ಬಂದಿದ್ದ ಕಾರ್ಮಿಕರು
ಗೊಂಡಿಯಾ ಜಿಲ್ಲೆಯಲ್ಲಿ ಸದ್ಯ ಭತ್ತದ ಕೊಯ್ಲು ಹಾಗೂ ಒಕ್ಕಣೆ ಕಾರ್ಯಗಳು ನಡೆಯುತ್ತಿವೆ. ಕೃಷಿ ಚಟುವಟಿಕೆಗಳಿಗೆ ನೆರವಾಗಲು ವಿವಿಧ ಪ್ರದೇಶಗಳಿಂದ ಕಾರ್ಮಿಕರು ಆಗಮಿಸುತ್ತಿದ್ದಾರೆ. ಪಂಜಾಬ್ನಿಂದ ಬಂದಿದ್ದ ಕಾರ್ಮಿಕರ ತಂಡವು ಭತ್ತದ ಒಕ್ಕಣೆಗಾಗಿ ಮೂರು ಯಂತ್ರಗಳನ್ನು ತಂದಿತ್ತು.
ನವೇಗಾಂವ್ಬಾಂಧ್ ರಾಷ್ಟ್ರೀಯ ಉದ್ಯಾನವನದ ಸಮೀಪ ಅರಣ್ಯ ಇಲಾಖೆ ಕಾಲೊನಿ ಬಳಿಯಲ್ಲಿ ತಾತ್ಕಾಲಿಕವಾಗಿ ನೆಲೆಸಿತ್ತು. ದಿನದ ಕೆಲಸ ಮುಗಿಸಿ ಊಟ ಮಾಡಿದ ಬಳಿಕ ಕಾರ್ಮಿಕರು ಬಯಲಿನಲ್ಲೇ ಮಲಗಿದ್ದರು. ಈ ಸಂದರ್ಭ ಚಿರತೆ ಅಲ್ಲಿಗೆ ಬಂದಿತ್ತು.
ಕಾರ್ಮಿಕರತ್ತ ದಾಳಿ ಮಾಡಲು ಬಂದ ಚಿರತೆ
ಮೊಬೈಲ್ ಫೋನ್ನಲ್ಲಿ ಸೆರೆಯಾಗಿರುವ ದೃಶ್ಯಗಳ ಪ್ರಕಾರ, ದಿನವಿಡೀ ಕೆಲಸ ಮಾಡಿ ದಣಿದಿದ್ದ ಕಾರ್ಮಿಕರು ರಾತ್ರಿ ಊಟ ಮುಗಿಸಿ ಬಯಲಿನಲ್ಲೇ ಮಲಗಿದ್ದರು. ಈ ವೇಳೆ ಅಲ್ಲಿಗೆ ಬಂದ ಚಿರತೆಯೊಂದು ಅವರತ್ತ ನಿಧಾನವಾಗಿ ಹೆಜ್ಜೆ ಹಾಕಿದೆ.
ನಿದ್ರೆಯಲ್ಲಿದ್ದ ಕಾರ್ಮಿಕರ ಸಮೀಪಕ್ಕೆ ಬಂದ ಚಿರತೆ ಏಕಾಏಕಿ ಅವರತ್ತ ನುಗ್ಗಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಕಾರು ಚಾಲಕ ಮನೀಶ್ ನೆವಾರೆ ಅವರ ಗಮನಕ್ಕೆ ಚಿರತೆ ಬಂದಿದೆ. ಅಪಾಯವನ್ನು ಅರಿತ ಅವರು ತಕ್ಷಣ ಕಾರಿನ ಹಾರ್ನ್ ಅನ್ನು ಪದೇಪದೆ ಬಾರಿಸಿದ್ದಾರೆ.
ಹಾರ್ನ್ ಸದ್ದಿನಿಂದ ಬೆಚ್ಚಿಬಿದ್ದ ಚಿರತೆ ಅಲ್ಲಿಂದ ಓಡಿಹೋಗಿದೆ. ಬಳಿಕ ಮನೀಶ್ ಅವರು ಕಾರಿನಲ್ಲಿ ಚಿರತೆಯನ್ನು ಹಿಂಬಾಲಿಸಿದ್ದು, ಕಾರಿನ ಹೆಡ್ಲೈಟ್ ಬೆಳಕಿನಲ್ಲಿ ಚಿರತೆಯ ಚಲನವಲನಗಳು ಸ್ಪಷ್ಟವಾಗಿ ಕಾಣಿಸಿಕೊಂಡಿವೆ.
ಈ ಘಟನೆಯ ಕುರಿತು ಮಾತನಾಡಿರುವ ಮನೀಶ್ ನೆವಾರೆ, ಸ್ನೇಹಿತರೊಂದಿಗೆ ಕಾರಿನಲ್ಲಿ ಸುತ್ತಾಡಲು ಹೋಗಿದ್ದಾಗ ಚಿರತೆ ಕಾಣಿಸಿಕೊಂಡಿತು ಎಂದು ತಿಳಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನಿರಂತರವಾಗಿ ಹಾರ್ನ್ ಬಾರಿಸುತ್ತಾ ಚಿರತೆಯನ್ನು ಕಾರಿನಲ್ಲಿ ಹಿಂಬಾಲಿಸಿದ್ದಾಗಿ ಹೇಳಿದ್ದಾರೆ.
ಅರಣ್ಯ ಪ್ರದೇಶದ ಬಳಿ ವಾಸಿಸುವವರಿಗೆ ಎಚ್ಚರಿಕೆ
ಈ ಘಟನೆ ಅರಣ್ಯ ಪ್ರದೇಶಗಳ ಸಮೀಪ, ವಿಶೇಷವಾಗಿ ರಾತ್ರಿ ವೇಳೆ ಬಯಲಿನಲ್ಲಿ ವಾಸಿಸುವ ಕಾರ್ಮಿಕರ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ. ಅರಣ್ಯ ಪ್ರದೇಶದ ಸುತ್ತಮುತ್ತ ವನ್ಯಜೀವಿಗಳ ಸಂಚಾರವಿರುವುದರಿಂದ ಕತ್ತಲಾದ ಬಳಿಕ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅರಣ್ಯ ಸಿಬ್ಬಂದಿ ಜನರಿಗೆ ಸಲಹೆ ನೀಡಿದ್ದಾರೆ. ನವೇಗಾಂವ್ಬಾಂಧ್ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತ ಚಿರತೆ ಸೇರಿದಂತೆ ವನ್ಯಜೀವಿಗಳ ಸಂಚಾರದ ಕುರಿತು ಸ್ಥಳೀಯ ನಿವಾಸಿಗಳಲ್ಲಿಯೂ ಆತಂಕ ವ್ಯಕ್ತವಾಗಿದೆ.