ಭುವನೇಶ್ವರ: ಮುಸ್ಲಿಮರನ್ನು ಗುರಿಯಾಗಿಸಲು SIR ಅಸ್ತ್ರವಾಗಬಾರದು, ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಮುಸ್ಲಿಮರನ್ನು ಬಾಂಗ್ಲಾದೇಶಿ ನುಸುಳುಕೋರರೆಂದು ಬಿಂಬಿಸಬೇಡಿ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ (S Y Quraishi) ಹೇಳಿದ್ದಾರೆ.
ಒಡಿಶಾ ಸಾಹಿತ್ಯ ಉತ್ಸವದ (OLF) 14ನೇ ಆವೃತ್ತಿಯಲ್ಲಿ ಕವೇರಿ ಬಮ್ಜಾಯ್ ಅವರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಖುರೇಷಿ, 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಮುಸ್ಲಿಂ ಮತದಾರರನ್ನು ಗುರಿಯಾಗಿಸಲು ಬಳಸಬಾರದು ಎಂದರು.
ಅಲ್ಲದೆ 'ಮತದಾರರ ಪಟ್ಟಿ ಹಾಗೂ ಪೌರತ್ವದ ಕುರಿತಾಗಿ ನಡೆಯುತ್ತಿರುವ ಚರ್ಚೆಗಳು ಭಾರತದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಸ್ವರೂಪದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ' ಎಂದು ಅವರು ಎಚ್ಚರಿಸಿದರು.
ಮುಸ್ಲಿಂ ಮತದಾರರನ್ನು ‘ಬಾಂಗ್ಲಾದೇಶಿ ನುಸುಳುಕೋರರು’ ಎಂದು ಬಿಂಬಿಸುವ ರಾಜಕೀಯ ವಾಕ್ಸಮರದ ಹಿನ್ನೆಲೆಯಲ್ಲಿ SIR ಪ್ರಕ್ರಿಯೆ ನಡೆಯುತ್ತಿದ್ದು, ಇದನ್ನು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲು ಬಳಸುವಂತಾಗಬಾರದು ಎಂದು ಅವರು ಹೇಳಿದರು.
‘SIR ಪ್ರಕ್ರಿಯೆ ಹೊರಗಿಡುವಿಕೆಯತ್ತ ಗಮನಹರಿಸಿದೆ’
ಈ ಹಿಂದೆ ಕೂಡ SIR ಪ್ರಕ್ರಿಯೆಯನ್ನು ಟೀಕಿಸಿದ್ದ ಖುರೇಷಿ, ಇದು ಮತದಾರರನ್ನು ಪಟ್ಟಿಯಿಂದ ಹೊರಗಿಡುವುದರತ್ತ ಹೆಚ್ಚು ಗಮನಹರಿಸಿರುವ ಪ್ರಕ್ರಿಯೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.
ವಿದೇಶಿಗರನ್ನು ಪತ್ತೆಹಚ್ಚುವ ನೆಪದಲ್ಲಿ ಕೋಟ್ಯಂತರ ಮತದಾರರಿಂದ ದಾಖಲೆಗಳನ್ನು ಸಲ್ಲಿಸುವಂತೆ ಮಾಡುವುದು ಹಾಗೂ ವ್ಯಾಪಕ ಪರಿಶೀಲನೆಗೆ ಒಳಪಡಿಸುವುದರ ಅಗತ್ಯವೇನು ಎಂದು ಅವರು ಪ್ರಶ್ನಿಸಿದ್ದರು.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳ ಪ್ರಕ್ರಿಯೆಯ ಮೇಲೂ ಇಂತಹ ಕ್ರಮಗಳು ಪರಿಣಾಮ ಬೀರುತ್ತವೆ ಎಂದು ಖುರೇಷಿ ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.
‘ಮತದಾರನಾಗುವುದು ಸಂವಿಧಾನಿಕ ಹಕ್ಕು’
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಸಂವಿಧಾನ ನೀಡಿರುವ ಹಕ್ಕು, ಚುನಾವಣಾ ಆಯೋಗ ನೀಡುವ ಯಾವುದೇ ಅನುಕಂಪ ಅಥವಾ ಕೊಡುಗೆಯಲ್ಲ ಎಂದು ಖುರೇಷಿ ಹೇಳಿದ್ದಾರೆ.
ಅಂತೆಯೇ ರಾಜಕೀಯ ವಾಕ್ಸಮರದಲ್ಲಿ ಅಕ್ರಮ ವಲಸಿಗರನ್ನು ಮುಸ್ಲಿಂ ಸಮುದಾಯದೊಂದಿಗೆ ಜೋಡಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿಯಿಂದ ಮುಸ್ಲಿಮರ ಹೆಸರುಗಳು ಅಸಮಾನ ಪ್ರಮಾಣದಲ್ಲಿ ಹೊರಗುಳಿಯುವ ಸಾಧ್ಯತೆಯ ಬಗ್ಗೆ ಆತಂಕಗಳು ವ್ಯಕ್ತವಾಗುತ್ತಿವೆ.
