ಕೌಶಂಬಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದ ಪಟಾಕಿ ಕಾರ್ಖಾನೆ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ನೌಶಾದ್‌ನನ್ನು ಪೊಲೀಸರು ಮುಂಜಾನೆ ನಡೆದ ಎನ್‌ಕೌಂಟರ್‌ನಲ್ಲಿ ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಕೌಶಂಬಿಯ ಮನೌರಿ ಗ್ರಾಮದಲ್ಲಿ ನೌಶಾದ್‌ಗೆ ಸೇರಿದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಆಗಸ್ಟ್ 31ರಂದು ಭೀಕರ ಸ್ಫೋಟ ಸಂಭವಿಸಿತ್ತು. ಈ ದುರಂತದಲ್ಲಿ 8 ಮಕ್ಕಳು ಸೇರಿದಂತೆ ಒಟ್ಟು 11 ಜನರು ಸಾವನ್ನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಜೊತೆಗೆ, ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ 5-6 ಮನೆಗಳು ಕುಸಿದು ಬಿದ್ದಿದ್ದವು. ಇನ್ನು, ಘಟನೆಯ ನಂತರ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ನೌಶಾದ್, ಸೆಪ್ಟೆಂಬರ್ 1ರ ಮುಂಜಾನೆ ಸುಮಾರು 4 ಗಂಟೆಯಲ್ಲಿ ಚರ್ವಾ ಪ್ರದೇಶದ ಸೈಯದ್ ಸರಾವನ್ ಬಳಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸುತ್ತಿದ್ದ. ಈ ವೇಳೆ ಆತನನ್ನು ಸುತ್ತುವರೆದ ಪೊಲೀಸ್ ತಂಡದ ಮೇಲೆ ನೌಶಾದ್ ಮೊದಲು ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿ ನೌಶಾದ್ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ವಶಕ್ಕೆ ಪಡೆದ ಪೊಲೀಸರು ಚಿಕಿತ್ಸೆಗಾಗಿ ಮಂಝನ್‌ಪುರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆತನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮುಂದುವರೆದು, ಈ ಪಟಾಕಿ ಕಾರ್ಖಾನೆಯ ಪರವಾನಗಿಯನ್ನು 2024 ರಲ್ಲೇ ರದ್ದುಗೊಳಿಸಲಾಗಿದ್ದರೂ, ನೌಶಾದ್ ಅಕ್ರಮವಾಗಿ ವಸತಿ ಪ್ರದೇಶದಲ್ಲಿ ಕಾರ್ಖಾನೆ ನಡೆಸುತ್ತಿದ್ದ. ಈ ಬಗ್ಗೆ ಮಾಹಿತಿ ಇರದೇ ನಿರ್ಲಕ್ಷ್ಯ ವಹಿಸಿದ ಕಾರಣಕ್ಕೆ ಪಿಪ್ರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ಕು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇನ್ನು, ಮೃತರನ್ನು ಪ್ರಿಯಾಂಜಲಿ (5), ಪ್ರವೀಣ್ ಸಿಂಗ್ (13), ಜಾನ್ವಿ (12), ಆದಿತ್ಯ (12), ರವಿ (8), ಜ್ಞಾನ್ ಸಿಂಗ್ (40), ಆದಿತ್ಯ (8), ಅಂಜು (32), ವಿಕ್ರಮ್ ಸರೋಜ್ (35), ಅಂಶ್ (6) ಮತ್ತು ನನ್ಹಾ (4) ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.