ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ಲಕ್ಷಣಗಳು ಕಂಡುಬಂದರೆ ಶಿಕ್ಷಕರು ಎಚ್ಚರಿಕೆಯಿಂದ ಗಮನಿಸಿ, ಅವರಿಗೆ ವ್ಯಸನದಿಂದ ಹೊರಬರಲು ನೆರವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅಲ್ಲದೆ, ಕ್ರೀಡೆ, ದೈಹಿಕ ಆಟಗಳು ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವ ಮೂಲಕ ವಿದ್ಯಾರ್ಥಿಗಳ ಅತಿಯಾದ ಮೊಬೈಲ್ ಗೀಳಿನಿಂದ ಹೊರಬರಲು ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.
ಶಿಕ್ಷಕರ ದಿನಾಚರಣೆಯ ಮುನ್ನಾದಿನವಾದ ನಿನ್ನೆ ಶುಕ್ರವಾರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಮಕ್ಕಳ ಬಾಲ್ಯವನ್ನು ಕಾಪಾಡುವುದರ ಜೊತೆಗೆ ಅವರ ಸಹಜ ಕುತೂಹಲವನ್ನು ಬೆಳೆಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಶಿಕ್ಷಕರು ಕೇವಲ ಅಂಕಗಳತ್ತ ಗಮನಹರಿಸದೆ, ಮಕ್ಕಳ ನಡವಳಿಕೆ ಮತ್ತು ದೈನಂದಿನ ಜೀವನದ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಈಗ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಪಾತ್ರ ಮತ್ತಷ್ಟು ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ತರಗತಿಯ ಕಲಿಕೆಯನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲು ಅನುಸರಿಸಬಹುದಾದ ಸೃಜನಾತ್ಮಕ ಮಾರ್ಗಗಳನ್ನು ಪರಸ್ಪರ ಹಂಚಿಕೊಳ್ಳುವಂತೆಯೂ ಶಿಕ್ಷಕರಿಗೆ ಸಲಹೆ ನೀಡಿದರು.
ಪ್ರಧಾನಿ ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸದಲ್ಲಿ ನಡೆದ ಸಂವಾದದ ವಿಡಿಯೊವನ್ನು ಇಂದು ಬಿಡುಗಡೆ ಮಾಡಲಾಗಿದೆ.
ಮಾದಕ ವಸ್ತುಗಳ ದುರ್ಬಳಕೆ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಕೆಲವು ದೊಡ್ಡ ನಗರಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಈ ಸಮಸ್ಯೆಯಿಂದ ಯಾರಾದರೂ ಬಾಧಿತರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟವಾಗುತ್ತಿದೆ. ಯಾರು ಯಾರಿಗೆ ಏನು ನೀಡುತ್ತಾರೆ ಎಂಬುದೇ ತಿಳಿಯದ ಪರಿಸ್ಥಿತಿ ಇದೆ ಎಂದು ಹೇಳಿದರು.
ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರು ಜಾಗೃತಿ ಮೂಡಿಸುವಲ್ಲಿ ಮುಂದಾಳತ್ವ ವಹಿಸಬೇಕು. ಯಾವುದೇ ಮಗುವಿನ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದರೆ ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.
ಶಿಕ್ಷಕರು ಪಠ್ಯಪುಸ್ತಕಗಳು ಮತ್ತು ಪಠ್ಯಕ್ರಮವನ್ನು ಮೀರಿ ವಿದ್ಯಾರ್ಥಿಗಳ ಜೀವನದ ಭಾಗವಾಗಬೇಕು ಎಂದು ಪ್ರಧಾನಿ ಹೇಳಿದರು.
ವಿದ್ಯಾರ್ಥಿಯ ಬಾಲ್ಯವನ್ನು ಕಳೆದುಹೋಗಲು ನೀವು ಬಿಡಬಾರದು. ವಿದ್ಯಾರ್ಥಿಗಳ ಜೀವನದಲ್ಲಿ ಬಾಲ್ಯವನ್ನು ಜೀವಂತವಾಗಿರಿಸುವ ಮೂಲಕ ಶಿಕ್ಷಕರು ನೀಡಬಹುದಾದ ದೊಡ್ಡ ಕೊಡುಗೆಯನ್ನು ನೀಡಬಹುದು ಎಂದು ಹೇಳಿದರು.
