ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಹಲವು ಬೆಚ್ಚಿಬೀಳಿಸುವ ಮಾಹಿತಿ ಹೊರ ಬಿದ್ದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 5,053 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಮೊಬೈಲ್ ಡೇಟಾ, ಚಾಟ್‌ಗಳು, ಕಾಲ್ ರೆಕಾರ್ಡ್‌ಗಳು, ಗೂಗ್‌ಲ್ ಸರ್ಚ್ ಹಿಸ್ಟರಿ ಮತ್ತು ಸಾಕ್ಷಿಗಳ ಹೇಳಿಕೆಗಳು ಸೇರಿದಂತೆ ಹಲವು ಡಿಜಿಟಲ್ ಸಾಕ್ಷ್ಯಗಳನ್ನು ಸೇರಿಸಲಾಗಿದೆ.
ಪುಣೆ ಕೋಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ 5,300ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯಲ್ಲಿ(ಚಾರ್ಜ್‌ಶೀಟ್), ಕೊಲೆಗೂ ಮುನ್ನ ಕೇತನ್ ಅವರನ್ನು ಬೆಂಗಳೂರಿಗೆ ಕರೆದೊಯ್ದು ಕೈಕಾಲು ಮುರಿಯುವ ಯೋಜನೆ ಇತ್ತು ಎಂಬುದನ್ನು ಬಹಿರಂಗಪಡಿಸಿದೆ.
ಕೊಲೆಯ ಕುರಿತಾದ ಪೊಲೀಸ್ ತನಿಖೆಯಲ್ಲಿ, ಮೂವರು ಆರೋಪಿಗಳ ಪೈಕಿ ಒಬ್ಬನಾದ ರಿತೇಶ್ ಹಂಗೆ ಎಂಬಾತ ಬೆಂಗಳೂರಿನಲ್ಲಿದ್ದ ತನ್ನ ಸ್ನೇಹಿತನೊಬ್ಬನೊಂದಿಗೆ ಈ ಕುರಿತು ಚರ್ಚಿಸಿದ್ದ ಎಂಬುದು ತಿಳಿದುಬಂದಿದೆ. ಆದರೆ, ಆ ಸ್ನೇಹಿತ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಎಂದು ವರದಿಯಾಗಿದೆ.
25 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ ಅವರ ಕೊಲೆ ಪ್ರಕರಣದಲ್ಲಿ ಪುಣೆ ಪೊಲೀಸರು 5,053 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಕೇತನ್ ಅವರನ್ನು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಪುಣೆಯ ಲೋಹಗಢ ಕೋಟೆಯಿಂದ ಕಣಿವೆಗೆ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರು ಇವರಿಬ್ಬರನ್ನೂ ಹಾಗೂ ರಿತೇಶ್ ಹಂಗೆ ಎಂಬಾತನನ್ನೂ ಬಂಧಿಸಿದ್ದಾರೆ. ಪುಣೆಯ ನಿವಾಸಿಗಳಾದ ಕೇತನ್ ಮತ್ತು ಸಿಯಾ ಅವರಿಗೆ ಫೆಬ್ರವರಿಯಲ್ಲಿ ನಿಶ್ಚಿತಾರ್ಥವಾಗಿತ್ತು ಮತ್ತು ನವೆಂಬರ್‌ನಲ್ಲಿ ಜೈಪುರದಲ್ಲಿ ಅವರ ವಿವಾಹ ನಡೆಯಬೇಕಿತ್ತು.
ದೋಷಾರೋಪ ಪಟ್ಟಿಯ ಪ್ರಕಾರ, ಇಬ್ಬರು ಪ್ರಮುಖ ಆರೋಪಿಗಳು ಆರಂಭದಲ್ಲಿ ಕೇತನ್ ಅವರ ಕೈಕಾಲುಗಳನ್ನು ಮುರಿಯುವ ಯೋಜನೆಯನ್ನು ಪರಿಗಣಿಸಿದ್ದರು. ಸ್ನೇಹಿತನೊಬ್ಬನ ಸ್ನೇಹಿತ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದಾಗ, ಅವರು ಅಗರ್ವಾಲ್ ಅವರನ್ನು ಕೊಲ್ಲಲು ನಿರ್ಧರಿಸಿದರು. ಇದಕ್ಕಾಗಿ ಅವರು ಕೊಲೆಗೆ ಸಂಬಂಧಿಸಿದ ಚಲನಚಿತ್ರಗಳನ್ನು ವೀಕ್ಷಿಸಿದರು ಮತ್ತು ಕೊಲೆಯ ಯೋಜನೆಯನ್ನು ರೂಪಿಸಲು 'ಚಾಟ್‌ಜಿಪಿಟಿ' (ChatGPT) ಬಳಸಿದರು.
