ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಬಿಡುಗಡೆ ಮಾಡದೆ ಕರ್ನಾಟಕವು ಆದೇಶ ಉಲ್ಲಂಘಿಸಿದೆ ಎಂದು ಆರೋಪಿಸಿರುವ ದಕ್ಷಿಣ ಭಾರತ ನದಿಗಳ ಜೋಡಣೆ ರೈತ ಸಂಘದ ಅಧ್ಯಕ್ಷ ಪಿ. ಅಯ್ಯಾಕಣ್ಣು, ಕರ್ನಾಟಕದಿಂದ 1 ಲಕ್ಷ ಕೋಟಿ ರೂ. ಪರಿಹಾರ ಪಡೆಯಲು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಯ್ಯಾಕಣ್ಣು, ಸುಪ್ರೀಂ ಕೋರ್ಟ್ ತೀರ್ಪಿನಂತೆ ಕರ್ನಾಟಕವು ತಮಿಳುನಾಡಿಗೆ ನೀರು ಬಿಡುಗಡೆ ಮಾಡಿಲ್ಲ. ಇದರಿಂದ ತಮಿಳುನಾಡು ಸರ್ಕಾರ ತನ್ನ ರೈತರಿಗೆ ಅಗತ್ಯ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಕರ್ನಾಟಕವು ಪ್ರಸ್ತುತ ಅಗತ್ಯವಿರುವ ಕನಿಷ್ಠ 18,000 ಕ್ಯೂಸೆಕ್ ಬದಲಿಗೆ ಕೇವಲ 7,000 ಕ್ಯೂಸೆಕ್ ನೀರನ್ನು ಮಾತ್ರ ಬಿಡುಗಡೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದಾಗ ಜಲಸಂಪನ್ಮೂಲ ಸಚಿವ ಎನ್.ಎಸ್. ಚಲುವರಾಯಸ್ವಾಮಿ ಪ್ರತಿಕ್ರಿಯಿಸಲು ನಿರಾಕರಿಸಿದರು.
ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಈ ಹೇಳಿಕೆಗೆ ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ ಎಂದರು. ತಮಿಳುನಾಡು ರೈತ ಮುಖಂಡರ ಈ ಹೇಳಿಕೆಗೆ ಕರ್ನಾಟಕದ ರೈತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಈ ಭಾಗದಲ್ಲಿ ಬೆಳೆಗಳಿಗೆ ನೀರಿನ ಲಭ್ಯತೆಯೇ ಇಲ್ಲ. ಇಂತಹ ಪರಿಸ್ಥಿತಿಯಲ್ಲೂ ಕರ್ನಾಟಕ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.
ಭಾಗಮಂಡಲದಿಂದ ಸಮುದ್ರ ತೀರದವರೆಗೆ ಕಾವೇರಿ ಜಲಾನಯನ ಪ್ರದೇಶವನ್ನು ತಾವು ವೈಯಕ್ತಿಕವಾಗಿ ಅಧ್ಯಯನ ಮಾಡಿರುವುದಾಗಿ ಹೇಳಿದ ಚಂದ್ರಶೇಖರ್, ಕರ್ನಾಟಕದ 120ಕ್ಕೂ ಹೆಚ್ಚು ತಾಲೂಕುಗಳು ಬರದಿಂದ ತತ್ತರಿಸುತ್ತಿರುವಾಗ ಇಂತಹ ಬೇಡಿಕೆಗಳನ್ನು ಹೇಗೆ ಮುಂದಿಡಲು ಸಾಧ್ಯ ಎಂದು ಪ್ರಶ್ನಿಸಿದರು.