ಅಭಿಜಿತ್ ದೀಪ್ಕೆ 
ದೇಶ

'ಸಾವಿರಾರು ಪೋಸ್ಟ್‌ಗಳು ಮಾಯ': 'ಖಾತೆಗಳನ್ನು ತೆಗೆದುಹಾಕಿದ ಮಾತ್ರಕ್ಕೆ ಪ್ರಶ್ನೆಗಳು ಮಾಯವಾಗಲ್ಲ'; ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ!

ಕಾನೂನು ಸುದ್ದಿಗಳ ವೆಬ್‌ಸೈಟ್ 'ಲೈವ್‌ಲಾ' (LiveLaw) ಕೂಡ, ಸುಪ್ರೀಂ ಕೋರ್ಟ್‌ನಲ್ಲಿ ಭಾರತೀಯ ಚುನಾವಣಾ ಆಯೋಗ (ECI) ಸಲ್ಲಿಸಿದ ಅಫಿಡವಿಟ್ ಕುರಿತಾದ ತಮ್ಮ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂ ತೆಗೆದುಹಾಕಿದೆ ಎಂದು ತಿಳಿಸಿದೆ.

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಸರ್ಕಾರದ ವಿರೋಧಿ ಪೋಸ್ಟ್‌ಗಳ ವಿರುದ್ಧ ಕೇಂದ್ರ ಸರ್ಕಾರವು ಕಠಿಣ ಕ್ರಮ ಕೈಗೊಂಡಿದೆ. ಸರ್ಕಾರ ಪ್ರತಿದಿನ ಸಾವಿರಾರು ಟೀಕಾತ್ಮಕ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಬುಧವಾರ ಆರೋಪಿಸಿದ್ದಾರೆ.

'ಇನ್‌ಸ್ಟಾಗ್ರಾಂ ವಿರುದ್ಧದ ಈ ಕಠಿಣ ಕ್ರಮಗಳು ಫಲ ನೀಡುವುದಿಲ್ಲ! ಸರ್ಕಾರವು ಪ್ರತಿದಿನ ಸಾವಿರಾರು ಪೋಸ್ಟ್‌ಗಳು ಮತ್ತು ಖಾತೆಗಳನ್ನು ತೆಗೆದುಹಾಕುತ್ತಿದೆ. ಆದರೆ ಅದೊಂದು ಮೂಲಭೂತ ಅಂಶವನ್ನು ಮರೆಯುತ್ತಿರುವಂತಿದೆ. ಇನ್‌ಸ್ಟಾಗ್ರಾಂ ಎಂಬುದು ಕೇವಲ ಒಂದು ವೇದಿಕೆಯಾಗಿದ್ದು, ಜನರು ಅಲ್ಲಿ ತಮ್ಮ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆ ಪ್ರಶ್ನೆಗಳ ಹಿಂದಿರುವ ಕಾರಣಗಳು ಸಾಮಾಜಿಕ ಜಾಲತಾಣಗಳ ವ್ಯಾಪ್ತಿಯನ್ನು ಮೀರಿದವು; ಹೀಗಾಗಿ, ಖಾತೆಗಳನ್ನು ತೆಗೆದುಹಾಕಿದ ಮಾತ್ರಕ್ಕೆ ಆ ಸಮಸ್ಯೆಗಳು ಮಾಯವಾಗುವುದಿಲ್ಲ' ಎಂದು ದೀಪ್ಕೆ ಎಕ್ಸ್ ಖಾತೆಯಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಅಲ್ಲದೆ, 'ವಾಸ್ತವದಲ್ಲಿ, ಈ ಸೆನ್ಸಾರ್‌ಶಿಪ್ (ನಿರ್ಬಂಧ) ಸರ್ಕಾರವು ಯಾರಿಗೆ ಉತ್ತರದಾಯಿ ಆಗಿರಬೇಕೋ, ಅಂತಹ ಜನರಲ್ಲೇ ಇನ್ನಷ್ಟು ಅಪನಂಬಿಕೆಯನ್ನು ಉಂಟುಮಾಡುವ ಅಪಾಯವನ್ನು ಹೊಂದಿದೆ' ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ದೀಪ್ಕೆ ಅವರ ಸಹವರ್ತಿ ಅಶುತೋಷ್ ರಂಕಾ ಕೂಡ, 'ಭಾರತದಲ್ಲಿ ಸಾವಿರಾರು ಇನ್‌ಸ್ಟಾಗ್ರಾಂ ಖಾತೆಗಳ ಮೇಲೆ ನಿರ್ಬಂಧ ಹೇರಲಾಗಿದೆ ಮತ್ತು ಲಕ್ಷಾಂತರ ವಿಡಿಯೋಗಳನ್ನು ತೆಗೆದುಹಾಕಲಾಗಿದೆ' ಎಂದು ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸರ್ಕಾರದ ಟೀಕಾಕಾರರು ತಮ್ಮ ಪೋಸ್ಟ್‌ಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ದೂರು ನೀಡುತ್ತಿರುವ ನಡುವೆಯೇ, ಸಿಜೆಪಿ ನಾಯಕರು ಸೆನ್ಸಾರ್‌ಶಿಪ್ ಕುರಿತು ಆರೋಪಿಸಿದ್ದಾರೆ.