ಕೊಲೆ ಸಿದ್ಧತೆಯ ಭಾಗವಾಗಿ, ಪೊಲೀಸರ ಕಣ್ಣಿಗೆ ಬೀಳದೆ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಕುರಿತಾದ ಪಾಡ್‌ಕಾಸ್ಟ್‌ಗಳನ್ನೂ ಅವರು ಆಲಿಸಿದ್ದರು. ಜೂನ್ 6 ರಂದು, ಮದುವೆಗೂ ಮುನ್ನ ನಡೆಯಬೇಕಿದ್ದ ಫೋಟೋಶೂಟ್‌ಗಾಗಿ ಪ್ರಯಾಣಿಸುತ್ತಿದ್ದಾಗ, ಗೋಯಲ್ ಅಗರ್ವಾಲ್ ಅವರ ಪಾಸ್‌ಪೋರ್ಟ್ ಹರಿದು ಕೆಫೆಯೊಂದರ ಶೌಚಾಲಯದಲ್ಲಿ ಎಸೆದರು, ಇದರಿಂದಾಗಿ ಆ ಪ್ರವಾಸವು ರದ್ದಾಯಿತು.
ಪಾಸ್‌ಪೋರ್ಟ್ ಹರಿಯುವ ಕಲ್ಪನೆಯು ಚೌಧರಿಯದ್ದಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳಿಗೆ ಪರಿಚಯವಿದ್ದ ಮಹಿಳೆಯೊಬ್ಬರ ಫೋಟೋ ಬಳಸಿ 'ಮಾಹಿ' (Mahi) ಹೆಸರಿನ ನಕಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ಸೃಷ್ಟಿಸುವ ಸಲಹೆಯನ್ನೂ ಗೋಯಲ್ ಅವರ ಪ್ರಿಯಕರ ನೀಡಿದ್ದನು.
ಆ ಖಾತೆಯಿಂದ ಬಂದ ಸಂದೇಶಗಳು, ಗೋಯಲ್ ಅವರೊಂದಿಗೆ ಸೇರಿ ಹುಟ್ಟುಹಬ್ಬದ ಅಚ್ಚರಿಯ ಕಾರ್ಯಕ್ರಮವೊಂದನ್ನು (ಸರ್ಪ್ರೈಸ್ ಪ್ಲಾನ್) ಆಯೋಜಿಸುವ ನೆಪದಲ್ಲಿ ಜೂನ್ 18 ರಂದು ಲೋಹಗಢ ಕೋಟೆಗೆ ಭೇಟಿ ನೀಡುವಂತೆ ಅಗರ್ವಾಲ್ ಅವರನ್ನು ಪ್ರೇರೇಪಿಸಿದವು. ಅಗರ್ವಾಲ್ ಅವರನ್ನು ಕೋಟೆಗೆ ಕರೆತರುವ ಸಲುವಾಗಿ ಹಂಗೆ ರೂಪಿಸಿದ ಯೋಜನೆಯ ಭಾಗವೇ ಆ ನಕಲಿ ಖಾತೆಯಾಗಿತ್ತು. ಘಟನೆಯ ನಂತರ ಆ ಖಾತೆಯನ್ನು ಅಳಿಸಿಹಾಕಲಾಯಿತು.
ಕೇತನ್ ಅವರನ್ನು ಮದುವೆಯಾಗಲು ತನಗೆ ಇಷ್ಟವಿಲ್ಲ ಎಂದು ಗೋಯಲ್ ಹಲವರಿಗೆ ಹೇಳಿದ್ದರು ಎಂಬ ವಿಷಯವೂ ಆರೋಪಪಟ್ಟಿಯಿಂದ ತಿಳಿದುಬಂದಿದೆ. ಗೋಯಲ್ ಮತ್ತು ಅವರ ಸ್ನೇಹಿತರೊಬ್ಬರ ನಡುವೆ ನಡೆದಿದೆ ಎನ್ನಲಾದ ಸ್ನ್ಯಾಪ್‌ಚಾಟ್ ಸಂಭಾಷಣೆಯಲ್ಲಿ, ವಿಮಾನದ ಟಿಕೆಟ್ ಕಾಯ್ದಿರಿಸಲು ತನ್ನ ಆಧಾರ್ ಕಾರ್ಡ್‌ನ ಪ್ರತಿಯನ್ನು ಕಳುಹಿಸುವಂತೆ ಅವರು ಸ್ನೇಹಿತರನ್ನು ಕೇಳುತ್ತಿರುವುದು ಕಂಡುಬಂದಿದೆ.
ಚಾರ್ಜ್‌ಶೀಟ್ ಪ್ರಕಾರ, ಹತ್ಯೆಗೆ ಸಂಚು ರೂಪಿಸಲು ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾದಿಂದ ಮಾಹಿತಿ ಕಲೆಹಾಕಲಾಗಿತ್ತು. ಇದೇ ವೇಳೆ ಕೇತನ್ ತನ್ನ ಬೆನ್ನಿನ ಮೇಲೆ ಸಿಯಾ ಗೋಯಲ್ ಹೆಸರಿನ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಕೂಡ ಮುನ್ನೆಲೆಗೆ ಬಂದಿದೆ. ಸಿಯಾ ಹುಟ್ಟುಹಬ್ಬದ ದಿನದಂದು ಅವಳಿಗೆ ಸರ್‌ಪ್ರೈಸ್ ನೀಡಲು ಕೇತನ್ ಈ ಟ್ಯಾಟೂ ಹಾಕಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ.