ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ದು ಗಂಟೆ-ಗಂಟೆಗೂ ಅಚಾನಕ್ ಬೆಳವಣಿಗೆಗಳು ನಡೆಯುತ್ತಿದ್ದು, TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕಾಂಗ್ರೆಸ್' ಅಭ್ಯರ್ಥಿಯ ಬಂಧನವಾಗಿದೆ.
ಮಮತಾ ಬಣದಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ಸಂಚಿತಾ ಪ್ರಧಾನ ದೇ ಅವರು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ಬಳಿಕ ನಾಮಪತ್ರ ಹಿಂಪಡೆದ ಕೆಲವೇ ಗಂಟೆಗಳಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಣೆ ಮಾಡಿದ್ದರು.
ನಂದಿಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವ ನಿರ್ಧಾರವನ್ನು ‘ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವ ಉದ್ದೇಶದಿಂದ’ ಕೈಗೊಳ್ಳಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ಇದಾದ ಕೆಲವೇ ಗಂಟೆಗಳ ಅವಧಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಇದೀಗ ಮಮತಾ ಬಣದ ಬೆಂಬಲ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರ ಬಂಧನವು ನಂದಿಗ್ರಾಮ ಉಪಚುನಾವಣೆಯ ರಾಜಕೀಯ ಬೆಳವಣಿಗೆಗಳಿಗೆ ಮತ್ತೊಂದು ತಿರುವು ನೀಡಿದೆ.
2007ರ ಪ್ರಕರಣ
2007ರ ನಂದಿಗ್ರಾಮ ಭೂಸ್ವಾಧೀನ ವಿರೋಧಿ ಹೋರಾಟದ ಸಂದರ್ಭದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಲನ್ ಪ್ರಧಾನ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಪ್ರಕರಣದ ಹೆಚ್ಚಿನ ವಿವರಗಳು ತಕ್ಷಣ ಲಭ್ಯವಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಮಮತಾ ಬೆಂಬಲ ಘೋಷಿಸಿದ ಬೆನ್ನಲ್ಲೇ ಬಂಧನ
ಶುಕ್ರವಾರ ಮಮತಾ ಬ್ಯಾನರ್ಜಿ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ, ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರನ್ನು ತಮ್ಮ ಬಣ ಬೆಂಬಲಿಸಲಿದೆ ಎಂದು ಘೋಷಿಸಿದ್ದರು.
ಮಮತಾ ಬಣದಿಂದ ಕಣಕ್ಕಿಳಿದಿದ್ದ ಸಂಚಿತಾ ಪ್ರಧಾನ ದೇ ಅವರು ನಾಮಪತ್ರ ಹಿಂಪಡೆದುಕೊಂಡ ಬಳಿಕ ಈ ಘೋಷಣೆ ಹೊರಬಿದ್ದಿತ್ತು. ಸಂಚಿತಾ ಅವರು ಶುಕ್ರವಾರ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ನಬಣ್ಣದಲ್ಲಿ ಭೇಟಿಯಾದ ನಂತರ ನಾಮಪತ್ರ ಹಿಂಪಡೆದುಕೊಂಡಿದ್ದರು.
ಸಹೋದರ ಪಕ್ಷ
ಕಾಂಗ್ರೆಸ್ ಅನ್ನು ‘ಸಹೋದರ ಪಕ್ಷ’ ಎಂದು ಬಣ್ಣಿಸಿದ ಮಮತಾ, ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ನಿರ್ಧಾರವು ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.
“ನನ್ನ ಬಣ ಈ ಹಿಂದೆ ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಧರಿಸಿತ್ತು. ಇದು ಭವಿಷ್ಯದ ಆರಂಭ. ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವ ಸಂದೇಶ ಪಶ್ಚಿಮ ಬಂಗಾಳದಿಂದಲೇ ಆರಂಭವಾಗಲಿ” ಎಂದು ಮಮತಾ ಹೇಳಿದ್ದಾರೆ.
‘ನಾವು ಬೆಂಬಲ ಕೇಳಿಲ್ಲ’ ಎಂದ ಅಧೀರ್ ರಂಜನ್ ಚೌಧರಿ
ಮಮತಾ ಬ್ಯಾನರ್ಜಿ ಅವರ ಬೆಂಬಲ ಘೋಷಣೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ, ಮಮತಾ ತಮ್ಮ ನಿರ್ಧಾರ ಪ್ರಕಟಿಸಲು ಸ್ವತಂತ್ರರು ಎಂದು ಹೇಳಿದ್ದಾರೆ.
ಆದರೆ ಕಾಂಗ್ರೆಸ್ ಅವರ ಬೆಂಬಲವನ್ನು ಕೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಅವರು ರಾಜಕೀಯ ನಾಯಕಿ. ತಮಗೆ ಬೇಕಾದುದನ್ನು ಹೇಳಬಹುದು. ಆದರೆ ವಾಸ್ತವವೆಂದರೆ ಅವರು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ಈಗ ಅವರ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುವುದರಿಂದ ನಮಗೆ ಬೆಂಬಲ ನೀಡುತ್ತಿದ್ದಾರೆ. ನಾವು ಅವರ ಬೆಂಬಲವನ್ನು ಕೇಳಿಲ್ಲ” ಎಂದು ಚೌಧರಿ ಹೇಳಿದ್ದಾರೆ.
2007ರ ನಂದಿಗ್ರಾಮ ಹೋರಾಟ
2007ರಲ್ಲಿ ನಂದಿಗ್ರಾಮದಲ್ಲಿ ನಡೆದ ಭೂಸ್ವಾಧೀನ ವಿರೋಧಿ ಹೋರಾಟವು ಮಮತಾ ಬ್ಯಾನರ್ಜಿ ಅವರ ರಾಜಕೀಯ ಪಯಣದಲ್ಲಿ ಪ್ರಮುಖ ಘಟನೆಯಾಗಿತ್ತು. ಈ ಹೋರಾಟದ ಮೂಲಕ ಎಡರಂಗ ಸರ್ಕಾರದ ವಿರುದ್ಧ ತೃಣಮೂಲ ಕಾಂಗ್ರೆಸ್ ತನ್ನ ರಾಜಕೀಯ ಅಭಿಯಾನವನ್ನು ಮತ್ತಷ್ಟು ಬಲಪಡಿಸಿತ್ತು.
ಪಶ್ಚಿಮ ಬಂಗಾಳವನ್ನು 34 ವರ್ಷಗಳ ಕಾಲ ಆಳಿದ್ದ ಎಡರಂಗವನ್ನು 2011ರಲ್ಲಿ ಸೋಲಿಸಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸುವವರೆಗೆ ಟಿಎಂಸಿ ರಾಜ್ಯದಲ್ಲಿ ಸತತವಾಗಿ ಅಧಿಕಾರದಲ್ಲಿತ್ತು.