ಗಾಜಾ (ಭೂತಾನ್): ಭೂತಾನ್‌ನ ವಾಯುವ್ಯ ಭಾಗದಲ್ಲಿರುವ ಗಾಜಾ ಜಿಲ್ಲೆಯ ಲಾಯಾ ಪ್ರದೇಶದ ಶಿಂತಾಫು ಸರೋವರದಲ್ಲಿ ಅಕ್ಟೋಬರ್ 29ರ ರಾತ್ರಿ ಭೀಕರ ಹಿಮನದಿ ಸ್ಫೋಟ ಸಂಭವಿಸಿದೆ. ಇದರಿಂದಾಗಿ ಭಾರತದ ಗಡಿ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ದಿಢೀರ್ ಪ್ರವಾಹ ಉಂಟಾಗುವ ಭೀತಿ ಎದುರಾಗಿದ್ದು, ಎರಡು ರಾಜ್ಯಗಳ ತಗ್ಗು ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದರೊಂದಿಗೆ, ಕೇಂದ್ರ ಜಲ ಆಯೋಗ ಮತ್ತು ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನದಿ ತೀರದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹಿಮನದಿ ಸ್ಫೋಟಕ್ಕೆ ಕಾರಣವೇನು?
ಹಿಮಾಲಯ ಪ್ರದೇಶದಲ್ಲಿ ತಾಪಮಾನ ಏರಿಕೆ ಮತ್ತು ಮಂಜುಗಡ್ಡೆಯ ನೈಸರ್ಗಿಕ ತಡೆಗೋಡೆಗಳಲ್ಲಿ ಉಂಟಾದ ಅಸ್ಥಿರತೆಯಿಂದಾಗಿ ಅಕ್ಟೋಬರ್ 29ರ ರಾತ್ರಿ ಗಾಜಾ ಜಿಲ್ಲೆಯ ಲಾಯಾ ಪ್ರದೇಶದ ಶಿಂತಾಫು ಸರೋವರದಲ್ಲಿ ಜಲಸ್ಫೋಟ ಸಂಭವಿಸಿದೆ. ಸುಮಾರು 7.4 ಮಿಲಿಯನ್ ಕ್ಯೂಬಿಕ್ ಮೀಟರ್‌ಗಳಷ್ಟು ನೀರು ಸರೋವರದಿಂದ ಹೊರಚೆಲ್ಲಿದೆ ಎಂದು ಅಂದಾಜಿಸಲಾಗಿದ್ದು, ಶಿಂತಾಫು ಸರೋವರ ಒಡೆದಿದ್ದರಿಂದ ಸುಮಾರು 7.4 ಮಿಲಿಯನ್ ಕ್ಯೂಬಿಕ್ ಮೀಟರ್‌ನಷ್ಟು ನೀರು ಮೋಚು ನದಿ ಮತ್ತು ಪುನತ್ಸಂಗ್ಚು ನದಿಯ ಮೂಲಕ ಭಾರತದ ಗಡಿಯತ್ತ ಹರಿಯುವ ಸಂಕೋಷ್ ನದಿಯನ್ನು ಸೇರುತ್ತಿದೆ. ಹೀಗಾಗಿ ಸಂಕೋಷ್ ನದಿಯಲ್ಲಿ ನೀರಿನ ಮಟ್ಟ ದಿಢೀರನೆ ಹೆಚ್ಚಾಗುವ ಅಪಾಯವಿದೆ. ಏತನ್ಮಧ್ಯೆ, ಗಾಸಾ ಪ್ರಾಂತ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಗಾಸಾ ತ್ಶಾಚು ನೈಸರ್ಗಿಕ ಬಿಸಿ ನೀರಿನ ಬುಗ್ಗೆಗಳ ಮೂಲಸೌಕರ್ಯಗಳು ಮತ್ತು ಎರಡು ಬೈಲಿ ಸೇತುವೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಇದರೊಂದಿಗೆ ಪುನಾಖಾ ಭಾಗದ ಸೌರಶಕ್ತಿ ಆಧಾರಿತ ನೀರಾವರಿ ಯೋಜನೆಗೆ ಹಾನಿಯಾಗಿದ್ದು, ಹೆದ್ದಾರಿಗಳು ಬಂದ್ ಆಗಿವೆ. ಮುಂಚಿತವಾಗಿಯೇ ಜನರನ್ನು ಸ್ಥಳಾಂತರಿಸಿದ್ದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ.
ಮುಂದುವರೆದು, ಭೂತಾನ್‌ನಿಂದ ಹರಿದುಬರುವ ಸಂಕೋಶ್ ಮತ್ತು ಬ್ರಹ್ಮಪುತ್ರ ನದಿಗಳ ನೀರಿನ ಮಟ್ಟ ಹಠಾತ್ ಏರಿಕೆಯಾಗುತ್ತಿರುವುದರಿಂದ ಪಶ್ಚಿಮ ಬಂಗಾಳದ ಅಲಿಪುರ್ದುವಾರ್, ಕೂಚ್ ಬೆಹಾರ್, ಜಲ್ಪೈಗುರಿ ಹಾಗೂ ಅಸ್ಸಾಂ ರಾಜ್ಯದ ಧುಬ್ರಿ ಕೋಕ್ರಾಝಾರ್ ಪ್ರದೇಶಗಳಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದರಂತೆ, ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ಹಾಗೂ ಕೂಚ್ ಬೆಹಾರ್‌ನ ನದಿ ತೀರದ ಚಹಾ ತೋಟಗಳ ನಿವಾಸಿಗಳು ಮತ್ತು ಗ್ರಾಮಸ್ಥರನ್ನು ಜಾನುವಾರುಗಳ ಸಮೇತ ಸುರಕ್ಷಿತ ಶಿಬಿರಗಳಿಗೆ ಕಳುಹಿಸಲಾಗುತ್ತಿದೆ. ಈಗಾಗಲೇ 10,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
ಏನಿದು ಹಿಮನದಿ ಸರೋವರ ಸ್ಫೋಟ (GLOF)?
ಹಿಮನದಿಗಳು ಕರಗಿದಾಗ ನೈಸರ್ಗಿಕ ತಡೆಗೋಡೆಗಳ (ಮೊರೈನ್) ನಡುವೆ ಸರೋವರಗಳು ಸೃಷ್ಟಿಯಾಗುತ್ತವೆ. ತಾಪಮಾನ ಏರಿಕೆಯಿಂದ ಈ ನೈಸರ್ಗಿಕ ಕಟ್ಟೆ ಒಡೆದು ಹೋದಾಗ ಲಕ್ಷಾಂತರ ಘನ ಮೀಟರ್ ನೀರು ಮತ್ತು ಕಲ್ಲು-ಮಣ್ಣಿನ ಅವಶೇಷಗಳು ಪರ್ವತ ಕಣಿವೆಗಳ ಮೂಲಕ ನುಗ್ಗಿ ಬರುತ್ತವೆ. ಈ ಅನಿರೀಕ್ಷಿತ ಪ್ರವಾಹವು ರಸ್ತೆಗಳು, ಸೇತುವೆಗಳು ಮತ್ತು ಜನವಸತಿಗಳನ್ನು ಕ್ಷಣಾರ್ಧದಲ್ಲಿ ಮುಳುಗಿಸುವ ಸಾಮರ್ಥ್ಯ ಹೊಂದಿರುತ್ತದೆ.