ದೆಹಲಿ ಹೈಕೋರ್ಟ್ ಮತ್ತು ಅತ್ಯಾಚಾರ ಸಂತ್ರಸ್ತೆ 
ದೇಶ

'ಹೆದರಬೇಡ.. ಅವ್ನು ಜೈಲಲ್ಲೇ ಸಾಯ್ತಾನೆ, ನಿನ್ನ ಧೈರ್ಯ ಸದಾ ನೆನಪಿರುತ್ತದೆ': ಅತ್ಯಾಚಾರ ಸಂತ್ರಸ್ತ ಬಾಲಕಿಗೆ ನ್ಯಾಯಾಧೀಶರ ಸಂದೇಶ!

ತಾನು ‘ಅಂಕಲ್’ ಎಂದು ಕರೆಯುತ್ತಿದ್ದ ವ್ಯಕ್ತಿ ವಯಸ್ಸಾಗುವವರೆಗೂ ಜೈಲಿನಲ್ಲೇ ಇರಬೇಕು ಎಂದು 10 ವರ್ಷದ ಅತ್ಯಾಚಾರ ಸಂತ್ರಸ್ತ ಬಾಲಕಿ ನ್ಯಾಯಾಲಯದಲ್ಲಿ ಹೇಳಿದ್ದಳು. ಬಾಲಕಿಯ ಮಾತು ಆಲಿಸಿದ ವಿಚಾರಣಾ ನ್ಯಾಯಾಲಯದ..

ನವದೆಹಲಿ: ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದೆ ಅಂಕಲ್ ನನ್ನು ಜೈಲಿನಲ್ಲೇ ಇಡಿ ಎಂಬ 10 ವರ್ಷದ ಅತ್ಯಾಚಾರ ಸಂತ್ರಸ್ತ ಬಾಲಕಿಗೆ ನ್ಯಾಯಾದೀಶರು ಭಾವುಕ ಸಂದೇಶ ನೀಡಿದ್ದು, ಆರೋಪಿ ಜೈಲಲ್ಲೇ ಜೀವನ ಮುಗಿಸುತ್ತಾನೆ ಎಂಬ ಸಂದೇಶ ನೀಡಿದ್ದಾರೆ.

ಹೌದು.. ರೋಹಿಣಿಯ ಪೊಕ್ಸೊ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ರಾಜನಿ ರಂಗಾ ಅವರು ತೀರ್ಪಿನ ಕೊನೆಯಲ್ಲಿ ಸಾಂಪ್ರದಾಯಿಕ ಕಾನೂನು ಭಾಷೆ ಬದಿಗಿಟ್ಟು ನೇರವಾಗಿ ಬಾಲಕಿಯನ್ನು ಉದ್ದೇಶಿಸಿ ಸಂದೇಶ ಬರೆದಿದ್ದು, 'ಹೆದರಬೇಡ.. ಅವ್ನು ಜೈಲಲ್ಲೇ ಸಾಯ್ತಾನೆ, ನಿನ್ನ ಧೈರ್ಯ ಸದಾ ನೆನಪಿರುತ್ತದೆ' ಎಂಬ ಸಂದೇಶ ನೀಡಿದ್ದಾರೆ.

ತಾನು ‘ಅಂಕಲ್’ ಎಂದು ಕರೆಯುತ್ತಿದ್ದ ವ್ಯಕ್ತಿ ವಯಸ್ಸಾಗುವವರೆಗೂ ಜೈಲಿನಲ್ಲೇ ಇರಬೇಕು ಎಂದು 10 ವರ್ಷದ ಅತ್ಯಾಚಾರ ಸಂತ್ರಸ್ತ ಬಾಲಕಿ ನ್ಯಾಯಾಲಯದಲ್ಲಿ ಹೇಳಿದ್ದಳು. ಬಾಲಕಿಯ ಮಾತು ಆಲಿಸಿದ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶೆ, ತೀರ್ಪಿನ ಕೊನೆಯಲ್ಲಿ ಆಕೆಗೆ ವೈಯಕ್ತಿಕ ಸಂದೇಶವೊಂದನ್ನು ಬರೆದಿದ್ದಾರೆ. ಇದೀಗ ದೆಹಲಿ ಹೈಕೋರ್ಟ್ ಆ ಸಂದೇಶವನ್ನು ಬಾಲಕಿ ಅಥವಾ ಆಕೆಯ ಕುಟುಂಬಕ್ಕೆ ತಲುಪಿಸುವಂತೆ ಸೂಚಿಸಿದೆ.

‘ನಿನ್ನ ಮಾತು ನ್ಯಾಯಾಲಯ ಕೇಳಿದೆ’

‘ಅಂಕಲ್ ವಯಸ್ಸಾಗುವವರೆಗೂ ಜೈಲಿನಲ್ಲೇ ಇರಲಿ’ ಎಂದು ನೀನು ಹೇಳಿದ್ದೆ. ಈ ನ್ಯಾಯಾಲಯ ನಿನ್ನ ಮಾತನ್ನು ಕೇಳಿದೆ. ನಿನ್ನ ಮನವಿಗೆ ಉತ್ತರ ನೀಡಿದೆ ಎಂದು ನ್ಯಾಯಾಧೀಶೆ ಸಂದೇಶದಲ್ಲಿ ಹೇಳಿದ್ದಾರೆ.

ನೀನು ‘ಅಂಕಲ್’ ಎಂದು ಕರೆಯುತ್ತಿದ್ದ ವ್ಯಕ್ತಿ ಇನ್ನು ಮುಂದೆ ಎಂದಿಗೂ ಸ್ವತಂತ್ರವಾಗಿ ಹೊರಗೆ ಬರಲು ಸಾಧ್ಯವಿಲ್ಲ. ಆತ ತನ್ನ ಉಳಿದ ಜೀವನವನ್ನು ಜೈಲಿನಲ್ಲೇ ಕಳೆಯುತ್ತಾನೆ. ಅಲ್ಲೇ ವಯಸ್ಸಾಗುತ್ತಾನೆ ಮತ್ತು ಅಲ್ಲೇ ಸಾಯುತ್ತಾನೆ. ಇನ್ನು ಮುಂದೆ ನಿನ್ನನ್ನು, ನಿನ್ನ ಪುಟ್ಟ ತಂಗಿಯನ್ನು ಅಥವಾ ಬೇರೆ ಯಾವುದೇ ಮಗುವನ್ನು ನೋಯಿಸಲು ಆತನಿಗೆ ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಧೀಶೆ ಹೇಳಿದ್ದಾರೆ.

‘ನೀನು ಅತ್ಯಂತ ಧೈರ್ಯಶಾಲಿ ಬಾಲಕಿ’

ನೀನು ನ್ಯಾಯಾಲಯಕ್ಕೆ ಬಂದು ನಿನ್ನನ್ನು ನೋಯಿಸಿದ ವ್ಯಕ್ತಿಯನ್ನು ಗುರುತಿಸಿ, ಸತ್ಯವನ್ನು ಹೇಳಿದ್ದೀಯ. ಆತ ನಿನ್ನೊಂದಿಗೆ ಕೆಟ್ಟ ಕೃತ್ಯ ಎಸಗಿದ್ದಾನೆ. ಆದರೆ ನೀನು ಮೌನವಾಗಿರಲಿಲ್ಲ. ತಾಯಿಗೆ ವಿಷಯ ತಿಳಿಸಿದ್ದೀಯ. ಮಾತನಾಡುವ ಧೈರ್ಯ ತೋರಿಸಿದ್ದರಿಂದ ಆತ ಮತ್ತೊಬ್ಬ ಮಗುವಿಗೆ ಹಾನಿ ಮಾಡುವ ಸಾಧ್ಯತೆ ಇಲ್ಲ. ನಿನ್ನ ಬಾಲ್ಯವನ್ನು ನ್ಯಾಯಾಲಯಕ್ಕೆ ಮರಳಿ ಕೊಡಲು ಸಾಧ್ಯವಿಲ್ಲ.

ಆದರೆ ನಿನ್ನ ಮಾತುಗಳನ್ನು ಕೇಳಲಾಗಿದೆ ಎಂಬ ಭರವಸೆ ನೀಡಬಹುದು. ನಿನ್ನ ಮನವಿಯನ್ನು ಪುರಸ್ಕರಿಸಲಾಗಿದೆ. ನಿನ್ನನ್ನು ನೋಯಿಸಿದ ವ್ಯಕ್ತಿ ಇನ್ನು ಮುಂದೆ ಸ್ವತಂತ್ರ ವ್ಯಕ್ತಿಯಾಗಿ ಸೂರ್ಯನನ್ನು ನೋಡುವುದಿಲ್ಲ ಎಂದು ನ್ಯಾಯಾಧೀಶರು ಸಂದೇಶದಲ್ಲಿ ತಿಳಿಸಿದ್ದಾರೆ.

‘ಈಗ ನೀನು ನಿನ್ನ ಜೀವನವನ್ನು ನಡೆಸು. ಶಾಲೆಗೆ ಹೋಗು. ಸ್ನೇಹಿತರನ್ನು ಮಾಡಿಕೋ. ನಗು, ಆಡು, ಕನಸು ಕಾಣು. ನಿನ್ನ ಧೈರ್ಯವನ್ನು ಈ ನ್ಯಾಯಾಲಯ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ’ ಎಂದು ನ್ಯಾಯಾಧೀಶೆ ಬಾಲಕಿಗೆ ಹೇಳಿದ್ದಾರೆ.

2 ವಾರಗಳಲ್ಲಿ ಸಂದೇಶ ತಲುಪಿಸಲು ಹೈಕೋರ್ಟ್ ಸೂಚನೆ

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಪ್ರತಿಬಾ ಎಂ. ಸಿಂಗ್ ಮತ್ತು ದಿನೇಶ್ ಭಟ್ ಅವರ ಪೀಠ ಸೆ. 22ರಂದು ಈ ಪ್ರಕರಣದ ವಿಚಾರಣೆ ನಡೆಸಿತು. ನ್ಯಾಯಾಧೀಶೆಯ ಈ ಸಂದೇಶವನ್ನು ‘ಧೈರ್ಯದ ಸಂದೇಶ’ ಎಂದು ಹೈಕೋರ್ಟ್ ಬಣ್ಣಿಸಿದೆ. ಉತ್ತರ-ಪಶ್ಚಿಮ ದೆಹಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ಸಂದೇಶವನ್ನು ಮುದ್ರಿಸಿ ಬಾಲಕಿ ಅಥವಾ ಆಕೆಯ ಕುಟುಂಬಕ್ಕೆ ತಲುಪಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಎರಡು ವಾರಗಳೊಳಗೆ ಈ ಸಂದೇಶವನ್ನು ಬಾಲಕಿಗೆ ತಲುಪಿಸುವುದರ ಜೊತೆಗೆ ಪರಿಹಾರದ ಮೊತ್ತವನ್ನೂ ನೀಡುವಂತೆ ಆದೇಶಿಸಿದೆ. 2023ರ ಜುಲೈ 23ರಂದು ಘಟನೆ ನಡೆದಾಗ ಬಾಲಕಿಗೆ ಏಳು ವರ್ಷ ವಯಸ್ಸಾಗಿತ್ತು. ಇದೀಗ ಆಕೆಗೆ 10 ವರ್ಷ ಎಂದು ಹೇಳಲಾಗಿದೆ.

ಆರೋಪಿಗೆ ಜೀವಾವಧಿ ಶಿಕ್ಷೆ

ಈ ಪ್ರಕರಣದಲ್ಲಿ ಸುಮಿತ್ ಶಾಕ್ಯ ಎಂಬಾತನ ವಿರುದ್ಧ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಲಾಗಿತ್ತು. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿ ಮೇಲೆ ಗಂಭೀರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳಲ್ಲಿ ವಿಚಾರಣಾ ನ್ಯಾಯಾಲಯ ಆತನನ್ನು ದೋಷಿ ಎಂದು ತೀರ್ಪು ನೀಡಿತ್ತು.

ಪೊಕ್ಸೊ ಕಾಯ್ದೆಯಡಿ ಆತನಿಗೆ ಜೀವನದ ಉಳಿದ ಅವಧಿವರೆಗೆ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಲಾಗಿದೆ. ಕ್ರಿಮಿನಲ್ ಬೆದರಿಕೆ ಪ್ರಕರಣದಲ್ಲಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20,000 ರೂ ದಂಡ ವಿಧಿಸಲಾಗಿದೆ. ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಲಿವೆ.

ಬಾಲಕಿಗೆ 10.50 ಲಕ್ಷ ರೂ ಪರಿಹಾರ

ಅಂತೆಯೇ ಬಾಲಕಿ ಮತ್ತು ಆಕೆಯ ಕುಟುಂಬ ಅನುಭವಿಸಿದ ಸಂಕಷ್ಟ, ಅಪರಾಧದ ಸ್ವರೂಪ ಹಾಗೂ ಅದರ ದೀರ್ಘಕಾಲೀನ ಪರಿಣಾಮಗಳನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯ 10.50 ಲಕ್ಷ ರೂ ಪರಿಹಾರ ನಿಗದಿಪಡಿಸಿತ್ತು. ಈ ಪರಿಹಾರದ ಮೊತ್ತದ ಪಾವತಿ ಸ್ಥಿತಿಯ ಕುರಿತು ವರದಿ ಸಲ್ಲಿಸುವಂತೆ ಹೈಕೋರ್ಟ್ DLSA ಕಾರ್ಯದರ್ಶಿಗೆ ಸೂಚಿಸಿದೆ.

ಇದೇ ವೇಳೆ, ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡುವಂತೆ ಆರೋಪಿಯು ಸಲ್ಲಿಸಿದ್ದ ಮನವಿಗೆ ತಕ್ಷಣದ ಪರಿಹಾರ ನೀಡಲು ಹೈಕೋರ್ಟ್ ನಿರಾಕರಿಸಿದೆ. ಪ್ರಕರಣದಲ್ಲಿರುವ ಸಾಕ್ಷ್ಯಗಳು, ವಿಧಿವಿಜ್ಞಾನ ಸಾಕ್ಷ್ಯ ಸೇರಿದಂತೆ ಇತರ ಅಂಶಗಳನ್ನು ಪರಿಗಣಿಸಿದ ಪೀಠ, ಈ ಹಂತದಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸಲು ತಾನು ಸಿದ್ಧವಿಲ್ಲ ಎಂದು ತಿಳಿಸಿದೆ.

DLSA ಸ್ಥಿತಿಗತಿ ವರದಿಯನ್ನು ನವೆಂಬರ್ 4, 2026ರಂದು ವಿಚಾರಣೆ ನಡೆಸಲಾಗುವುದು. ಪ್ರಕರಣದ ಮೇಲ್ಮನವಿಯನ್ನು ಮತ್ತೆ ಜನವರಿ 20, 2027ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟ್ರಾಫಿಕ್ ಫೈನ್ ಬಾಕಿ ಉಳಿಸಿಕೊಂಡವರಿಗೆ ಬಿಗ್ ಶಾಕ್; ದಂಡ ವಸೂಲಿಗೆ ವಿದ್ಯುತ್ ಬಿಲ್ ಲಿಂಕ್ ಮಾಡಿ: ಸುಪ್ರೀಂ ಕೋರ್ಟ್

'ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ': ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗಕ್ಕೆ ಸಿಎಂ ಡಿಕೆಶಿ ಮನವಿ

'ಭಜನೆ ಸೌಂಡ್ ಕಡಿಮೆ ಮಾಡು': ವೃದ್ಧ ಅರ್ಚಕನಿಗೆ ಯುವಕನಿಂದ ಹಲ್ಲೆ, ಬಟ್ಟೆ ಹರಿದು ಕೌರ್ಯ! ಸಿಸಿಟಿವಿ Video Viral

CM ಅಭ್ಯರ್ಥಿ ಹೇಳಿಕೆ ಎಫೆಕ್ಟ್?: ಮುಂದಿನ ಬಾರಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡಬೇಡಿ- ಕಾಂಗ್ರೆಸ್ ಮುಖಂಡರಿಂದಲೇ KPCC ಅಧ್ಯಕ್ಷರಿಗೆ ದೂರು

ತೈಲಾಘಾತಕ್ಕೆ ಷೇರುಪೇಟೆ ತತ್ತರ: ಒಂದೇ ತಿಂಗಳಲ್ಲಿ ಸೆನ್ಸೆಕ್ಸ್-ನಿಫ್ಟಿ ಶೇ.5ಕ್ಕೂ ಹೆಚ್ಚು ಕುಸಿತ; 17 ಲಕ್ಷ ಕೋಟಿ ರೂ ನಷ್ಟ