ವ್ಯಂಗ್ಯ ಬರಹಗಾರ ಮತ್ತು ಗೀತರಚನೆಕಾರ ವರುಣ್ ಗ್ರೋವರ್ ಕೂಡ ತಮ್ಮ ಕವಿತೆಯೊಂದಕ್ಕೆ ಸಂಬಂಧಿಸಿದ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂ ತೆಗೆದುಹಾಕಿದೆ ಎಂದು ದೂರಿದ್ದಾರೆ. ಸರ್ಕಾರದ '2047ರ ವಿಕಸಿತ ಭಾರತ'ದ ಭರವಸೆಯ ಕುರಿತು ಗ್ರೋವರ್ ಬರೆದಿದ್ದ ವ್ಯಂಗ್ಯ ಕವಿತೆಯೇ ಆ ಪೋಸ್ಟ್ ಆಗಿತ್ತು.

'ಈ ಮುಗ್ಧ ಪುಟ್ಟ ಕವಿತೆಯ ಸಂಗೀತ ರೂಪವನ್ನು ಹೇಡಿ ಸರ್ಕಾರವೊಂದು ಇನ್‌ಸ್ಟಾಗ್ರಾಂನಿಂದ ತೆಗೆದುಹಾಕಿದೆ. ಬಹುಶಃ 2047ರಲ್ಲಿ ಈ ನಿಷೇಧವನ್ನು ಹಿಂಪಡೆಯಬಹುದು' ಎಂದು ವರುಣ್ ಗ್ರೋವರ್ 'ಎಕ್ಸ್'ನಲ್ಲಿ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಇದರೊಂದಿಗೆ, ಇನ್‌ಸ್ಟಾಗ್ರಾಮ್‌ನಿಂದ ಪೋಸ್ಟ್ ತೆಗೆದುಹಾಕಿರುವ ಸ್ಕ್ರೀನ್‌ಶಾಟ್‌ಗಳನ್ನೂ ಅವರು ಲಗತ್ತಿಸಿದ್ದಾರೆ.

ವರುಣ್ ಗ್ರೋವರ್ ಅವರ ಪೋಸ್ಟ್‌ಗೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಂ ಕಳುಹಿಸಿದ ಸಂದೇಶದಲ್ಲಿ, ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಅಡಿಯಲ್ಲಿನ ಕಾನೂನುಬದ್ಧ ಅವಶ್ಯಕತೆಯ ಕಾರಣದಿಂದಾಗಿ ಈ ಪೋಸ್ಟ್ ಅನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.

ಮತ್ತೊಬ್ಬ ವ್ಯಂಗ್ಯಚಿತ್ರಕಾರ/ವಿಡಂಬನಕಾರರಾದ 'ದೇಶಭಕ್ತ' (Deshbhakt) ಕೂಡ ತಮ್ಮ ಕಂಟೆಂಟ್ ಅನ್ನು ಸೆನ್ಸಾರ್ ಮಾಡಲಾಗಿದೆ ಎಂದು ದೂರಿದ್ದಾರೆ. 'ಅತಿಯಾದ ಆತಂಕದಲ್ಲಿರುವ ಮೋದಿ ಸರ್ಕಾರವು ಇನ್‌ಸ್ಟಾಗ್ರಾಂನಲ್ಲಿ ಹುಚ್ಚೆದ್ದು ವರ್ತಿಸುತ್ತಿದೆ - 'ಸರ್ವೋಚ್ಚ ನಾಯಕ'ರ ಬಗ್ಗೆ ಸ್ವಲ್ಪವೇ ಟೀಕೆ ಮಾಡುವ ಯಾವುದೇ ಕಂಟೆಂಟ್ ಅನ್ನು ಕೂಡ ತೆಗೆದುಹಾಕಲಾಗುತ್ತಿದೆ. ಕೊನೆಗೆ ತಮಾಷೆಗಳನ್ನು ಕೂಡ ಬಿಡುತ್ತಿಲ್ಲ' ಎಂದು ಅವರು ಪೋಸ್ಟ್ ಒಂದರಲ್ಲಿ ಬರೆದಿದ್ದಾರೆ.

