ಉತ್ತರಾಖಂಡ: ಅತಿಯಾದ ಮೊಬೈಲ್ ಬಳಕೆಯಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಹೊರಟ ಶಾಲೆಯೊಂದು ಅನುಸರಿಸಿದ ವಿಚಿತ್ರ ಮಾರ್ಗದಿಂದಾಗಿ ಪುಟ್ಟ ಮಕ್ಕಳು ಭಯಗೊಂಡು ಚೀರಾಡಿದ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಖಟಿಮಾದಲ್ಲಿ ನಡೆದಿದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಅಧಿಕೃತ ತನಿಖೆಗೆ ಕಾರಣವಾಗಿದೆ. ಖಟಿಮಾದ ಬಿರಿಯಾ ಮಜೋಲಾ ಪ್ರದೇಶದಲ್ಲಿರುವ ಒಂದು ಶಾಲೆಯಲ್ಲಿ ಈ ವಿಲಕ್ಷಣ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅತಿಯಾದ ಸ್ಮಾರ್ಟ್‌ಫೋನ್ ಹಾಗೂ ಗೇಮಿಂಗ್ ಚಟದಿಂದ ಕಣ್ಣುಗಳು ಹಾಳಾಗುತ್ತವೆ ಎಂದು ತೋರಿಸಲು, ಶಾಲೆಯು ಮಗುವೊಂದರ ಕಣ್ಣಿಗೆ ಪಟ್ಟಿ ಕಟ್ಟಿ, ಕೆಂಪು ಬಣ್ಣದ ದ್ರವವನ್ನು ಸುರಿದು ತೀವ್ರವಾಗಿ ಗಾಯಗೊಂಡಂತೆ ಬಿಂಬಿಸಿತ್ತು. ಅಲ್ಲದೆ, ತಾನು ಅತಿಯಾಗಿ ಮೊಬೈಲ್ ಬಳಸಿದ್ದಕ್ಕೆ ವೈದ್ಯರು ಕಣ್ಣುಗಳನ್ನೇ ತೆಗೆದುಹಾಕಿದ್ದಾರೆ ಎಂದು ಆ ಮಗುವಿನಿಂದ ಸಹಪಾಠಿಗಳಿಗೆ ಹೇಳಿಸಲಾಗಿತ್ತು.
ಇದನ್ನು ಕಂಡು ಆತಂಕಗೊಂಡ ಇತರ ಮಕ್ಕಳು ತೀವ್ರ ಭಯದಿಂದ ಅಳಲು ಪ್ರಾರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮಕ್ಕಳು ಇನ್ಮುಂದೆ ಎಂದಿಗೂ ಮೊಬೈಲ್ ಬಳಸುವುದಿಲ್ಲ ಎಂದು ಅಳುತ್ತಲೇ ಪ್ರಮಾಣ ಮಾಡುತ್ತಿರುವುದು ಕಂಡುಬಂದಿದೆ.
ಈ ಮಾತನ್ನು ಕೇಳಿದ ನಂತರ ಅನೇಕ ಮಕ್ಕಳು ಅಳುತ್ತಿರುವುದು, ಕಿರುಚುತ್ತಿರುವುದು ಮತ್ತು ಭಯಭೀತರಾಗಿರುವುದು ಕಂಡುಬರುತ್ತದೆ. ಶಿಕ್ಷಕರು ಮೊಬೈಲ್ ಬಳಸಲು ಬಯಸುತ್ತೀರಾ ಎಂದು ಕೇಳುತ್ತಿದ್ದರೂ, ಕೆಲವರು ಇನ್ನು ಮುಂದೆ ಮೊಬೈಲ್ ಬಳಸುವುದಿಲ್ಲ ಎಂದು ಪದೇ ಪದೇ ಭರವಸೆ ನೀಡುತ್ತಾರೆ.
ಈ ಚಟುವಟಿಕೆಯ ಭಾಗವಾಗಿ, ಮಗುವೊಂದರ ಕಣ್ಣುಗಳಿಗೆ ಪಟ್ಟಿ ಕಟ್ಟುವ ಮುನ್ನ ಅದರ ಸುತ್ತಲೂ ಬಣ್ಣವನ್ನು ಹಚ್ಚಲಾಗಿತ್ತು ಎಂದು ಹೇಳಲಾಗಿದೆ. ಮಕ್ಕಳಲ್ಲಿ ಶಾಲೆಯು ಮೂಡಿಸಿದ ಈ ಭಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸ್ಥಳೀಯ ಆಡಳಿತವು ಸೂಕ್ತ ತನಿಖೆಗೆ ಆದೇಶಿಸಿದೆ.
ಉಧಮ್ ಸಿಂಗ್ ನಗರ ಜಿಲ್ಲಾ ಶಿಕ್ಷಣಾಧಿಕಾರಿ ಹರೇಂದ್ರ ಕುಮಾರ್ ಮಿಶ್ರಾ ಅವರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮೂಲ ಶಿಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.
ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಇಂತಹ ಭಯಾನಕ ಪ್ರಯೋಗಗಳನ್ನು ನಡೆಸಬಾರದು ಎಂದು ಶಾಲೆಗೆ ಖಟಿಮಾ ಉಪವಿಭಾಗಾಧಿಕಾರಿ (SDM) ತುಷಾರ್ ಸೈನಿ ಸೂಚನೆ ನೀಡಿದ್ದು, ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖಾಧಿಕಾರಿಯು ಆದಷ್ಟು ಬೇಗ ಇಲಾಖೆಯ ಪ್ರಧಾನ ಕಚೇರಿಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.