ಕೊಪ್ಪಳ: ಪ್ರಧಾನಿ ಮೋದಿ ಅವರೇ ಈಗ ಗಾಂಧೀಜಿ ಜಪ ಮಾಡುತ್ತಿದ್ದಾರೆ. ಅದನ್ನು ಯಡಿಯೂರಪ್ಪ ಅವರು ಅರ್ಥಮಾಡಿಕೊಂಡು ಮಾತನಾಡುವುದು ಒಳ್ಳೆಯದು.
ಇದು ಮಾಜಿ ಸಿಎಂ ಯಡಿಯರೂಪ್ಪ ಅವರು, 'ರಾಜ್ಯ ಸರ್ಕಾರದ ನಿದ್ರೆ ಬಿಡಿಸಲು ಬಡಿಗೆ ಹಿಡಿದು ಬನ್ನಿ' ಎಂದು ನೀಡಿರುವ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ನೀಡಿರುವ ತಿರುಗೇಟು.
ಭಾನುವಾರ ಕೊಪ್ಪಳದಲ್ಲಿ 9ನೇ ರಾಜ್ಯ ಮಟ್ಟದ ಕದಳಿ ಸಮಾವೇಶ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರೇ ಗಾಂಧೀಜಿ ಹೆಸರು ಜಪಿಸುತ್ತಿರುವಾಗ ಯಡಿಯೂರಪ್ಪ ಅವರು ಈ ರೀತಿ ಹೇಳಿಕೆ ನೀಡುವುದು ಒಳ್ಳೆಯದಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿಯೇ ಇದೆ. ಈ ಕುರಿತು ಮಾತನಾಡುವುದಕ್ಕೆ ಬಿಜೆಪಿಯರಿಗೆ ನೈತಿಕತೆ ಇಲ್ಲ. ತಮ್ಮ ಅಧಿಕಾರವಧಿಯಲ್ಲಿ ಇಡೀ ರಾಜ್ಯದ ಗಣಿಯನ್ನೇ ಲೂಟಿ ಮಾಡಿದರೂ ತಲೆ ಕೆಡಿಸಿಕೊಳ್ಳದ ಅವರಿಂದ ಕಾನೂನು ಸುವ್ಯವಸ್ಥೆ ಕುರಿತು ಹೇಳಿಕೊಳ್ಳುವ ಅಗತ್ಯ ಇಲ್ಲ.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರೆ ಏನರ್ಥ? ರಾಜ್ಯದಲ್ಲಿ ಎಲ್ಲಿಯಾದರೂ ಕೋಮು ಗಲಭೆಯಾಗುತ್ತಿವೆಯೇ? ಲೂಟಿ ಯಾಗುತ್ತಿದೆಯೇ? ಗಲಭೆಗಳಾಗುತ್ತಿವೆಯೇ? ಏನು ಇಲ್ಲ. ಆದರೆ ವಿಕೃತ ಮನಸ್ಸಿನಿಂದ ಆಗುತ್ತಿರುವ ಅತ್ಯಾಚಾರಗಳನ್ನು ಈಗಾಗಲೇ ನಿಯಂತ್ರಣ ಮಾಡಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ನಿಗಮ-ಮಂಡಳಿ ನೇಮಕ ಸುಸೂತ್ರವಾಗಿಯೇ ನಡೆಯುತ್ತಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲಿ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದರು.