ರಾಜಕೀಯ

ಹೇಳಿದಂತೆ ಕೇಳಿದರೆ ಕಾಂಗ್ರೆಸ್‌ನಲ್ಲಿ ಟಿಕೆಟ್: ತೇಜಸ್ವಿನಿ

Srinivasamurthy VN

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಪುರುಷರು ಹೇಳಿದಂತೆ ಮಹಿಳೆಯರು ಕೇಳಿದರೆ ಮಾತ್ರ ಚುನಾವಣೆಯಲ್ಲಿ ಟಿಕೆಟ್ ಮತ್ತು ಸ್ಥಾನಮಾನ ಸಿಗುತ್ತದೆ ಎಂದು ಬಿಜೆಪಿ ಬಿಜೆಪಿ ಮುಖಂಡೆ ತೇಜಸ್ವಿನಿ ರಮೇಶ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ತಮ್ಮ 49ನೇ ಜನ್ಮದಿನಾಚರಣೆ ಬಳಿಕೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರನ್ನು ಒಂದು ವಸ್ತುವಿನಂತೆ ನೋಡುತ್ತಿದ್ದು, ಪುರುಷರು ಹೇಳಿದಂತೆಲ್ಲಾ ಮಹಿಳೆಯರು ಕೇಳಿದರೆ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ಮತ್ತು ಸ್ಥಾನಮಾನ ಸಿಗುತ್ತದೆ. ಪಕ್ಷಕ್ಕಾಗಿ ದುಡಿದವರಿಗೆ ಅವಕಾಶವೂ ಇಲ್ಲ, ಅಧಿಕಾರವೂ ಇಲ್ಲ. ಚಿತ್ರ ನಟಿ ರಮ್ಯಾ ಸುಂದರಿಯಾಗಿದ್ದು, ಸೆಲೆಬ್ರಿಟಿಯಾದ ಕಾರಣದಿಂದಲೇ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿದೆ ಎಂದು ಹೇಳಿದ್ದರು.

ಅಲ್ಲದೆ ಮಹಿಳೆಯರು ಕಾಂಗ್ರೆಸ್ ಪಕ್ಷವನ್ನು ಸೇರುವ ಮುನ್ನ ಎಚ್ಚರದಿಂದರಬೇಕಿದ್ದು, ಅಲ್ಲಿ ದುಶ್ಸಾನರಂತಹ ಮಹಿಳಾ ಪೀಡಕರಿದ್ದಾರೆ. ಅವರಿಗೆ ಬೇಕಾದಂತೆ ಮಹಿಳೆಯರನ್ನು ಬಳಸಿಕೊಳ್ಳುತ್ತಾರೆ ಎಂದು ತೇಜಸ್ವಿನಿ ಕಿಡಿಕಾರಿದ್ದರು. ಅಲ್ಲದೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತಾಗಿಯೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ತೇಜಸ್ವಿನಿ ರಮೇಶ್ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ.

ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ನಂದಿತಾ ಸಾವು ಪ್ರಕರಣ ಅನುಮಾನದಿಂದ ಕೂಡಿದೆ. ನಂದಿತಾ ಸಾವು ಲವ್ ಜಿಹಾದ್‌ನಿಂದಾಗಿರುವ ಶಂಕೆ ಇದೆ. ರಾಜ್ಯ ಸರ್ಕಾರ ಅತ್ಯಾಚಾರಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಸಚಿವ ಕೆಜೆ ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಹೇಳಿದ್ದರು.

ತೇಜಸ್ವಿನಿ ಅವರ ಈ ಹೇಳಿಕೆ ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದು, ತೇಜಸ್ವಿನಿ ರಮೇಶ್ ಅವರು ಈ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

SCROLL FOR NEXT