ಉಧಂಪುರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಬುಧವಾರ ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
ಬುಧವಾರ ರಾತ್ರಿ ಉಧಂಪುರ ಜಿಲ್ಲೆಯ ಮಜಲ್ತಾ ವ್ಯಾಪ್ತಿಯ ಸೋಹನ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಲಭ್ಯವಾದ ನಿಖರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು.
ರಾತ್ರಿ ಸುಮಾರು 9:00 ಗಂಟೆಯ ಸುಮಾರಿಗೆ ಮುನ್ನಡೆಯುತ್ತಿದ್ದ ಭದ್ರತಾ ಪಡೆಗಳ ಮೇಲೆ ಅಡಗಿದ್ದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಜಂಟಿ ಪಡೆಗಳು ಉಗ್ರರ ವಿರುದ್ಧ ತಕ್ಕ ಪ್ರತ್ಯುತ್ತರ ನೀಡಿದವು. ಈ ವೇಳೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಭಾರತೀಯ ಸೇನೆ, ಸಿಆರ್‌ಪಿಎಫ್ (CRPF) ಮತ್ತು ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (SOG) ಜಂಟಿಯಾಗಿ ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿವೆ.
ಹತರಾದ ಉಗ್ರರ ಗುರುತು ಮತ್ತು ಅವರು ಯಾವ ಭಯೋತ್ಪಾದಕ ಸಂಘಟನೆಗೆ ಸೇರಿದವರು ಎಂಬ ವಿವರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಸದ್ಯ ಘಟನಾ ಸ್ಥಳದಲ್ಲಿ ಸಕ್ರಿಯ ಗುಂಡಿನ ಚಕಮಕಿ ಮುಕ್ತಾಯಗೊಂಡಿದ್ದರೂ, ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸಲು ಭದ್ರತಾ ಪಡೆಗಳು ಸುತ್ತಲೂ ಬಿಗಿ ಕಾವಲು ನಿಯೋಜಿಸಿದ್ದು, ತೀವ್ರ ಶೋಧ ಕಾರ್ಯವನ್ನು ಮುಂದುವರಿಸಿವೆ