ಡೆಹ್ರಾಡೂನ್: ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಇದರಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ಮೂಲದ ಐವರು ಪ್ರಯಾಣಿಕರು ಹಾಗೂ ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ 'ಟ್ರಾನ್ಸ್ ಭಾರತ್ ಏವಿಯೇಷನ್' (Trans Bharat Aviation) ಸಂಸ್ಥೆಯ ಹೆಲಿಕಾಪ್ಟರ್ ನಾಪತ್ತೆಯಾಗಿತ್ತು. ಇದು ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಪತನಗೊಂಡಿದೆ ಎಂದು ವರದಿಯಾಗಿದೆ.
ಹೆಲಿಕಾಪ್ಟರ್ ಪತ್ತೆಗೆ ಭಾರತೀಯ ಸೇನೆ, ಜಿಲ್ಲಾಡಳಿತ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ.
ಸಿಸಿಬಿ ಇನ್ಸ್ ಪೆಕ್ಟರ್ ಅರುಣ್ ಸಾಲಂಕೆ ಸಾವು:
ಮೃತ ಪ್ರಯಾಣಿಕರನ್ನು ಬೆಂಗಳೂರು ಮೂಲದ ಪ್ರತಾಪ, ಸಿಸಿಬಿ ಇನ್ಸ್ ಪೆಕ್ಟರ್ ಅರುಣ್ ಸಾಲಂಕೆ, ಶಂಕರ್ ಗೌಡ, ಸುಧೀರ್ ಕೆ. ಮತ್ತು ಎಚ್.ಎಸ್. ನಟರಾಜ ಎಂದು ಗುರುತಿಸಲಾಗಿದೆ. ಹೆಲಿಕಾಪ್ಟರ್ ಅನ್ನು ಕ್ಯಾಪ್ಟನ್ ಹಿಮಾಂಶು ಚಲಾಯಿಸುತ್ತಿದ್ದರು ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ವಾಸವಿದ್ದ ಇನ್ಸ್ ಪೆಕ್ಟರ್ ಅರುಣ್ ಸಾಲಂಕೆ, ವಕೀಲರಾದ ಸುಧೀರ್, ಶಂಕರ್ ಗೌಡ, ನಟರಾಜ್ ಅವರೊಂದಿಗೆ ಚಾರ್ ಧಾಮ್ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಸಿಸಿಬಿ ಇನ್ಸ್ ಪೆಕ್ಟರ್ ಇಬ್ಬರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ.
ಇನ್ನೂ ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಜೋಶಿಮಠದ ಸಮೀಪವಿರುವ ಹಾಥಿ ಪರ್ವತ ಪ್ರದೇಶದ ಚೈನ್ ಗ್ರಾಮದ ಬಳಿ ಹೆಲಿಕಾಪ್ಟರ್ ಪತನಗೊಂಡಿರುವ ದುರದೃಷ್ಟಕರ ಸುದ್ದಿ ನಮಗೆ ಲಭ್ಯವಾಗಿದೆ.
ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ ಮತ್ತು ಎಸ್‌ಡಿಆರ್‌ಎಫ್ (SDRF) ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ನಾನು ಈ ಸಂಪೂರ್ಣ ಘಟನೆಯ ಮೇಲೆ ನಿರಂತರ ನಿಗಾ ಇರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡವರನ್ನು ಉತ್ತಮ ಚಿಕಿತ್ಸೆಗಾಗಿ ತಕ್ಷಣವೇ ಏರ್ ಲಿಫ್ಟ್ ಮಾಡಿ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ಸಾಗಿಸಲು ಸೂಚನೆ ನೀಡಲಾಗಿದೆ" ಎಂದು ಅವರು ತಿಳಿಸಿದ್ದಾರೆ.
ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈ. ಲಿಮಿಟೆಡ್ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್, VT-HCX ಮಧ್ಯಾಹ್ನ 1.14 ರ ಸುಮಾರಿಗೆ ಟೇಕ್ ಆಫ್ ಆಗಿ ಜೋಶಿಮಠ ಕಣಿವೆಯ ಮೇಲೆ ಹಾರುವಾಗ ಸಂಪರ್ಕ ಕಳೆದುಕೊಂಡಿತು ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ತಿಳಿಸಿದೆ.
ಹಿಮಪಾತದ ನಡುವೆ ಹೆಲಿಕಾಪ್ಟರ್ ಮಧ್ಯಾಹ್ನ 2.15 ರ ಸುಮಾರಿಗೆ ಬದರಿನಾಥದಿಂದ ಟೇಕ್ ಆಫ್ ಆಗಿ ಜೋಶಿಮಠಕ್ಕೆ ಹತ್ತಿರವಿರುವ ಹಾಥಿ ಪರ್ವತ ಪ್ರದೇಶದ ಬಳಿ ನಾಪತ್ತೆಯಾಗಿತ್ತು ಎಂದು ತಿಳಿದುಬಂದಿದೆ. ಹಾಥಿ ಪರ್ವತ ಬಳಿ ಸಂಭವನೀಯ ಅಪಘಾತದ ಬಗ್ಗೆ ಸೇನೆಯು ಚಮೋಲಿ ಜಿಲ್ಲಾ ಆಡಳಿತಕ್ಕೆ ಮಾಹಿತಿ ನೀಡಿದ ನಂತರ ನಂತರ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ.
ಹೆಲಿಕಾಪ್ಟರ್ ಪತನ ಪ್ರದೇಶದಲ್ಲಿ ಭಾರತೀಯ ಸೇನೆ, ಚಮೋಲಿ ಜಿಲ್ಲಾಡಳಿತ ಮತ್ತು SDRF ತಂಡಗಳನ್ನು ನಿಯೋಜಿಸಲಾಗಿದೆ. ಜೋಶಿಮಠದ ಸುತ್ತಲಿನ ಪರ್ವತ ಪ್ರದೇಶ ಮತ್ತು ಹಿಮಪಾತ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಭಕ್ತರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಬದರಿನಾಥದಿಂದ ಹಿಂತಿರುಗುತ್ತಿತ್ತು ಎನ್ನಲಾಗಿದೆ. ವಿಮಾನ ಅಪಘಾತಕ್ಕೀಡಾಗಿದೆಯೇ ಅಥವಾ ಬೇರೆ ಕಾರಣಗಳಿಂದ ಈ ಘಟನೆ ಸಂಭವಿಸಿದೆಯೇ ಎಂಬುದು ತಿಳಿದುಬಂದಿಲ್ಲ. ಶೋಧ ಕಾರ್ಯಾಚರಣೆ ಮುಂದುವರೆದಿದೆ.