ಅನಂತಪುರ: ಹರ್ಯಾಣದ ಪಂಚಕುಲ ಶಾಲೆಯಲ್ಲಿನ ಘಟನೆ ಬೆನ್ನಲ್ಲೇ ಅಂತಹುದೇ ಮತ್ತೊಂದು ಘಟನೆ ಆಂಧ್ರ ಪ್ರದೇಶದ ಅನಂತಪುರದಲ್ಲಿ ನಡೆದಿದ್ದು, ದುಷ್ಕರ್ಮಿಯೋರ್ವ ತರಗತಿಯೊಳಗೆ ದಾಳಿ ಮಾಡಿದ ಪರಿಣಾಮ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿ, ಮತ್ತೋರ್ವ ವಿದ್ಯಾರ್ಥಿನಿ ಗಾಯಗೊಂಡಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಫ್ತಾಡು ಮಂಡಲದ ರಾಪ್ತಾಡು ಗ್ರಾಮದ ಜಿಲ್ಲಾ ಪಂಚಾಯತ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಬೆಳಗ್ಗೆ ಸುಮಾರು 10.30ಕ್ಕೆ ಈ ಘಟನೆ ನಡೆದಿದೆ.
ಶಾಲೆಯಲ್ಲಿ ಪಾಠ ನಡೆಯುತ್ತಿದ್ದಾಗಲೇ ತರಗತಿಯೊಳಗೆ ನುಗ್ಗಿದ 21 ವರ್ಷದ ಯುವಕನೊಬ್ಬ ಚೈನ್ಸಾ (ಮರ ಕತ್ತರಿಸುವ ಯಂತ್ರ) ಬಳಸಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರು ಬಾಲಕಿಯರು ಗಾಯಗೊಂಡಿದ್ದರು. ಅವರಲ್ಲಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಶಿಕ್ಷಕರ ಸಮ್ಮುಖದಲ್ಲೇ ಕೈಯಲ್ಲಿ ಚೈನ್ಸಾ ಹಿಡಿದು ಬಂದ ಯುವಕ ಏಕಾಏಕಿ ಇಬ್ಬರು ಬಾಲಕಿಯರ ಮೇಲೆ ದಾಳಿ ನಡೆಸಿದ್ದಾನೆ. ಗಾಯಗೊಂಡ ಇಬ್ಬರು ವಿದ್ಯಾರ್ಥಿನಿಯರನ್ನು ತಕ್ಷಣ ಅನಂತಪುರದ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ. ಅವರಲ್ಲಿ ಒಬ್ಬ ವಿದ್ಯಾರ್ಥಿನಿಗೆ ಗಂಭೀರ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.
ಆರೋಪಿ ಬಂಧನ
ಪ್ರಾಥಮಿಕ ಪೊಲೀಸ್ ಮಾಹಿತಿಯ ಪ್ರಕಾರ, ದಾಳಿ ನಡೆಸಿದ ಆರೋಪಿಯನ್ನು ಹೇಮಂತ್ ಅಲಿಯಾಸ್ ದುಮ್ಮು ಎಂದು ಗುರುತಿಸಲಾಗಿದೆ. ದಾಳಿ ನಡೆಸಿದ ಬಳಿಕ ಆತ ಶಾಲೆಯಿಂದ ಪರಾರಿಯಾಗಿದ್ದ. ಆದರೆ, ಪೊಲೀಸರು ಕಾರ್ಯಾಚರಣೆ ನಡೆಸಿ ಧರ್ಮಾವರಂ ರೈಲು ನಿಲ್ದಾಣದಲ್ಲಿ ಆತನನ್ನು ಬಂಧಿಸಿದ್ದಾರೆ.
