ಭಂಡಾರಾ: ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ನಾಗ್ಪುರ-ರಾಯ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಪಿಂಪಲ್‌ಗಾಂವ್ ಬಳಿ ಈ ಅಪಘಾತ ಸಂಭವಿಸಿದ್ದು, ಹೆದ್ದಾರಿ ಬದಿಯ ಪೆಟ್ರೋಲ್ ಪಂಪ್‌ನಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಟ್ರಕ್‌ನ ಹಿಂಭಾಗಕ್ಕೆ, ವೇಗವಾಗಿ ಬಂದ ಬೊಲೆರೊ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ.
ಘಟನಾ ಸ್ಥಳದಲ್ಲೇ ಎಂಟು ಮಂದಿ ಮೃತಪಟ್ಟರೆ, ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ ಒಂಬತ್ತಕ್ಕೇರಿದೆ.
ಅಪಘಾತದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಕೋಲಿ ಉಪ-ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.
ಅಪಘಾತಕ್ಕೂ ಕೆಲ ಕ್ಷಣಗಳ ಮೊದಲು ಬೊಲೆರೊ ವಾಹನ ಚಲಿಸುತ್ತಿದ್ದ ದೃಶ್ಯಗಳು ಹೆದ್ದಾರಿಯ ಸಮೀಪವಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಡಿಕ್ಕಿ ಸಂಭವಿಸುವ ಸ್ವಲ್ಪ ಸಮಯದ ಮೊದಲು ಬೊಲೆರೊ ಅತಿ ವೇಗವಾಗಿ ಚಲಿಸುತ್ತಿರುವುದು ಕಂಡು ಬಂದಿದೆ.
ಅಪಘಾತಕ್ಕೆ ಕಾರಣವಾದ ಘಟನಾವಳಿಗಳ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬೊಲೆರೊ ವಾಹನ ಅತಿ ವೇಗದಲ್ಲಿ ಚಲಿಸುತ್ತಿದ್ದಿರಬಹುದು ಮತ್ತು ಟ್ರಕ್‌ಗೆ ಡಿಕ್ಕಿ ಹೊಡೆಯುವ ಮೊದಲು ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಪೊಲೀಸ್ ತನಿಖೆಯ ನಂತರವೇ ಅಪಘಾತಕ್ಕೆ ನಿಖರ ಕಾರಣ ತಿಳಿದುಬರಲಿದೆ.