ಕೋಲ್ಕತ್ತಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ (TMC) ಹಾಗೂ ಚುನಾವಣಾ ಆಯೋಗದ (ECI) ನಡುವಿನ ಸಮರ ಮತ್ತೊಂದು ಮಜಲಿಗೆ ಹೋಗಿದ್ದು, ತೃಣಮೂಲ ಕಾಂಗ್ರೆಸ್ ಬಂಡಾಯ ಬಣವಾದ ಡೆಮಾಕ್ರಟಿಕ್ ಟಿಎಂಸಿಗೆ ಲಕೋಟೆ ಚುನಾವಣಾ ಚಿಹ್ನೆ ಹಂಚಿಕೆ ಮಾಡಿರುವುದರ ವಿರುದ್ಧ ಕಲ್ಕತ್ತಾ ಹೈಕೋರ್ಟ್ ಭಾರತೀಯ ಚುನಾವಣಾ ಆಯೋಗದ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ವಿವಾದ?
ಇತ್ತೀಚೆಗೆ ಟಿಎಂಸಿ ಪಕ್ಷದಲ್ಲಿ ಉಂಟಾದ ವಿಭಜನೆಯ ನಂತರ ಆಯೋಗವು ಮೂಲ ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಂಡು, ಸೆಪ್ಟೆಂಬರ್ 18ರಂದು ರಿತಬ್ರತಾ ಬ್ಯಾನರ್ಜಿ ಹಾಗೂ ಅರೂಪ್ ರಾಯ್ ನೇತೃತ್ವದ ಬಂಡಾಯ ಬಣಕ್ಕೆ ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ ಎಂಬ ಹೆಸರು ಮತ್ತು ಲಕೋಟೆ ಚಿಹ್ನೆಯನ್ನು ನೀಡಿತ್ತು. ಇದನ್ನು ವಿರೋಧಿಸಿ ಇಂಡಿಯನ್ ಸೆಕ್ಯುಲರ್ ಫ್ರಂಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ರಾವ್ ಅವರ ಪೀಠವು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದೆ.
ಮುಂದುವರೆದು, "ಚುನಾವಣಾ ಆಯೋಗದ ಬಳಿ 183 ಮುಕ್ತ ಚಿಹ್ನೆಗಳಿದ್ದರೂ ನೀವು ನಿರ್ದಿಷ್ಟವಾಗಿ ಬೇರೆ ಪಕ್ಷ ಬಳಸುತ್ತಿದ್ದ 'ಲಕೋಟೆ'ಯನ್ನೇ ಏಕೆ ಆಯ್ದುಕೊಂಡಿರಿ?" ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಆಯೋಗದ ಇಂತಹ ನಿರ್ಧಾರಗಳು ಕೇವಲ ಕಾನೂನು ಪ್ರಕ್ರಿಯೆಗಳನ್ನು ಸೃಷ್ಟಿಸಿ ಜನರನ್ನು ಕೆಣಕಲು ಮತ್ತು ನ್ಯಾಯಾಲಯದ ಮೇಲಿನ ಹೊರೆಯನ್ನು ಹೆಚ್ಚಿಸಲು ಮಾಡುತ್ತಿರುವಂತಿದೆ ಎಂದು ಕಿಡಿಕಾರಿದ್ದಾರೆ. ಜೊತೆಗೆ, "ಚುನಾವಣಾ ಸಂಸ್ಥೆಯು ಪಕ್ಷಪಾತವಿಲ್ಲದೆ ಮತ್ತು ನ್ಯಾಯಯುತವಾಗಿ ಕಾರ್ಯನಿರ್ವಹಿಸಬೇಕು. ಕೇವಲ 4 ತಿಂಗಳ ಹಿಂದಷ್ಟೇ ನಡೆದ ಚುನಾವಣೆಯಲ್ಲಿ ಒಂದು ಪಕ್ಷವು ಬಳಸಿದ ಚಿಹ್ನೆಯನ್ನು ಅಕ್ಟೋಬರ್ 6ರ ಉಪಚುನಾವಣೆಯ ಸಂದರ್ಭದಲ್ಲಿ ಕಾಯ್ದಿರಿಸುವ ಬದಲಾಗಿ ಮತ್ತೊಂದು ಬಣಕ್ಕೆ ನೀಡಿ ಗೊಂದಲ ಸೃಷ್ಟಿಸಿದ್ದು ಏಕೆ?" ಎಂದು ಆಯೋಗದ ವಕೀಲರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಐಎಸ್ಎಫ್ ವಾದವೇನು?
ನೌಸಾದ್ ಸಿದ್ದಿಕಿ ನೇತೃತ್ವದ ಐಎಸ್ಎಫ್ ಪಕ್ಷವು 2021, 2024 ಹಾಗೂ 2026ರ ವಿಧಾನಸಭಾ ಚುನಾವಣೆಗಳಲ್ಲಿ ಲಕೋಟೆ ಚಿಹ್ನೆಯಡಿಯಲ್ಲೇ ಸ್ಪರ್ಧಿಸಿ ಪ್ರಚಾರ ನಡೆಸಿತ್ತು. ಈಗ ಮುಂಬರುವ ನಂದಿಗ್ರಾಮ ಮತ್ತು ರೆಜಿನಗರ ಉಪಚುನಾವಣೆಗಳಲ್ಲೂ ತಾವೂ ಸ್ಪರ್ಧಿಸುತ್ತಿರುವುದರಿಂದ, ಅದೇ ಚಿಹ್ನೆಯನ್ನು ಬಂಡಾಯ ಟಿಎಂಸಿ ಬಣಕ್ಕೆ ನೀಡಿದರೆ ಮತದಾರರಲ್ಲಿ ಭಾರಿ ಗೊಂದಲ ಉಂಟಾಗುತ್ತದೆ, ಆದ್ದರಿಂದ ಈ ಚಿಹ್ನೆಯನ್ನು ಯಾರಿಗೂ ನೀಡದೆ ತಡೆಹಿಡಿಯಬೇಕು ಎಂದು ಐಎಸ್ಎಫ್ ವಾದಿಸಿದೆ. ಆಯೋಗವು ತಮಗೆ ಈಗ ಅಲ್ಮೇರಾ ಚಿಹ್ನೆ ನೀಡಿರುವುದಾಗಿ ಅದು ತಿಳಿಸಿದೆ.
ಏತನ್ಮಧ್ಯೆ, ಲಕೋಟೆ ಚಿಹ್ನೆಯು ಮುಕ್ತ ಚಿಹ್ನೆಗಳ ಪಟ್ಟಿಯಲ್ಲಿದೆ ಮತ್ತು ಐಎಸ್ಎಫ್ ಮಾನ್ಯತೆ ಪಡೆಯದ ನೋಂದಾಯಿತ ಪಕ್ಷವಾಗಿರುವುದರಿಂದ ಅದಕ್ಕೆ ಯಾವುದೇ ಕಾಯಂ ಮೀಸಲು ಚಿಹ್ನೆ ಇರುವುದಿಲ್ಲ ಎಂದು ಚುನಾವಣಾ ಆಯೋಗ ಕೋರ್ಟ್‌ನಲ್ಲಿ ವಾದಿಸಿದೆ.