ನ್ಯೂಯಾರ್ಕ್: 2025ರ ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ಸಂಘರ್ಷದಲ್ಲಿ ಪಾಕಿಸ್ತಾನವೇ ಮೇಲುಗೈ ಸಾಧಿಸಿತ್ತು ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಹೇಳುತ್ತಿದ್ದ ವೇಳೆ ಭಾರತೀಯ ರಾಜತಾಂತ್ರಿಕ ಆರ್. ಶ್ರೀನಿವಾಸ್ ನಗುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂಯುಕ್ತ ರಾಷ್ಟ್ರಗಳ ಸಾಮಾನ್ಯ ಸಭೆಯ (UNGA) 81ನೇ ಅಧಿವೇಶನದಲ್ಲಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್, 2025ರ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆ ಭಾರತದ ದಾಳಿಗೆ “ನಿಖರತೆ ಮತ್ತು ವೃತ್ತಿಪರತೆಯಿಂದ” ಪ್ರತಿಕ್ರಿಯಿಸಿತ್ತು ಎಂದು ಹೇಳಿದರು.
ಪಾಕಿಸ್ತಾನದ ಸೇನೆ ದಾಳಿಯನ್ನು ಹಿಮ್ಮೆಟ್ಟಿಸಿ ಎದುರಾಳಿಗೆ ಮರೆಯಲಾಗದ ಪಾಠ ಕಲಿಸಿತು ಎಂಬ ರೀತಿಯಲ್ಲಿ ಅವರು ತಮ್ಮ ದೇಶದ ಸೇನಾ ಕಾರ್ಯಾಚರಣೆಯನ್ನು ಯಶಸ್ಸಾಗಿ ಬಿಂಬಿಸಿದರು.
ಶರೀಫ್ ಈ ಹೇಳಿಕೆ ನೀಡುತ್ತಿದ್ದ ಸಂದರ್ಭದಲ್ಲಿ ಯುಎನ್ ಸಭಾಂಗಣದಲ್ಲಿದ್ದ ಭಾರತೀಯ ನಿಯೋಗದ ಸದಸ್ಯ ಆರ್. ಶ್ರೀನಿವಾಸ್ ಅವರತ್ತ ಕ್ಯಾಮೆರಾ ತಿರುಗಿದೆ.
ಈ ವೇಳೆ ಶ್ರೀನಿವಾಸ್ ನಗುತ್ತಿರುವುದು ಹಾಗೂ ತಲೆಯಾಡಿಸುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.
ಅಂದೇನಾಗಿತ್ತು?
2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಮೃತಪಟ್ಟ ಬಳಿಕ, ಮೇ 7ರಂದು ಭಾರತ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಆರಂಭಿಸಿತ್ತು.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿತ್ತು. ಮೇ 7ರಿಂದ 10ರವರೆಗೆ ನಡೆದ ಸಂಘರ್ಷದ ಬಳಿಕ ಎರಡೂ ದೇಶಗಳು ತಮ್ಮದೇ ರೀತಿಯಲ್ಲಿ ಯಶಸ್ಸಿನ ಪ್ರತಿಪಾದನೆ ಮಾಡಿದ್ದವು.
ತಮ್ಮ ಯುಎನ್ ಭಾಷಣದಲ್ಲಿ ಪಾಕ್ ಪ್ರಧಾನಿ ಶೆಹಬಾಷ್ ಶರೀಫ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಸಮಯೋಚಿತ ಮಧ್ಯಸ್ಥಿಕೆ’ ಸಂಘರ್ಷವನ್ನು ನಿಲ್ಲಿಸಲು ನೆರವಾಯಿತು ಎಂದು ಧನ್ಯವಾದ ಸಲ್ಲಿಸಿದರು. ಆದರೆ, ಕದನ ವಿರಾಮಕ್ಕೆ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇರಲಿಲ್ಲ ಎಂಬುದು ಭಾರತದ ನಿರಂತರ ನಿಲುವಾಗಿದೆ.
ಶರೀಫ್ ಅವರ ಭಾಷಣದ ವೇಳೆ ಶ್ರೀನಿವಾಸ್ ಅವರ ನಗು ಮತ್ತು ತಲೆಯಾಡಿಸುವ ದೃಶ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಆದರೆ, ಅವರ ನಗುವಿನ ನಿಖರ ಉದ್ದೇಶ ಅಥವಾ ವೈಯಕ್ತಿಕ ಪ್ರತಿಕ್ರಿಯೆ ಕುರಿತು ಯಾವುದೇ ಅಧಿಕೃತ ಹೇಳಿಕೆ ವರದಿಯಾಗಿಲ್ಲ.