ಉಜ್ಜಯಿನಿಯಲ್ಲಿ ಧಾರ್ಮಿಕ ಕಟ್ಟಡ ತೆರವು ವೇಳೆ ಉದ್ವಿಗ್ನತೆ, 2,500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ Online Desk
ದೇಶ

ಉಜ್ಜಯಿನಿಯಲ್ಲಿ ಸಿಂಹಸ್ಥಕ್ಕಾಗಿ ಮಸೀದಿ ತೆರವು ವೇಳೆ ಭಾರಿ ಘರ್ಷಣೆ: ಪೊಲೀಸರ ಮೇಲೆಯೇ ಕಲ್ಲು ತೂರಾಟ, ಐತಿಹಾಸಿಕ ಶಾಹಿ ಮಸೀದಿ ತೆರವಿಗೆ 2,500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣ ಯೋಜನೆಗಾಗಿ ಐತಿಹಾಸಿಕ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸಲು ಮುನ್ಸಿಪಲ್ ಕಾರ್ಪೊರೇಷನ್ ಮುಂದಾದ ಹಿನ್ನೆಲೆಯಲ್ಲಿ ಭಾರಿ ಘರ್ಷಣೆ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಉಜ್ಜಯಿನಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣ ಯೋಜನೆಗಾಗಿ ಐತಿಹಾಸಿಕ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸಲು ಮುನ್ಸಿಪಲ್ ಕಾರ್ಪೊರೇಷನ್ ಮುಂದಾದ ಹಿನ್ನೆಲೆಯಲ್ಲಿ, ಮಸೀದಿ ಬಳಿ ಭಾರಿ ಘರ್ಷಣೆ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ, ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ನಡೆದ ಘರ್ಷಣೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮತ್ತು ಲಘು ಲಾಠಿಚಾರ್ಜ್ ನಡೆಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಘರ್ಷಣೆಗೆ ಮುಖ್ಯ ಕಾರಣವೇನು?

ಉಜ್ಜಯಿನಿಯಲ್ಲಿ 2028ರಲ್ಲಿ ನಡೆಯಲಿರುವ ಭವ್ಯ ಸಿಂಹಸ್ಥ ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಛತ್ರಿ ಚೌಕ್ ಬಳಿಯ ಖಜುರ್ ವಾಲಿ ಮಸೀದಿಯಿಂದ ಗಣೇಶ್ ಚೌಕ್‌ವರೆಗಿನ 730 ಮೀಟರ್ ರಸ್ತೆಯನ್ನು 15 ಮೀಟರ್‌ಗೆ ವಿಸ್ತರಿಸಲಾಗುತ್ತಿದೆ. ಈ ರಸ್ತೆ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಶಾಹಿ ಮಸೀದಿಯ ಸುಮಾರು 11 ಅಡಿ ಭಾಗ (ಪ್ರಾರ್ಥನಾ ಮಂದಿರ ಮತ್ತು ಮಿನಾರ್‌ನ ಕೆಲವು ಭಾಗಗಳು) ರಸ್ತೆ ವ್ಯಾಪ್ತಿಗೆ ಬರುತ್ತಿತ್ತು.

ಮುಂದುವರೆದು, ಮಸೀದಿಯ ಭಾಗಶಃ ತೆರವು ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ಈಗಾಗಲೇ ವಜಾಗೊಳಿಸಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಸಂಚಾರ ನಿರ್ವಹಣೆಯ ಅಗತ್ಯವನ್ನು ಎತ್ತಿಹಿಡಿದಿತ್ತು. ಅದರಲ್ಲೂ, ರಸ್ತೆ ಅಗಲೀಕರಣ ಪ್ರಕ್ರಿಯೆಯು ಕೇವಲ ಮಸೀದಿಗೆ ಸೀಮಿತವಾಗಿಲ್ಲ. ಇದೇ ಯೋಜನೆಯಡಿ ಈಗಾಗಲೇ 10 ದೇವಸ್ಥಾನಗಳ ಭಾಗಗಳನ್ನು ಮತ್ತು ಸುಮಾರು 272 ಇತರ ಖಾಸಗಿ/ಸಾರ್ವಜನಿಕ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ ಎಂದು ಹೈಕೋರ್ಟ್ ಉಲ್ಲೇಖಿಸಿದೆ. ಜೊತೆಗೆ, ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಪಾರಂಪರಿಕ ಆಸ್ತಿಯ ಒಂದು ಭಾಗವೂ ಈ ರಸ್ತೆ ವಿಸ್ತರಣೆಗೆ ಒಳಪಟ್ಟಿದೆ.

ಹಾಗಾದ್ರೆ, ಇಂದು ನಡೆದಿದ್ದೇನು?

ಮಸೀದಿ ತೆರವುಗೊಳಿಸುವುದನ್ನು ವಿರೋಧಿಸಿ ಭಾನುವಾರ ರಾತ್ರಿಯಿಂದಲೇ ಮುಸ್ಲಿಂ ಸಮುದಾಯದ ನೂರಾರು ಜನರು ಮಸೀದಿ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇಂದು ಬೆಳಗ್ಗೆ ಆಡಳಿತ ಮಂಡಳಿಯು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ, ಸ್ಥಳದಲ್ಲಿದ್ದ ಕೆಲವು ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಕಣ್ಣೀರು ಅನಿಲದ ಸೆಲ್‌ಗಳನ್ನು ಸಿಡಿಸಿದರು. ಕಲ್ಲು ತೂರಾಟದಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು, ಪರಿಸ್ಥಿತಿ ಕೈಮೀರುತ್ತಿದ್ದಂತೆ ಉಜ್ಜಯಿನಿಯ ಮುಖ್ಯ ಕಾಜಿ ಖಲೀಲ್ ಉರ್ ರೆಹಮಾನ್ ಅವರು ವಿಡಿಯೋ ಸಂದೇಶ ಬಿಡುಗಡೆ ಮಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. "ಮಸೀದಿಯ ಭಾಗವನ್ನು ತೆರವುಗೊಳಿಸುವ ಕುರಿತು ಭಾನುವಾರ ರಾತ್ರಿಯೇ ಆಡಳಿತ ಮಂಡಳಿ ಮತ್ತು ಮಸೀದಿ ಕಮಿಟಿ ನಡುವೆ ಪರಸ್ಪರ ಒಪ್ಪಂದ ಏರ್ಪಟ್ಟಿದೆ. ಮಸೀದಿ ಕಮಿಟಿಯೇ ಸ್ವತಃ ಈ ತೆರವು ಕಾರ್ಯವನ್ನು ಮಾಡುತ್ತಿದೆ. ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಮನೆಯಿಂದ ಹೊರಬರಬಾರದು" ಎಂದು ತಿಳಿಸಿದ್ದಾರೆ.

ಮುಂದುವರೆದು, ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ಷ್ಮ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಕ್ಷಿಪ್ರ ಕಾರ್ಯಪಡೆ (RAF) ಸೇರಿದಂತೆ 2,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಉಜ್ಜಯಿನಿ ಜಿಲ್ಲಾಧಿಕಾರಿ ರೋಷನ್ ಕುಮಾರ್ ಸಿಂಗ್ ಮತ್ತು ಎಸ್ಪಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ. ಅದರಂತೆ, ಘಟನೆ ಬಗ್ಗೆ ಮಾತನಾಡಿದ ಉಜ್ಜಯಿನಿ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ಅವರು, ಸದ್ಯ ಕಲ್ಲು ತೂರಾಟ ನಡೆಸಿದ 7ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆ ಕೆಡಿಸುವಂತಹ ಸುಳ್ಳು ವದಂತಿ ಹರಡಿದ ಆರೋಪದ ಮೇಲೆ 5 ಜನ ಕಂಟೆಂಟ್ ಕ್ರಿಯೇಟರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇಡೀ ನಗರದ ಮೇಲೆ ಡ್ರೋನ್ ಮತ್ತು ಸಿಸಿಟಿವಿ ಮೂಲಕ ನಿಗಾ ಇಡಲಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೂ. 2,000ಕ್ಕಿಂತ ಹೆಚ್ಚಿನ UPI ವಹಿವಾಟಿಗೆ ಶುಲ್ಕ: ತಡೆ ನೀಡಲು ಸುಪ್ರೀಂಕೋರ್ಟ್ ನಕಾರ, ಕೇಂದ್ರ ಸರ್ಕಾರಕ್ಕೆ ನೋಟಿಸ್..!

ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನ: ಸಂತೋಷದಿಂದ ಸ್ವೀಕರಿಸಿದ ಸ್ವಾಮೀಜಿ!

ಒಂದೇ ದಿನ ಆರು ಭರ್ಜರಿ ಶತಕ: ಕ್ರಿಕೆಟ್ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಾಖಲೆ!

2028ಕ್ಕೆ ನಾನೂ CM ಅಭ್ಯರ್ಥಿ ಅನ್ನುತ್ತೀನಿ, ಆದ್ರೆ....: ಸಂಚಲನ ಸೃಷ್ಟಿಸಿದ ಪ್ರದೀಪ್‌ ಈಶ್ವರ್ ಹೇಳಿಕೆ!

NDA ಸರ್ಕಾರಕ್ಕೆ ಬೆಂಬಲ ನೀಡಲು ನಾಚಿಕೆಯಾಗುತ್ತಿದೆ! ತಮ್ಮದೇ ಆಡಳಿತದ ವಿರುದ್ಧ ಕೇಂದ್ರ ಸಚಿವ ಪಾಸ್ವಾನ್ ಆಕ್ರೋಶ!