ನವದೆಹಲಿ: ಜಂತರ್ ಮಂತರ್‌ನಲ್ಲಿ ಜುಲೈ 20ರಂದು ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿ ಪ್ರತಿಭಟನಾಕಾರನ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿಂದುತ್ವ ಕಾರ್ಯಕರ್ತನನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿ ಕಾಕರೋಚ್ ಜನತಾ ಪಾರ್ಟಿ (CJP) ಕಾರ್ಯಕರ್ತರು ಶುಕ್ರವಾರ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಿಜೆಪಿ ವಕ್ತಾರ ಸೌರವ್ ದಾಸ್, ಸಹ ಸಂಚಾಲಕ ಆಶುತೋಷ್ ರಂಕಾ ಸೇರಿದಂತೆ ಹಲವು ಬೆಂಬಲಿಗರು ಪಟೇಲ್ ಚೌಕ್‌ನಿಂದ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ನಡೆಸಿದರು.
ಈ ವೇಳೆ ದೆಹಲಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ ಅವರು, ಹಿಂದು ಕಾರ್ಯಕರ್ತ ಭಾರದ್ವಾಜ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಜುಲೈ 20ರ ಪ್ರತಿಭಟನೆ ವೇಳೆ ಸಂಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾಗಿ ಭಾರದ್ವಾಜ್ ಹೇಳಿಕೊಂಡಿದ್ದಾರೆ ಎನ್ನಲಾದ ಸಂದರ್ಶನದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆದ ಬಳಿಕ ಸಿಜೆಪಿ ಈ ಪ್ರತಿಭಟನೆ ನಡೆಸಿದೆ.
ಸಂದರ್ಶನದಲ್ಲಿ ಭಾರದ್ವಾಜ್, “ನಿಶು ಕೆ ಬಾಪ್ ಕಾ ಹಮ್ ಸರ್ ಫಾಡೇ ಹೈ” ಎಂದು ಹೇಳಿ, ಕುಮಾರ್ ಅವರ ತಲೆಗೆ ಹೊಡೆದಿದ್ದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ ತಾನು ಜೈಲಿಗೆ ಹೋಗಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.
“ಇಡೀ ಜಗತ್ತಿಗೆ ಗೊತ್ತಾಗಲಿ, ನಾನು ಜೈಲಿಗೂ ಹೋಗಿಲ್ಲ. ಇಡೀ ರಾತ್ರಿ ಹೊರಗಡೆ ಓಡಾಡುತ್ತಿದ್ದೆ” ಎಂದು ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಇದರ ಬೆನ್ನಲ್ಲೇ ಪೊಲೀಸರ ವಿರುದ್ಧ ಸಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಭಾರದ್ವಾಜ್ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಲು ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸಿಜೆಪಿ ಆರೋಪಿಸಿದೆ.
ಕ್ರಮ ಬೇಕಿದ್ದರೆ ನ್ಯಾಯಾಲಯದ ಮೊರೆ ಹೋಗುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ಮೊದಲ ದಿನದಿಂದಲೂ ನಮ್ಮ ಪ್ರತಿಭಟನೆಯೊಂದಿಗೆ ಒಬ್ಬ ಅಪ್ರಾಪ್ತ ಬಾಲಕಿ ಇದ್ದಾಳೆ. ಆಕೆಯ ತಂದೆ ಸಂಜಯ್ ಅವರೂ ಆಕೆಯೊಂದಿಗೆ ಬರುತ್ತಾರೆ” ಎಂದು ದಾಸ್ ಪೊಲೀಸ್ ಠಾಣೆಯ ಹೊರಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಕೆಲವರು ನುಗ್ಗಿದ ಬಳಿಕ ಗಲಾಟೆ ಉಂಟಾಗಿದ್ದು, ಈ ವೇಳೆ ಕುಮಾರ್ ಮೇಲೆ ಹಲ್ಲೆ ನಡೆದಿದೆ ಎಂದು ದಾಸ್ ಆರೋಪಿಸಿದ್ದಾರೆ.
ಕೊಲೆ ಯತ್ನದ ಆರೋಪ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸಿಜೆಪಿ ಒತ್ತಾಯಿಸಿತ್ತು. ಆದರೆ, ಪೊಲೀಸರು ತಮ್ಮ ಮನವಿಗೆ ಸ್ಪಂದಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಗಂಭೀರ ಪ್ರಕರಣದ ಸೆಕ್ಷನ್ ಸೇರಿಸುವಂತೆ ನಾವು ಕೇಳಿದ್ದೆವು. ಇದರಿಂದ ಆರೋಪಿಯನ್ನು ತಕ್ಷಣ ಬಂಧಿಸಬಹುದಾಗಿತ್ತು. ಆದರೆ, ಪೊಲೀಸರು ಅದನ್ನು ಸಂಪೂರ್ಣವಾಗಿ ನಿರಾಕರಿಸಿದರು. ನ್ಯಾಯಾಲಯದಿಂದ ಆದೇಶ ಪಡೆದುಕೊಂಡು ಬರುವಂತೆ ಹೇಳಿದರು ಎಂದು ದಾಸ್ ಆರೋಪಿಸಿದ್ದಾರೆ.
ಘಟನೆಯ ಬಳಿಕ ಬಂಧನದಿಂದ ತಪ್ಪಿಸಿಕೊಂಡಿರುವುದಾಗಿ ಭಾರದ್ವಾಜ್ ಹೆಮ್ಮೆಪಟ್ಟುಕೊಂಡಿದ್ದಾರೆ. ಹಲ್ಲೆಯಲ್ಲಿ ಭಾಗಿಯಾಗಿರುವ ಇತರರನ್ನು ಕೂಡ ಗುರುತಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ, ಕುಮಾರ್ ಅವರ ತಲೆಬುರುಡೆಗೆ ಮುರಿತವಾಗಿದೆ ಎಂಬ ಆರೋಪವನ್ನು ದೆಹಲಿ ಪೊಲೀಸರು ತಳ್ಳಿಹಾಕಿದ್ದಾರೆ. ಗಲಾಟೆಯ ವೇಳೆ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ ಜುಲೈ 20ರ ಘಟನೆಯಲ್ಲಿ ಭಾಗಿಯಾಗಿದ್ದ ಇತರರನ್ನು ಕೂಡ ಪೊಲೀಸರು ಇದುವರೆಗೆ ಗುರುತಿಸಿಲ್ಲ ಎಂದು ಸಿಜೆಪಿ ಆರೋಪಿಸಿದೆ.
ಸಿಜೆಪಿ ಮತ್ತು ಹೋರಾಟಗಾರ ಸೋನಂ ವಾಂಗ್‌ಚುಕ್ ಆಯೋಜಿಸಿದ್ದ ಜುಲೈ 20ರ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ಪ್ರತಿಭಟನಾಕಾರರು ಸಂಸತ್ ಭವನದತ್ತ ಮೆರವಣಿಗೆ ನಡೆಸಲು ಯತ್ನಿಸಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಸೇರಿದಂತೆ ಬಲಪ್ರಯೋಗ ನಡೆಸಿದ್ದರು.
ಶುಕ್ರವಾರ ಸಿಜೆಪಿ ಬೆಂಬಲಿಗರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ್ದ ಹಿನ್ನೆಲೆಯಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.