‘ಭಾರತದ ಜಾತ್ಯತೀತ ಸ್ವರೂಪಕ್ಕೇ ಅಪಾಯ’
ತಮ್ಮ ವೈಯಕ್ತಿಕ ಗುರುತು ಹಾಗೂ ಸಾರ್ವಜನಿಕ ಜೀವನದ ದೀರ್ಘ ಅನುಭವವನ್ನು ನೆನಪಿಸಿಕೊಂಡ ಖುರೇಷಿ, ಭಾರತವನ್ನು ಸಾಂಪ್ರದಾಯಿಕವಾಗಿ ‘ವಿಶ್ವದ ಅತ್ಯಂತ ಜಾತ್ಯತೀತ ದೇಶ’ ಎಂದು ಬಣ್ಣಿಸಿದರು.
ವಿಭಜನೆಯ ಸಂದರ್ಭದಲ್ಲಿ ಧಾರ್ಮಿಕ ಆಧಾರದ ಮೇಲೆ ಪಾಕಿಸ್ತಾನವನ್ನು ರಚಿಸುವ ನಿರ್ಧಾರ ಅಂದಿನ ಆಯ್ಕೆಯಾಗಿತ್ತು. ಆದರೆ ಭಾರತ ಜಾತ್ಯತೀತ ರಾಷ್ಟ್ರವಾಗಿ ಉಳಿಯುವ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು ಎಂದು ಅವರು ಹೇಳಿದರು.
ಆದರೆ ಪ್ರಸ್ತುತ ಜಾತ್ಯತೀತತೆ ಅಪಾಯದಲ್ಲಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ ಅವರು, ಇದು ತಾತ್ಕಾಲಿಕ ಹಂತವಾಗಿರಲಿ ಮತ್ತು ಅಂತಿಮವಾಗಿ ‘ಭಾರತದ ಆತ್ಮ’ ಮತ್ತೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲಿ ಎಂಬ ಆಶಯ ವ್ಯಕ್ತಪಡಿಸಿದರು.
ಮೋಹನ್ ಭಾಗವತ್ ಭೇಟಿ ನೆನಪಿಸಿಕೊಂಡ ಖುರೇಷಿ
ಮುಸ್ಲಿಮರ ವಿರುದ್ಧದ ದ್ವೇಷದ ವಾತಾವರಣಕ್ಕೆ ಕಾರಣವಾಗಿರುವ ಮೂಲವನ್ನು ಅರ್ಥಮಾಡಿಕೊಳ್ಳುವ ಹಾಗೂ ಅದರೊಂದಿಗೆ ಸಂವಾದ ನಡೆಸುವ ಉದ್ದೇಶದಿಂದ ಮುಸ್ಲಿಂ ನಿಯೋಗವೊಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದ ಸಂದರ್ಭವನ್ನೂ ಖುರೇಷಿ ನೆನಪಿಸಿಕೊಂಡರು. ಮುಸ್ಲಿಮರ ವಿರುದ್ಧದ ದ್ವೇಷದ ನಿರೂಪಣೆಗೆ ಕಾರಣವಾಗಿರುವ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅವುಗಳನ್ನು ಪರಿಹರಿಸುವ ಉದ್ದೇಶ ನಿಯೋಗಕ್ಕಿತ್ತು. ಇಂತಹ ನಿರೂಪಣೆಗಳು ಹೆಚ್ಚುತ್ತಿರುವ ಕೋಮು ಧ್ರುವೀಕರಣಕ್ಕೆ ಕಾರಣವಾಗಿವೆ ಎಂದು ಅವರು ಹೇಳಿದರು.
‘ಸಂವಾದಕ್ಕೆ ಮಹತ್ವವಿದೆ’
ಮುಸ್ಲಿಮರ ವಿರುದ್ಧ ನಡೆಯುತ್ತಿದೆ ಎಂದು ಅವರು ಹೇಳಿರುವ ದ್ವೇಷದ ಅಭಿಯಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರವಾಗಿ ಚರ್ಚಿಸುವ ಸಾಧ್ಯತೆ ಬಗ್ಗೆ ಕೇಳಿದಾಗ, ಸಂವಾದ ಮುಂದುವರಿಸುವುದು ಅತ್ಯಂತ ಮುಖ್ಯ ಎಂದು ಖುರೇಷಿ ಅಭಿಪ್ರಾಯಪಟ್ಟಿದ್ದು, ಮಾತ್ರವಲ್ಲದೇ ಸಮಾಜದಲ್ಲಿ ಮೂಡಿರುವ ಆತಂಕಗಳು ಹಾಗೂ ದ್ವೇಷದ ವಾತಾವರಣವನ್ನು ಎದುರಿಸಲು ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.