ಗುವಾಹಟಿ (ಅಸ್ಸಾಂ): ತನ್ನದೇ ಬಾಳಸಂಗಾತಿಯನ್ನು ಕಟುಕರಂತೆ ಕೊಂದು, ರುಂಡವನ್ನು ಫ್ರಿಡ್ಜ್‌ನಲ್ಲಿ ಬಚ್ಚಿಟ್ಟು ಇಡೀ ದೇಶವೇ ಬೆಚ್ಚಿಬಿಳುವಂತೆ ಮಾಡಿದ್ದ ಆ ಕ್ರೂರಿಯ ಅಂತ್ಯವೂ ಅಷ್ಟೇ ರಕ್ತಸಿಕ್ತವಾಗಿ ಮುಕ್ತಾಯಗೊಂಡಿದೆ. ಹೌದು, ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಮಾನುಜ್ ಗೋಸ್ವಾಮಿ ಇಂದು ಮುಂಜಾನೆ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟಿದ್ದಾನೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಗುವಾಹಟಿಯ ಹತಿಗಾಂವ್ ಪ್ರದೇಶದ ಫ್ಲಾಟ್ ಒಂದರಲ್ಲಿ ವಾಸವಿದ್ದ ಕ್ಯಾಬ್ ಚಾಲಕ ರಾಮಾನುಜ್ ಗೋಸ್ವಾಮಿ, ತನ್ನ ಹೆಂಡತಿ ರಿಯಾ ತಾಲುಕ್ದಾರ್ (25) ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದ. ಆಕೆಯ ಗಂಟಲು ಸೀಳಿ ಕತ್ತರಿಸಿದ್ದಲ್ಲದೆ, ಕತ್ತರಿಸಿದ ತಲೆ ಮತ್ತು ಬೆರಳುಗಳನ್ನು ಕಪ್ಪು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸುತ್ತಿ ಫ್ರಿಡ್ಜ್‌ನ ಒಳಗಡೆ ಇಟ್ಟಿದ್ದ. ಫ್ಲಾಟ್‌ನಿಂದ ಭೀಕರ ವಾಸನೆ ಬಂದಾಗ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದಾಗ ಈ ಘೋರ ಕೃತ್ಯ ಬೆಳಕಿಗೆ ಬಂದಿತ್ತು. ಕೊಲೆಯ ನಂತರ ಆರೋಪಿ ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದ. ಇನ್ನು, ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮಾಧ್ಯಮಗಳ ಕ್ಯಾಮೆರಾ ಮುಂದೆ ಬಂದಿದ್ದ ಆರೋಪಿ ರಾಮಾನುಜ್ ಗೋಸ್ವಾಮಿ, ತಾನು ಮಾಡಿದ ಕೊಲೆಗೆ ಯಾವುದೇ ಪಶ್ಚಾತ್ತಾಪವಾಗಲಿ, ಕ್ಷಮೆಯಾಗಲಿ ಇಲ್ಲ ಎಂದು ನಗುತ್ತಲೇ ಕ್ರೂರವಾಗಿ ಹೇಳಿಕೆ ನೀಡಿದ್ದ. ಅಷ್ಟೇ ಅಲ್ಲದೆ, ಜೈಲಿನಿಂದ ಹೊರಬಂದ ಮೇಲೆ ತನ್ನ ಹೆಂಡತಿಯ ಪ್ರಿಯಕರನನ್ನು ಕೊಲ್ಲುವುದಾಗಿಯೂ ಓಪನ್ ಆಗಿ ಬೆದರಿಕೆ ಹಾಕಿದ್ದ.
ಮುಂದುವರೆದು, ಆರೋಪಿಯ 7 ದಿನಗಳ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ, ಸೋಮವಾರ ಮುಂಜಾನೆ ಸುಮಾರು 3 ಗಂಟೆಯ ಸಮಯದಲ್ಲಿ ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ಆತನನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (GMCH) ಕರೆದೊಯ್ಯುತ್ತಿದ್ದರು. ಈ ವೇಳೆ ನರಕಾಸುರ ಬೆಟ್ಟದ ಸಮೀಪ ಚಲಿಸುತ್ತಿದ್ದ ಪೊಲೀಸ್ ವಾಹನದಿಂದ ರಾಮಾನುಜ್ ಗೋಸ್ವಾಮಿ ದಿಢೀರನೆ ಕೆಳಗೆ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆತನ ತಲೆಗೆ ಭಾರಿ ಬಲವಾದ ಪೆಟ್ಟು ಬಿದ್ದಿದ್ದು, ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.