ಆರೋಪಿ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಮಂಡಲದ ನಾಗಲೂರು ಗ್ರಾಮದ ನಿವಾಸಿ ಎನ್ನಲಾಗಿದೆ. ಗಾಯಗೊಂಡ ವಿದ್ಯಾರ್ಥಿನಿಯೊಬ್ಬಳಿಗೆ ದೂರದ ಸಂಬಂಧಿಯಾಗಿದ್ದಾನೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಯುವಕನ ದಾಳಿಯಿಂದ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ತೀವ್ರ ಆತಂಕ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಕೃತ್ಯಕ್ಕೆ ಸಿಎಂ ಚಂದ್ರಬಾಬು ನಾಯ್ಡು ಆಕ್ರೋಶ
ಶಾಲೆಯ ತರಗತಿಯೊಳಗೆ ವಿದ್ಯಾರ್ಥಿನಿಯ ಮೇಲೆ ನಡೆದ ಭೀಕರ ದಾಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ರಾಪ್ತಾಡು ಜಿಲ್ಲಾ ಪಂಚಾಯತ್ ಪ್ರೌಢಶಾಲೆಯ ತರಗತಿಯೊಳಗೆ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ನಡೆದ ಕ್ರೂರ ದಾಳಿಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ ಮತ್ತು ಆಕ್ರೋಶಗೊಂಡಿದ್ದೇನೆ. ಶಾಲೆಗಳೊಳಗೆ ನಮ್ಮ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವವರಿಗೆ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ" ಎಂದು ಹೇಳಿದ್ದಾರೆ.
"ವಿದ್ಯಾರ್ಥಿನಿಯ ಆರೋಗ್ಯ ಚೇತರಿಕೆಯ ಬಗ್ಗೆ ನಾನು ವೈಯಕ್ತಿಕವಾಗಿ ಗಮನಹರಿಸುತ್ತಿದ್ದೇನೆ. ಆಕೆಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ವೈದ್ಯಕೀಯ ತಂಡಕ್ಕೆ ಸೂಚಿಸಿದ್ದೇನೆ. ದಾಳಿಗೆ ಕಾರಣನಾದ ಆರೋಪಿಯನ್ನು ಪತ್ತೆಹಚ್ಚಿ ಶೀಘ್ರವಾಗಿ ಕಾನೂನಿನಡಿ ಅತ್ಯಂತ ಕಠಿಣ ಶಿಕ್ಷೆ ಕೊಡಿಸುವಂತೆ ಪೊಲೀಸರಿಗೆ ಆದೇಶಿಸಿದ್ದೇನೆ" ಎಂದು ತಿಳಿಸಿದ್ದಾರೆ.
ಶಿಕ್ಷಣ ಸಚಿವ ನರ ಲೋಕೇಶ್ ಖಂಡನೆ
ಆಂಧ್ರಪ್ರದೇಶದ ಶಿಕ್ಷಣ ಸಚಿವ ನರ ಲೋಕೇಶ್ ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
"ಅನಂತಪುರ ಜಿಲ್ಲೆಯ ರಾಪ್ತಾಡು ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ನಡೆದ ಕ್ರೂರ ದಾಳಿಯಿಂದ ನನಗೆ ತೀವ್ರ ನೋವು ಮತ್ತು ಆಘಾತವಾಗಿದೆ. ಕಲಿಕೆ ಮತ್ತು ಸುರಕ್ಷತೆಗೆ ಮೀಸಲಾಗಿರುವ ಶಾಲೆಯಲ್ಲಿ ಯುವತಿಯೊಬ್ಬಳ ಮೇಲೆ ಇಂತಹ ಅಮಾನವೀಯ ಕೃತ್ಯ ಎಸಗಿರುವುದು ಖಂಡನೀಯ.
ಆರೋಪಿಯ ವಿರುದ್ಧ ತ್ವರಿತ ಹಾಗೂ ಕಠಿಣ ಕ್ರಮ ಕೈಗೊಂಡು ಆತನನ್ನು ನ್ಯಾಯದ ಮುಂದೆ ತರುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪೊಲೀಸರಿಗೆ ಸೂಚಿಸಿದ್ದಾರೆ. ಪ್ರತಿಯೊಬ್ಬ ಮಹಿಳೆ ಮತ್ತು ಬಾಲಕಿಯ ಸುರಕ್ಷತೆ ಹಾಗೂ ಗೌರವಕ್ಕೆ ನಮ್ಮ ಆದ್ಯತೆ. ಇಂತಹ ಕ್ರೂರ ಕೃತ್ಯಗಳನ್ನು ಸಹಿಸುವುದಿಲ್ಲ" ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.