ಮಕ್ಕಳಲ್ಲಿ ಮೂಲಭೂತ ಸ್ವಭಾವ ಮತ್ತು ಕುತೂಹಲ ಒಂದೇ ರೀತಿಯದ್ದಾಗಿರುತ್ತದೆ. ಶಿಕ್ಷಕರು ಈ ಕುತೂಹಲವನ್ನು ಬೆಳೆಸಿ ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದರೆ, ಅವರ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಬಹುದು ಎಂದು ಪ್ರಧಾನಿ ಮೋದಿ ಹೇಳಿದರು.
ಸ್ಕ್ರೀನ್ ಟೈಮ್ ಕುರಿತು ಮಾತನಾಡಿದ ಪ್ರಧಾನಿ, ವಿದ್ಯಾರ್ಥಿಗಳಲ್ಲಿ ಇದು ಪ್ರಮುಖ ಕಳವಳದ ವಿಷಯವಾಗಿದೆ ಎಂದು ಹೇಳಿದರು. ಮಕ್ಕಳು ಎಷ್ಟು ಸಮಯವನ್ನು ಮೊಬೈಲ್ ಹಾಗೂ ಇತರ ಸ್ಕ್ರೀನ್‌ಗಳ ಮುಂದೆ ಕಳೆಯುತ್ತಾರೆ, ತಡರಾತ್ರಿಯವರೆಗೂ ಮೊಬೈಲ್ ಬಳಸುತ್ತಾರೆಯೇ ಎಂಬುದರ ಕುರಿತು ಪೋಷಕರೊಂದಿಗೆ ಶಿಕ್ಷಕರು ಮಾತನಾಡಬೇಕು ಎಂದು ಅವರು ಸಲಹೆ ನೀಡಿದರು.
ಕ್ರೀಡೆ, ದೈಹಿಕ ಆಟಗಳು ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸುವ ಮೂಲಕ ಸಹಜವಾಗಿಯೇ ಸ್ಕ್ರೀನ್ ಟೈಮ್ ಕಡಿಮೆ ಮಾಡಬಹುದು ಎಂದು ಅವರು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಲ್ಲೇಖಿಸಿದ ಪ್ರಧಾನಿ, ಮಕ್ಕಳನ್ನು ತರಗತಿಯ ಹೊರಗೆ ಕರೆದೊಯ್ದು, ನೈಜ ಜಗತ್ತಿನ ಕೌಶಲ್ಯಗಳು ಹಾಗೂ ವಿವಿಧ ರೀತಿಯ ಕೆಲಸಗಳೊಂದಿಗೆ ಅವರನ್ನು ಸಂಪರ್ಕಿಸುವ ಮಹತ್ವವನ್ನು ಒತ್ತಿಹೇಳಿದರು.
ತಮ್ಮ ಪ್ರದೇಶದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುತ್ತಿರುವ ಶಿಕ್ಷಕಿಯೊಬ್ಬರನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ತಾವು ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನವನ್ನು ಆರಂಭಿಸಿರುವುದಾಗಿ ಹೇಳಿದರು.
ಹೆಚ್ಚೆಚ್ಚು ಮಹಿಳೆಯರು ತಪಾಸಣೆಗೆ ಮುಂದೆ ಬರುತ್ತಿರುವುದನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಈ ಸಂಬಂಧ ಗಿನ್ನೆಸ್ ವಿಶ್ವ ದಾಖಲೆ ಕೂಡ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಈ ವರ್ಷ ಮೂರು ಇಲಾಖೆಗಳ ವ್ಯಾಪ್ತಿಯಿಂದ ಒಟ್ಟು 82 ಶಿಕ್ಷಕರು ಮತ್ತು ಶಿಕ್ಷಣ ತಜ್ಞರನ್ನು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 48 ಶಿಕ್ಷಕರು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್‌ಗಳ 21 ಶಿಕ್ಷಕರು ಅಥವಾ ಬೋಧಕ ಸಿಬ್ಬಂದಿ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದ 13 ಕೌಶಲ್ಯ ತರಬೇತುದಾರರು ಸೇರಿದ್ದಾರೆ.