ರಾಜಕೀಯ

ಎಲ್ರಿಗೂ ಸ್ಥಾನ: ನಾನೇನು ಸೀಲ್ ಇಟ್ಕೊಂಡಿದೀನಾ?

Rashmi Kasaragodu

ಬೆಂಗಳೂರು: ಎಲ್ರೂ ಅಧ್ಯಕ್ಷಗಿರಿನೇ ಬೇಕು ಅಂದ್ರೆ ನಾನ್ನೆಲ್ಲಿಂದ ತರ್ಲಿ? ನಾನೇನು ಸೀಲ್ ಇಟ್ಕೊಂಡಿದೀನಾ ಹೊಡೆದು ಕೊಡೋಕೆ?'

ನಿಗಮ -ಮಂಡಳಿ ನೇಮಕ ವಿಚಾರದಲ್ಲಿ ಅಧ್ಯಕ್ಷಗಿರಿಯೇ ಬೇಕು ಎಂದು ತಲೆ ತಿನ್ನುವ, ಬೇರೆ ಬೇರೆ ಮೂಲಗಳಿಂದ ಒತ್ತಡ ಹೇರುವ ಬೆಂಬಲಿಗರು ಮತ್ತು ಮುಖಂಡರ ಕಾಟ ತಾಳಲಾರದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂಥದೊಂದು ಗುಟುರು ಹಾಕಿದ್ದಾರೆ.

ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯ ಸ್ಥಾನ ಬಯಸಿ ಮುಖ್ಯಮಂತ್ರಿ ಕಚೇರಿಗೆ 10 ಸಾವಿರ, ಕೆಪಿಸಿಸಿಗೆ 6 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಪೈಕಿ ಹೆಚ್ಚಿನವರು ಅಧ್ಯಕ್ಷಸ್ಥಾನಾಕಾಂಕ್ಷಿಗಳು. ಸದಸ್ಯರಾಗಿ ಎಂದರೆ ಒಲ್ಲೆ ಎನ್ನುವವರೇ ಹೆಚ್ಚು. ಅಷ್ಟು ಮಾತ್ರವಲ್ಲ ಹೈಕಮಾಂಡ್‌ನಲ್ಲಿ ಪ್ರಭಾವ ಹೊಂದಿರುವವರು, ಸಿಎಂ ಆಪ್ತರು ಸೇರಿದಂತೆ ಹಲವು ಮೂಲಗಳಿಂದ ಒತ್ತಡವನ್ನು ತರುತ್ತಿದ್ದಾರೆ. ಹೀಗಾಗಿ ತಾಳ್ಮೆ ಕಳೆದುಕೊಂಡಿರುವ ಸಿದ್ಧರಾಮಯ್ಯ, ಎಲ್ಲರಿಗೂ ಅಧ್ಯಕ್ಷಗಿರಿ ಚಪ್ಪೆ ಹೊಡೆದುಕೊಡುವುದಕ್ಕೆ ನಾನೇನು ಸೀಲು ಇಟ್ಟುಕೊಂಡಿದ್ದೇನಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಪ್ತರಿಂದಲೇ ಬೇಡಿಕೆ : ನೇಮಕ ಪ್ರಕ್ರಿಯೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವ ಮಹಾದೇವಪ್ಪ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಸಿದ್ಧರಾಮಯ್ಯನವರ ಆಪ್ತ ಶಾಸಕರಾದ ಎಂ.ಟಿ.ಬಿ ನಾಗರಾಜ್ ಹಾಗೂ ಭೈರತಿ ಬಸವರಾಜ್, ಅವರು, ನೇಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಮಾಡಿ ಸಾರ್, ಇಲ್ಲವಾದರೆ ಪಕ್ಷದಲ್ಲಿ ನಿಮಗೆ ಕೆಟ್ಟ ಹೆಸರು ಬರುತ್ತದೆ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಸಿದ್ಧರಾಮಯ್ಯ, ನಾನು ನೇಮಕಕ್ಕೆ ಸಿದ್ಧ. ಆದರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರು ಪಟ್ಟಿಗೆ ರಾಹುಲ್ ಗಾಂಧಿ ಒಪ್ಪಿಗೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಹೈಕಮಾಂಡ್ ಒಪ್ಪಿಗೆ ಸಿಗುವವರೆಗೆ ವಿಳಂಬವಾಗುತ್ತದೆ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ.

ಆದರೆ ಪರಮೇಶ್ವರ ಬಣದ ಪ್ರಕಾರ, ನಿಗಮ- ಮಂಡಳಿ ಅಧ್ಯಕ್ಷಗಿರೆಗೆ ಹೈಕಮಾಂಡ್ ಒಪ್ಪಿಗೆ ಪಡೆಯುವುದು ಕಾಂಗ್ರೆಸ್‌ನಲ್ಲಿ ಸಂಪ್ರದಾಯ. ಹೀಗಾಗಿ ರಾಹುಲ್ ಒಪ್ಪಿಗೆಗೆ ಪಟ್ಟು ಹಿಡಿಯಲಾಗಿದೆ ಎಂಬ ಉತ್ತರ ಲಭ್ಯವಾಗಿದೆ,

20ಕ್ಕೆ ದೆಹಲಿಗೆ: ಆದರೂ  ನ.20ರೊಳಗಾಗಿ ಪಟ್ಟಿ ಅಂತಿಮಗೊಳಿಸಲು ಸಿದ್ಧರಾಮಯ್ಯ ಸಿರ್ಧರಿಸಿದ್ದು, ನಗರದ ಖಾಸಗಿ ಹೊಟೇಲ್‌ನಲ್ಲಿ ಕಳೆದೆರಡು ದಿನಗಳಿಂದ ಸಭೆ ನಡೆಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಸರ್ಕಾರದ ಕಡೆಯಿಂದ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ತೀರ್ಮಾನಿಸಿರುವ ಅವರು, ನ.20ರಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ಅವರ ಜತೆ ದೆಹಲಿಗೆ ತೆರಳಲಿದ್ದಾರೆ.

ಈ ಹಿನ್ನೆಲೆಯಲ್ಲಿ ಡಾ.ಪರಮೇಶ್ವರ ಹಾಗೂ ಸಿದ್ಧರಾಮಯ್ಯ ನಗರದ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ಪಟ್ಟಿಗೆ ಅಂತಿಮ ಸ್ವರೂಪ ನೀಡಲು ಪ್ರಯತ್ನ ನಡೆಸಿದ್ದಾರೆ.

SCROLL FOR NEXT