ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರಿಗೆ ಭಾರಿ ಹಿನ್ನಡೆಯಾಗಿದೆ. ತಮಿಳುನಾಡಿನ ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಪ್ಯಾಟ್ ನ( VVPAT) ಶೇ. 100 ರಷ್ಟು ಎಣಿಕೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ಈ ಕ್ಷೇತ್ರದಲ್ಲಿ ಅವರು ಅನಿರೀಕ್ಷಿತ ಸೋಲನ್ನು ಅನುಭವಿಸಿದ್ದರು. ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಟಿವಿಕೆ (TVK) ಪಕ್ಷದ ವಿ.ಎಸ್. ಬಾಬು ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ತಮ್ಮನ್ನು ಆ ಕ್ಷೇತ್ರದಿಂದ ವಿಜೇತ ಎಂದು ಘೋಷಿಸಬೇಕು ಎಂದೂ ಸ್ಟಾಲಿನ್ ಕೋರಿದ್ದರು.
2011ರಲ್ಲಿ ಕೊಳತ್ತೂರು ಕ್ಷೇತ್ರ ರಚನೆಯಾದಾಗಿನಿಂದಲೂ ಅದನ್ನು ಪ್ರತಿನಿಧಿಸುತ್ತಿರುವ ಸ್ಟಾಲಿನ್ ಅವರನ್ನು ಬಾಬು 8,795 ಮತಗಳ ಅಂತರದಿಂದ ಸೋಲಿಸಿದ್ದರು. ಬಾಬು 82,997 ಮತಗಳನ್ನು ಪಡೆದರೆ, ಸ್ಟಾಲಿನ್ 74,202 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
'ಜನತಾ ಪ್ರಾತಿನಿಧ್ಯ ಕಾಯ್ದೆ'ಯ (Representation of the People Act) ಅಡಿಯಲ್ಲಿ 'ಚುನಾವಣಾ ಅರ್ಜಿ'ಯ ಮೂಲಕ ಮಾತ್ರ ಚುನಾವಣಾ ಫಲಿತಾಂಶ ಪ್ರಶ್ನಿಸಲು ಸಾಧ್ಯವಿರುವುದರಿಂದ, ಸ್ಟಾಲಿನ್ ಅವರ ರಿಟ್ ಅರ್ಜಿಯ ಮಾನ್ಯತೆಯನ್ನು ಚುನಾವಣಾ ಆಯೋಗ ಪ್ರಶ್ನಿಸಿತ್ತು. ಫಲಿತಾಂಶವನ್ನು ಪ್ರಶ್ನಿಸಲು ಸ್ಟಾಲಿನ್ ನಿಗದಿತ ಸಮಯದೊಳಗೆ ಚುನಾವಣಾ ಅರ್ಜಿಯನ್ನು ಸಲ್ಲಿಸಬೇಕಿತ್ತು ಎಂದು ಚುನಾವಣಾ ಆಯೋಗ ವಾದಿಸಿತು.
ಚುನಾವಣೆಯ ನಂತರ ವಿದ್ಯುನ್ಮಾನ ಮತಯಂತ್ರಗಳ (EVM) ಪರಿಶೀಲನೆಯ ವಿಷಯವೂ ಈ ವಿವಾದದ ಕೇಂದ್ರಬಿಂದುವಾಗಿದೆ. ಮೇ 4 ರಂದು ಫಲಿತಾಂಶ ಘೋಷಣೆಯಾದ ನಂತರ, ಕ್ಷೇತ್ರದಲ್ಲಿ ಬಳಸಲಾದ ಒಟ್ಟು 286 ಸೆಟ್‌ಗಳ ಪೈಕಿ ಶೇ. 5 ರಷ್ಟಿರುವ 14 ಇವಿಎಂ ಸೆಟ್‌ಗಳ ಪರಿಶೀಲನೆಗಾಗಿ ಸ್ಟಾಲಿನ್ ಮೇ 7 ರಂದು ಅರ್ಜಿ ಸಲ್ಲಿಸಿದ್ದರು.
ಆದರೆ, ಪರಿಶೀಲನಾ ಪ್ರಕ್ರಿಯೆಯು ಜುಲೈ 29 ರಂದು ಪ್ರಾರಂಭವಾಗಿ ಆಗಸ್ಟ್ 5 ರಂದು ಪೂರ್ಣಗೊಂಡಿತು. ಈ ವಿಳಂಬವು ಚುನಾವಣೆಯನ್ನು ಪ್ರಶ್ನಿಸಲು ನಿಗದಿಪಡಿಸಿದ ಅವಧಿಯೊಳಗೆ ಕಾನೂನು ಪರಿಹಾರ ಪಡೆಯುವ ತಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ ಎಂದು ಸ್ಟಾಲಿನ್ ವಾದಿಸಿದ್ದಾರೆ.
ಆದರೆ ವಾದ, ವಿವಾದ ಆಲಿಸಿದ ನ್ಯಾಯಾಲಯ, ಸ್ಟಾಲಿನ್ ಅವರ ಅಕ್ರಮ ಚುನಾವಣಾ ಆರೋಪದ ಅರ್ಜಿಯನ್ನು ವಜಾಗೊಳಿಸಿತು. ಇದು ಕೊಳತ್ತೂರು ಕ್ಷೇತ್ರ ರಚನೆಯಾದಾಗಿನಿಂದ ಸತತ ಮೂರು ಚುನಾವಣೆಗಳಲ್ಲಿ ಗೆದ್ದಿದ್ದ ಸ್ಟಾಲಿನ್ ಅವರಿಗೆ ಈ ಸೋಲು ದೊಡ್ಡ ರಾಜಕೀಯ ಹಿನ್ನಡೆಯನ್ನು ಉಂಟುಮಾಡಿದೆ.