ಕಡಪ: ರಾಯಲಸೀಮೆಯ ಹಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಸಾಧಾರಣದಿಂದ ಭಾರಿ ಮಳೆಯಾಗಿದ್ದು, ದೀರ್ಘಕಾಲದ ಒಣಹವೆಯಿಂದ ಕಂಗೆಟ್ಟಿದ್ದ ಜನರಿಗೆ ಕೊಂಚ ನೆಮ್ಮದಿ ನೀಡಿದೆ.
ಅನಂತಪುರದಲ್ಲಿ ಸರಾಸರಿ 43.5 ಮಿ.ಮೀ ಮಳೆ ದಾಖಲಾಗಿದ್ದರೆ, ಯಾಡಿಕಿಯಲ್ಲಿ ಜಿಲ್ಲೆಯಲ್ಲೇ ಗರಿಷ್ಠ 97.6 ಮಿ.ಮೀ ಮಳೆ ಸುರಿದಿದೆ. ಆದರೆ ಮಳೆ ತಡವಾಗಿ ಬಂದಿರುವುದರಿಂದ ಈಗಾಗಲೇ ಒಣಗಿ ಹೋದ ಬೆಳೆಗಳನ್ನು ಉಳಿಸಲು ಸಾಧ್ಯವಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲೆಯ ಮಳೆ ವರ್ಗೀಕರಣದ ಪ್ರಕಾರ ಏಳು ಮಂಡಲಗಳಲ್ಲಿ ಭಾರಿ ಮಳೆ ಹಾಗೂ 18 ಮಂಡಲಗಳಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಮೂರು ಮಂಡಲಗಳಲ್ಲಿ ಹಗುರ ಮಳೆಯಾಗಿದ್ದರೆ, ನಾಲ್ಕು ಮಂಡಲಗಳಲ್ಲಿ ಮಳೆಯೇ ದಾಖಲಾಗಿಲ್ಲ. ಡಿ. ಹಿರೇಹಾಳ್, ರಾಯದುರ್ಗ, ಗುಮ್ಮಗಟ್ಟ ಮತ್ತು ಬ್ರಹ್ಮಸಮುದ್ರಂ ಮಂಡಲಗಳಲ್ಲಿ ಮಳೆಯಾಗಿಲ್ಲ.
ರಾಯಲಸೀಮೆ ಭಾಗದ ವೈಎಸ್‌ಆರ್ ಕಡಪ, ಕರ್ನೂಲ್ ಹಾಗೂ ನಂದ್ಯಾಲ ಜಿಲ್ಲೆಗಳ ಹಲವು ಭಾಗಗಳಲ್ಲೂ ಮಳೆಯಾಗಿದೆ. ವೈಎಸ್‌ಆರ್ ಕಡಪ ಜಿಲ್ಲೆಯ ಪ್ರೊದ್ದಟೂರು, ಮೈದುಕುರು, ಕಮಲಾಪುರಂ, ಚೆನ್ನೂರು ಮತ್ತು ರಾಯಚೋಟಿಯಲ್ಲಿ ಸುಮಾರು 30 ಮಿ.ಮೀ ಮಳೆ ದಾಖಲಾಗಿದೆ.
ಕರ್ನೂಲ್‌ನ ಆದೋನಿ ಮತ್ತು ಕೋಡುಮೂರಿನಲ್ಲಿ ಭಾರಿ ಮಳೆಯಾಗಿದ್ದು, ಆದೋನಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನಂದ್ಯಾಲ ನಗರದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಭಾರಿ ಮಳೆ ಸುರಿದ ಪರಿಣಾಮ ಹಲವು ವಸತಿ ಪ್ರದೇಶಗಳಲ್ಲಿ ನೀರು ನಿಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಅನಂತಪುರ ಜಿಲ್ಲೆಯಲ್ಲಿ ನರ್ಪಲದಲ್ಲಿ 86.8 ಮಿ.ಮೀ, ಬೊಮ್ಮನಹಾಳ್‌ನಲ್ಲಿ 80.2 ಮಿ.ಮೀ, ಪಮಿಡಿಯಲ್ಲಿ 80 ಮಿ.ಮೀ ಹಾಗೂ ತಾಡಿಪತ್ರಿಯಲ್ಲಿ 73.4 ಮಿ.ಮೀ ಮಳೆಯಾಗಿದೆ. ಪೆದ್ದವಡುಗೂರಿನಲ್ಲಿ 72.4 ಮಿ.ಮೀ, ಯಲ್ಲನೂರಿನಲ್ಲಿ 69.6 ಮಿ.ಮೀ, ಆತ್ಮಕೂರಿನಲ್ಲಿ 63.2 ಮಿ.ಮೀ, ಗಾರ್ಲದಿನ್ನೆಯಲ್ಲಿ 62.4 ಮಿ.ಮೀ, ಉರವಕೊಂಡದಲ್ಲಿ 62.2 ಮಿ.ಮೀ, ಪುಟ್ಲೂರಿನಲ್ಲಿ 58.2 ಮಿ.ಮೀ ಹಾಗೂ ವಜ್ರಕರೂರಿನಲ್ಲಿ 55.2 ಮಿ.ಮೀ ಮಳೆ ದಾಖಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉಕ್ಕಿ ಹರಿದ ಕಾಲುವ, ಸಂಚಾರ ಸ್ಥಗಿತ
ಇನ್ನು ಮಳೆಯಿಂದ ಕೆಲವೆಡೆ ರಸ್ತೆ ಸಂಪರ್ಕಕ್ಕೂ ಅಡ್ಡಿಯಾಗಿದೆ. ವಿದ್ಯಾಪನಕಲ್ ಮಂಡಲದ ಪೆಂಚುಲಪಾಡು ಮತ್ತು ಪೋಲಿಕಿ ಗ್ರಾಮಗಳ ನಡುವಿನ ರಸ್ತೆಯಲ್ಲಿ ಕಾಲುವೆ ಉಕ್ಕಿ ಹರಿದ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ.
ಮಳೆ ನಷ್ಟ ರೈತರ ಅಳಲು
“ಈ ಮಳೆ ಬೆಳೆಗಳನ್ನು ಉಳಿಸಲು ತುಂಬಾ ತಡವಾಗಿ ಬಂದಿದೆ. ಈಗಾಗಲೇ ಬೆಳೆಗಳು ಒಣಗಿ ಹೋಗಿವೆ. ಆದರೆ ಬೋರ್‌ವೆಲ್ ನೀರಿನ ಆಧಾರದಲ್ಲಿ ಭತ್ತ ಬೆಳೆದಿರುವ ರೈತರಿಗೆ ಈ ಮಳೆ ಸ್ವಲ್ಪ ಉಪಯೋಗವಾಗಬಹುದು” ಎಂದು ಪನಯಂ ಮಂಡಲದ ರೈತ ಸಿ. ಮಲ್ಲಿಕಾರ್ಜುನ ರೆಡ್ಡಿ ಹೇಳಿದ್ದಾರೆ.
ಅಂತೆಯೇ ಈ ಅಲ್ಪ ಮಳೆಯು ಮೇವಿನ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಜಾನುವಾರುಗಳಿಗೆ ಕೊಂಚ ಪರಿಹಾರ ನೀಡಬಹುದು ಎಂದು ರೈತರು ಹೇಳಿದ್ದಾರೆ. ಆದರೆ ಹೊಸದಾಗಿ ಕೃಷಿ ಆರಂಭಿಸಲು ಈ ಮಳೆ ಸಾಕಾಗುವುದಿಲ್ಲ ಎಂಬುದು ಅವರ ಅಭಿಪ್ರಾಯ.
“ಹಾನಿ ಈಗಾಗಲೇ ಸಂಭವಿಸಿದೆ. ಈ ಮಳೆಯಿಂದ ಹೊಸದಾಗಿ ಬೆಳೆ ಬೆಳೆಯಲು ಹೆಚ್ಚಿನ ಅವಕಾಶವಿಲ್ಲ. ಗರಿಷ್ಠವೆಂದರೆ ಮೇವಿನ ಲಭ್ಯತೆ ಸ್ವಲ್ಪ ಸುಧಾರಿಸಬಹುದು” ಎಂದು ಕಡಪ ಜಿಲ್ಲೆಯ ಖಾಜಿಪೇಟೆ ಮಂಡಲದ ರೈತ ಎಂ. ಜಯರಾಜು ಹೇಳಿದ್ದಾರೆ.
ಮಳೆ ಕೊರತೆ
ಸೆಪ್ಟೆಂಬರ್ 19ರ ವೇಳೆಗೆ ಅಧಿಕೃತ APSDPS ಅಂಕಿಅಂಶಗಳ ಪ್ರಕಾರ ಅನಂತಪುರ ಜಿಲ್ಲೆಯಲ್ಲಿ ಹಂಗಾಮಿ ಮಳೆ ಕೊರತೆ 52.1% ರಷ್ಟಿತ್ತು. ಅಂತೆಯೇ ಮುಂದಿನ 36 ಗಂಟೆಗಳಲ್ಲಿ ರಾಯಲಸೀಮೆಯ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ರೇಕುಲಕುಂಟಾ ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ IMD ಮುನ್ಸೂಚನೆಯಲ್ಲೂ ರಾಯಲಸೀಮೆ ಸೇರಿದಂತೆ ಅನಂತಪುರದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಮೇಲ್ಮೈ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.