ಮೊರ್ಬಿ: ಗುಜರಾತ್ನ ಮೊರ್ಬಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಾರಿನ ಸೆನ್ಸಾರ್ ಪದೇ ಪದೇ ಸದ್ದು ಮಾಡುತ್ತಿದ್ದರಿಂದ ಕಿರಿಕಿರಿಗೊಂಡ ಯುವಕನೊಬ್ಬ, ತನ್ನ ನೆರೆಯವರ ಕಾರಿಗೆ ಬೆಂಕಿ ಹಚ್ಚಿ, ವಿಡಿಯೋ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಯುವಕನನ್ನು ಶಿಖರ್ ಗೋಹೆಲ್ ಎಂದು ಗುರುತಿಸಲಾಗಿದ್ದು, ವಕೀಲೆಯೊಬ್ಬರ ಕಾರಿನ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ್ದಾನೆ. ಬಳಿಕ ಕಾರು ಹೊತ್ತಿ ಉರಿಯುತ್ತಿರುವುದನ್ನು ವಿಡಿಯೋ ಕೂಡ ಮಾಡಿದ್ದಾನೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆಯು ಅಕ್ಟೋಬರ್ 28 ರಂದು ವಾಘ್ಪರಾ ಪ್ರದೇಶದಲ್ಲಿ ನಡೆದಿದ್ದು, ಈ ಸಂಬಂಧ ವಕೀಲೆ ಪುಷ್ಪಾ ಭಟ್ ಅವರು ಮೊರ್ಬಿ 'ಎ' ಡಿವಿಷನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.
ಆರೋಪಿಯು ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.
ದೂರಿನ ಪ್ರಕಾರ, ಸಂಜೆ 4:45 ರ ಸುಮಾರಿಗೆ ಪುಷ್ಪಾ ಭಟ್ ಅವರ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಅವರ ಮನೆಯ ಬಳಿ ನಿಲ್ಲಿಸಲಾಗಿತ್ತು.
ಆರೋಪಿ ಗೋಹೆಲ್ ಪೆಟ್ರೋಲ್ ಬಾಟಲಿಯೊಂದಿಗೆ ಕಾರಿನ ಬಳಿ ಬಂದು, ಅದರ ಬಾನೆಟ್ ಮತ್ತು ಮುಂಭಾಗದ ಭಾಗದ ಮೇಲೆ ಪೆಟ್ರೋಲ್ ಸುರಿದಿದ್ದಾನೆ. ನಂತರ ಬೆಂಕಿ ಕಡ್ಡಿ ಗೀರಿ ಕಾರಿಗೆ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.
ಸೆನ್ಸರ್ ಶಬ್ದದ ಕಿರಿಕಿರಿಗೆ ಕೃತ್ಯ
ಕಾರಿನ ಹತ್ತಿರ ಯಾರಾದರೂ ಮನುಷ್ಯರು ಅಥವಾ ಪ್ರಾಣಿಗಳು ಬಂದಾಗಲೆಲ್ಲಾ ಸೆನ್ಸರ್ ಶಬ್ದ ಮಾಡುತ್ತಿತ್ತು. ಈ ಸೌಂಡ್ನಿಂದ ತನಗೆ ತೀವ್ರ ಕಿರಿಕಿರಿಯಾಗುತ್ತಿತ್ತು, ಅದಕ್ಕೇ ಈ ರೀತಿ ಮಾಡಿದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.