ಇಂದೋರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರಾಜಕತೆಯನ್ನು ಹರಡುತ್ತಿದ್ದಾರೆ. ಅಲ್ಲದೆ, ಅವರು ಅಶಾಂತಿಯಿಂದ ಕೂಡಿದ ಪಾಕಿಸ್ತಾನದಿಂದಲೇ ಭಾರತಕ್ಕೆ ರಾಜಕೀಯ ಮಾಡಲು ಬಂದಂತಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಶುಕ್ರವಾರ ಟೀಕಿಸಿದ್ದಾರೆ.
ಭಾರತೀಯ ಜನತಾ ಪಕ್ಷದ 'ಲೋಕತಂತ್ರ ಬಚಾವೋ, ಅರಾಜಕತಾ ಹಟಾವೋ' (ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆಯನ್ನು ಕೊನೆಗೊಳಿಸಿ) ಅಭಿಯಾನದ ಅಂಗವಾಗಿ ಇಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಯಾದವ್ ಮಾತನಾಡುತ್ತಿದ್ದರು.
'ರಾಹುಲ್ ಗಾಂಧಿ ಅರಾಜಕತೆಯನ್ನು ಹರಡುತ್ತಿದ್ದಾರೆ ಮತ್ತು ತಮ್ಮ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ. ಅವರು ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಸೇನೆಯಂತಹ ಸಂಸ್ಥೆಗಳನ್ನು ಪ್ರಶ್ನಿಸುತ್ತಿದ್ದಾರೆ; ಇವು ಸಾಂವಿಧಾನಿಕ ಹಕ್ಕುಗಳ ಮೂಲಕ ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಂಸ್ಥೆಗಳಾಗಿವೆ' ಎಂದರು.
'ರಾಹುಲ್ ಗಾಂಧಿ ಈ ದೇಶದವರೇ ಅಲ್ಲವೇನೋ ಎಂಬಂತೆ ಭಾಸವಾಗುತ್ತಿದೆ; ಅವರು ಪಾಕಿಸ್ತಾನದಿಂದ ಇಲ್ಲಿಗೆ ಬಂದು ರಾಜಕೀಯ ಮಾಡುತ್ತಿದ್ದಾರೇನೋ ಎನಿಸುತ್ತದೆ' ಎಂದು ಯಾದವ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಶಕ್ತಿ ಹೆಚ್ಚುತ್ತಿರುವುದನ್ನು ಜಗತ್ತೇ ಮೆಚ್ಚಿಕೊಳ್ಳುತ್ತಿದೆ. ಆದರೆ, ಇದನ್ನು ನೋಡುವ ಸಾಮರ್ಥ್ಯವೇ ಇಲ್ಲದವರಿಗೆ ಇದು ಹೇಗೆ ಕಾಣಲು ಸಾಧ್ಯ? ಎಂದು ಪ್ರಶ್ನಿಸಿದರು.
'ಕಾಂಗ್ರೆಸ್ ಪಕ್ಷವು ತೆರೆಮರೆಯ ಷಡ್ಯಂತ್ರಗಳ ಮೂಲಕ ಚುನಾವಣೆಗಳಲ್ಲಿ ಗೆಲ್ಲುತ್ತಾ ಬಂದಿದೆ. ಕಾಂಗ್ರೆಸ್ ಎಷ್ಟೇ ಕೆಸರನ್ನು ಎರಚಿದರೂ, ಆ ಕೆಸರಿನಲ್ಲಿ ಕಮಲ ಅರಳುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ' ಎಂದು ಹೇಳಿದರು.