ಕಾನೂನು ಸುದ್ದಿಗಳ ವೆಬ್‌ಸೈಟ್ 'ಲೈವ್‌ಲಾ' (LiveLaw) ಕೂಡ, ಸುಪ್ರೀಂ ಕೋರ್ಟ್‌ನಲ್ಲಿ ಭಾರತೀಯ ಚುನಾವಣಾ ಆಯೋಗ (ECI) ಸಲ್ಲಿಸಿದ ಅಫಿಡವಿಟ್ ಕುರಿತಾದ ತಮ್ಮ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂ ತೆಗೆದುಹಾಕಿದೆ ಎಂದು ತಿಳಿಸಿದೆ.

'ಸುಪ್ರೀಂ ಕೋರ್ಟ್‌ನಲ್ಲಿ ಭಾರತೀಯ ಚುನಾವಣಾ ಆಯೋಗ ಸಲ್ಲಿಸಿದ ಅಫಿಡವಿಟ್ ಕುರಿತು 'LiveLaw'ನ ಅಧಿಕೃತ ಪುಟದಲ್ಲಿ ಪೋಸ್ಟ್ ಮಾಡಲಾಗಿದ್ದ ರೀಲ್ ಅನ್ನು Instagram ತೆಗೆದುಹಾಕಿದೆ. ECIಯ ನಿಲುವನ್ನು ವಿವರಿಸುವ ಉದ್ದೇಶವನ್ನು ಮಾತ್ರ ಹೊಂದಿದ್ದ ಈ ರೀಲ್ ಅನ್ನು, 'ಈ ವಿಷಯವನ್ನು ನಿರ್ಬಂಧಿಸುವಂತೆ ನಮಗೆ ಕಾನೂನುಬದ್ಧ ವಿನಂತಿ ಬಂದಿದೆ' ಎಂದು ತಿಳಿಸಿ Instagram ತೆಗೆದುಹಾಕಿದೆ' ಎಂದು 'LiveLaw' 'X'ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದೆ.

ಗಮನಾರ್ಹ ಸಂಗತಿಯೆಂದರೆ, 'ಸಿಜೆಪಿ' ಒಂದು ಇನ್‌ಸ್ಟಾಗ್ರಾಂ ಚಳುವಳಿಯಾಗಿ ಪ್ರಾರಂಭಗೊಂಡು, ಕೆಲವೇ ದಿನಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಗಳಿಸುವ ಮೂಲಕ ಅಪಾರ ಜನಪ್ರಿಯತೆಯನ್ನು ಪಡೆಯಿತು. ಈ ಚಳುವಳಿಯು 'ನೀಟ್' (NEET) ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಗಳಿಗೆ ನೇತೃತ್ವ ವಹಿಸಿತು; ಇದರ ಪರಿಣಾಮವಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕಾಯಿತು. ಇತ್ತೀಚೆಗೆ, ಸಿಜೆಪಿ ರಾಜಧಾನಿ ಹಾಗೂ ಇತರ ಕಡೆಗಳಲ್ಲಿ 'ಸಿಇಸಿ' ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಾಟಾ ಸಮೂಹದಲ್ಲಿ ಬಿಕ್ಕಟ್ಟು: ಭಾರತೀಯ ಉದ್ಯಮಗಳು ನಿಮ್ಮ ಆಟದ ವಸ್ತುಗಳಲ್ಲ; ಪ್ರಧಾನಿ ಮೋದಿ-ಅಮಿತಾ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

'ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಗೆ ನಟಿಯರ ಮೈ ಬಣ್ಣದ ಗೀಳು; ಬಾಲಿವುಡ್‌ಗೆ ವಿದೇಶಿಯರೇ ಬೇಕು'!

ಆಂಧ್ರ ಪ್ರದೇಶದ ನರ್ಸಾಪುರ ಬಳಿ ಕರಾವಳಿ ದಾಟಿದ 'ಅರ್ನಬ್' ಚಂಡಮಾರುತ; ತೀವ್ರತೆ ಇಳಿಕೆ, ಇಬ್ಬರು ಸಾವು

ಪ್ರಾಜೆಕ್ಟ್ ಚೀತಾ ಯೋಜನೆಗೆ ಅತಿ ದೊಡ್ಡ ಹಿನ್ನೆಡೆ! ಕುನೋದಲ್ಲಿ ಬೇಟೆಗಾರರ ಗುಂಡಿಗೆ ಬಲಿಯಾಯ್ತಾ ಚೀತಾ ಮರಿ?

ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರೀ ಅಕ್ರಮ: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