ಪಂಜಾಬ್: ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭುಗಿಲೆದ್ದ ವಿದ್ಯಾರ್ಥಿಗಳ ಪ್ರತಿಭಟನೆ ಭಾನುವಾರ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತ್ತು.
ವಿದ್ಯಾರ್ಥಿಗಳು 15 ಗಂಟೆಗಳಿಗೂ ಹೆಚ್ಚು ಕಾಲ ಎನ್‌ಎಚ್-44 ತಡೆದು ಪ್ರತಿಭಟನೆ ನಡೆಸಿದ ಬಳಿಕ, ಸೋಮವಾರ ಬೆಳಗಿನ ಜಾವ ಹೆದ್ದಾರಿಯಲ್ಲಿ ಸಂಚಾರ ಪುನರಾರಂಭಗೊಂಡಿದೆ. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಎಲ್‌ಪಿಯು ಆವರಣದ ಹೊರಗೆ ಭಾರಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಂಧರ್ ಪೊಲೀಸ್ ಆಯುಕ್ತ ಸತೀಂದರ್ ಸಿಂಗ್ ಅವರು ಮಾತನಾಡಿ, ಭಾನುವಾರ ಮತ್ತು ಸೋಮವಾರ ಮಧ್ಯರಾತ್ರಿಯಲ್ಲಿ ಎನ್‌ಎಚ್-44 ಅನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಡಿಜಿಪಿ ಗೌರವ್ ಯಾದವ್ ಅವರಿಗೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡುವಂತೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಡಿಜಿಪಿ ಗೌರವ್ ಯಾದವ್ ಅವರಿಗೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಪರಿಸ್ಥಿತಿಯ ಅವಲೋಕನ ಮಾಡುವಂತೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭಾನುವಾರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಹೊರಗಿನ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ ಬಳಿಕ ಪ್ರತಿಭಟನೆ ಆರಂಭಗೊಂಡಿತ್ತು.
ವಿದ್ಯಾರ್ಥಿಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ಆರೋಪಗಳ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ. ಆದರೆ ಘಟನೆ ವಿಶ್ವವಿದ್ಯಾಲಯದ ಆವರಣದಲ್ಲೇ ನಡೆದಿದೆ ಎಂಬ ಹೇಳಿಕೆಗಳನ್ನು ವಿಶ್ವವಿದ್ಯಾಲಯವು ‘ವದಂತಿಗಳು’ ಎಂದು ಬಣ್ಣಿಸಿದೆ.
ಭಾನುವಾರ ಸಂಜೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ವಿದ್ಯಾರ್ಥಿಗಳು ಪೊಲೀಸರೊಂದಿಗೆ ಘರ್ಷಣೆ ನಡೆಸಿ ಸಿಬ್ಬಂದಿ ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಎನ್‌ಎಚ್-44 ತಡೆದು ಪ್ರತಿಭಟನೆ ನಡೆಸುತ್ತಿದ್ದವರನ್ನು ತೆರವುಗೊಳಿಸಲು ಪೊಲೀಸರು ಮುಂದಾಗಿದ್ದರು.
ಪೊಲೀಸರು ಲಾಠಿ ಚಾರ್ಜ್ ನಡೆಸಿದ ಬಳಿಕ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದೊಳಗೆ ಹಿಂತಿರುಗಿದ್ದರು. ಬಳಿಕವೂ ಅವರು ಪೊಲೀಸರತ್ತ ಕಲ್ಲು ತೂರಾಟ ಮುಂದುವರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಡಿಜಿಪಿ ಎಂ.ಎಫ್. ಫಾರೂಕಿ ನೇತೃತ್ವದ ಬೃಹತ್ ಪೊಲೀಸ್ ಪಡೆ ಭಾನುವಾರ ತಡರಾತ್ರಿ ವಿಶ್ವವಿದ್ಯಾಲಯದ ಆವರಣ ಪ್ರವೇಶಿಸಿತು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಥಸಂಚಲನ ನಡೆಸಿದರು.
ಜಲಂಧರ್ ಪೊಲೀಸ್ ಆಯುಕ್ತ ಸತೀಂದರ್ ಸಿಂಗ್, ಜಲಂಧರ್ ವಲಯದ ಡಿಐಜಿ ನವೀನ್ ಸಿಂಗ್ಲಾ ಮತ್ತು ಕಪುರ್ತಲಾ ಎಸ್‌ಎಸ್‌ಪಿ ಗೌರವ್ ತೂರಾ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲಿದ್ದರು.
ಈ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರವ್‌ನೀತ್ ಸಿಂಗ್ ಬಿಟ್ಟು, ಸೆಪ್ಟೆಂಬರ್ 30ರಂದು ಜಲಂಧರ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ‍್ಯಾಲಿ ನಡೆಯಲಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರ ಎಲ್‌ಪಿಯುಗೆ ದುಷ್ಕರ್ಮಿಗಳನ್ನು ಕಳುಹಿಸಿದೆ ಎಂದು ಆರೋಪಿಸಿದ್ದಾರೆ.
ಪಂಜಾಬ್‌ನಲ್ಲಿ ಬಿಜೆಪಿಯ ಮಾದಕವಸ್ತು ವಿರೋಧಿ ಯಾತ್ರೆಗಳಿಗೆ ಜನರಿಂದ ದೊರೆಯುತ್ತಿರುವ ಭಾರಿ ಬೆಂಬಲದಿಂದ ಎಎಪಿ ‘ಹತಾಶೆಗೊಂಡಿದೆ’ ಎಂದು ಅವರು ಆರೋಪಿಸಿದ್ದಾರೆ. ನಿಗದಿಯಾಗಿರುವ ರ‍್ಯಾಲಿಗೆ ಅಡ್ಡಿಪಡಿಸುವ ಉದ್ದೇಶದಿಂದ ಜಲಂಧರ್‌ನಲ್ಲಿ ಗಲಭೆಗೆ ಅವಕಾಶ ನೀಡಲಾಗಿದೆ ಎಂದು ಭಗವಂತ್ ಮಾನ್ ಸರ್ಕಾರದ ವಿರುದ್ಧ ಅವರು ಆರೋಪ ಮಾಡಿದ್ದಾರೆ.
ಪೊಲೀಸರು ‘ಸಡಿಲ’ ನಿಲುವು ತಾಳಿದ್ದರಿಂದ ದುಷ್ಕರ್ಮಿಗಳು ಬೆಂಕಿ ಹಚ್ಚುವಿಕೆ ಮತ್ತು ಧ್ವಂಸ ಕೃತ್ಯಗಳಲ್ಲಿ ತೊಡಗಲು ಅವಕಾಶವಾಯಿತು. ಇದರಿಂದ ಪೊಲೀಸ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಅವರು ಮತ್ತೊಂದು ಆರೋಪ ಮಾಡಿದ್ದಾರೆ.
ಭಗವಂತಮಾನ್, ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ಕೇವಲ ಸೇಡು ತೀರಿಸಿಕೊಳ್ಳಲು ಎಲ್‌ಪಿಯುಗೆ ದುಷ್ಕರ್ಮಿಗಳನ್ನು ಕಳುಹಿಸಿದ್ದಾರೆ. ಅಶೋಕ್ ಮಿತ್ತಲ್ ಅವರು ಎಎಪಿಯಿಂದ ಹೊರಬಂದ ಬಳಿಕ, ಎಲ್‌ಪಿಯು ಮುಚ್ಚುವಂತೆ ಮಾಡುವ ದುರುದ್ದೇಶದ ಯೋಜನೆಯನ್ನು ಪಕ್ಷ ರೂಪಿಸಿದೆ” ಎಂದು ಬಿಟ್ಟು ಭಾನುವಾರ ತಡರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯಸಭಾ ಸಂಸದ ಅಶೋಕ್ ಮಿತ್ತಲ್ ಅವರು ಎಲ್‌ಪಿಯು ಸಂಸ್ಥಾಪಕ ಕುಲಪತಿಯಾಗಿದ್ದಾರೆ. “ಸೆಪ್ಟೆಂಬರ್ 30ರಂದು ಜಲಂಧರ್‌ನಲ್ಲಿ ಅಮಿತ್ ಶಾ ಅವರ ರ‍್ಯಾಲಿ ನಡೆಯಲಿದ್ದು, ಅಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ ಎಂಬುದು ಸರ್ಕಾರಕ್ಕೆ ತಿಳಿದಿದೆ.
ಪಂಜಾಬ್ ಜನರಿಂದ ಬಿಜೆಪಿಗೆ ದೊರೆಯುತ್ತಿರುವ ಬೆಂಬಲದಿಂದ ಎಎಪಿ ಹತಾಶಗೊಂಡಿದ್ದು, ರ‍್ಯಾಲಿಗೆ ಅಡ್ಡಿಪಡಿಸಲು ಜಲಂಧರ್‌ನಲ್ಲಿ ಗಲಭೆಗೆ ಅವಕಾಶ ನೀಡುತ್ತಿದೆ” ಎಂದು ಬಿಟ್ಟು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
“ಇನ್ನೂ ಕೆಲವೇ ತಿಂಗಳುಗಳು ಬಾಕಿ ಇವೆ. ಸರ್ಕಾರ ಬದಲಾಗಲಿದೆ ಮತ್ತು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಮಾಜಿ ಸಚಿವರು ಹೇಳಿದ್ದಾರೆ.
ಎಲ್‌ಪಿಯು ಸೋಮವಾರದಿಂದ 10 ದಿನಗಳ ಕಾಲ ತರಗತಿಗಳನ್ನು ಸ್ಥಗಿತಗೊಳಿಸಿದ್ದು, ಮಧ್ಯಂತರ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಿದೆ. ಪೋಷಕರು ಅಥವಾ ಪಾಲಕರೊಂದಿಗೆ ಸಮಾಲೋಚಿಸಿದ ಬಳಿಕ ವಿದ್ಯಾರ್ಥಿಗಳಿಗೆ ಮನೆಗೆ ತೆರಳಲು ಅವಕಾಶ ನೀಡಲಾಗಿದೆ. ಕ್ಯಾಂಪಸ್‌ನಲ್ಲಿ ಉಳಿಯುವ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಅಥವಾ ವಾಸಸ್ಥಳದಲ್ಲೇ ಇರುವಂತೆ ಹಾಗೂ ಅನಗತ್ಯವಾಗಿ ಹೊರಗೆ ಓಡಾಡದಂತೆ ಸೂಚಿಸಲಾಗಿದೆ.
ಪಟಿಯಾಲಾದ ಚಿತ್ಕಾರಾ ವಿಶ್ವವಿದ್ಯಾಲಯದಲ್ಲಿ ಇಬ್ಬರು ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ದೃಢಪಡದ ಆರೋಪಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾದ ಘಟನೆ ನಡೆದ ಒಂದು ದಿನದ ಬಳಿಕ ಎಲ್‌ಪಿಯುನಲ್ಲಿ ಈ ಅಶಾಂತಿ ಉಂಟಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಪ್ರತಿಭಟನಾಕಾರರು ಕ್ಯಾಂಪಸ್‌ನ ಕಿಟಕಿ ಗಾಜುಗಳು ಮತ್ತು ಹೂವಿನ ಕುಂಡಗಳು ಸೇರಿದಂತೆ ಹಲವು ಆಸ್ತಿಪಾಸ್ತಿಗಳಿಗೆ ಹಾನಿ ಮಾಡುತ್ತಿರುವುದು ಹಾಗೂ ಕೆಲವು ವಸ್ತುಗಳಿಗೆ ಬೆಂಕಿ ಹಚ್ಚುತ್ತಿರುವುದು ಕಂಡುಬಂದಿದೆ. ಈ ವೇಳೆ ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಿರುವುದು ಕೂಡ ವಿಡಿಯೊಗಳಲ್ಲಿ ಕಾಣಿಸಿದೆ.