ಸಚಿವ ಆಂಜನೇಯ (ಸಂಗ್ರಹ ಚಿತ್ರ) 
ರಾಜಕೀಯ

ಆಂಜನೇಯ ರಾಜಿನಾಮೆಗೆ ಬಿಜೆಪಿ ಪಟ್ಟು

ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ರಾಜಿನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ಶುಕ್ರವಾರವೂ ಹೋರಾಟ ಮುಂದುವರಿಸಿತು. ಆದರೆ, ಸಚಿವ ಆಂಜನೇಯ ಬೆಂಬಲಕ್ಕೆ ಸರ್ಕಾರ ನಿಂತಿರುವುದರಿಂದ ಸದನದಲ್ಲಿ ಆಡಳಿತ ಪಕ್ಷ ಮಾತ್ರ ಜಗ್ಗಲಿಲ್ಲ...

ವಿಧಾನಸಭೆ/ವಿಧಾನಪರಿಷತ್: ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ರಾಜಿನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ಶುಕ್ರವಾರವೂ ಹೋರಾಟ ಮುಂದುವರಿಸಿತು. ಆದರೆ, ಸಚಿವ ಆಂಜನೇಯ ಬೆಂಬಲಕ್ಕೆ ಸರ್ಕಾರ ನಿಂತಿರುವುದರಿಂದ ಸದನದಲ್ಲಿ ಆಡಳಿತ ಪಕ್ಷ ಮಾತ್ರ ಜಗ್ಗಲಿಲ್ಲ.

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡುವವರೆಗೆ ಕಲಾಪಕ್ಕೆ ಸಹಕಾರ ನೀಡುವುದಿಲ್ಲ ಎಂದು ಪಟ್ಟು ಹಿಡಿದ ಬಿಜೆಪಿ ಸದಸ್ಯರು ಬೆಳಗ್ಗೆ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

ಇದಕ್ಕೂ ಮುನ್ನ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡ ಮುಖಂಡರು, ಸಚಿವರ ರಾಜಿನಾಮೆಗೆ ಬಿಗಿಪಟ್ಟು ಹಿಡಿಯಲು ನಿರ್ಧರಿಸಿದ್ದರು. ದಿನದ ಕಲಾಪ ಆರಂಭವಾಗುತ್ತಿದ್ದಂತೆ ಕೆಳಮನೆಯಲ್ಲಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಇತ್ತ ಮೇಲ್ಮನೆಯಲ್ಲಿ `ಭಾರತ್ ಮಾತಾಕೀ ಜೈ' ಪ್ರಕರಣಕ್ಕೆ ಸಭಾಪತಿಯವರು ತಾತ್ಕಾಲಿಕ ಉಪ ಶಮನ ನೀಡುತ್ತಿದ್ದಂತೆ ಬಿಜೆಪಿ ಸದಸ್ಯರು ಆಂಜನೇಯ ಪ್ರಕರಣದಲ್ಲಿ ನಿಲುವಳಿ ಸೂಚನೆಗೆ ಮುಂದಾದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಅವಕಾಶ ಕೊಡಲಿಲ್ಲ.

ಅಂತಿಮವಾಗಿ ಸಭಾಪತಿಯವರು ನಿಲುವಳಿ ಯ ಅಂಶವನ್ನು ವಿರೋಧಪಕ್ಷದ ನಾಯಕರಿಗೆ ಪ್ರಸ್ತಾಪಿಸಲು ಅವಕಾಶ ನೀಡಿದರು. ಇದನ್ನೇ ಬಳಸಿಕೊಂಡ ಕೆ.ಎಸ್. ಈಶ್ವರಪ್ಪ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗು ವಂತೆ ವಾಗ್ದಾಳಿ ನಡೆಸಿದರು. ಅಚ್ಚರಿ ಸಂಗತಿ ಎಂದರೆ ಉಭಯ ಸದನಗಳಲ್ಲಿ ಸಚಿವ ಎಚ್. ಆಂಜನೇಯ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕೆಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರೆ, ಆಡಳಿತ ಪಕ್ಷ ಮಾತ್ರ ಆಂಜನೇಯ ಅವರನ್ನು ಸಮರ್ಥಿಸಿಕೊಳ್ಳುವಂತಹ ಒಂದೇ ಒಂದು ಮಾತನ್ನಾಡದೇ ಬೇರೆ ಬೇರೆ ವಿಷಯ ಪ್ರಸ್ತಾಪ ಮಾಡಿತು. ಸರ್ಕಾರದ ನಡಿಗೆ ಭ್ರಷ್ಟಾ-ಚಾರದ ಕಡೆಗೆ, ಅನ್ಯಾಯ, ಅನ್ಯಾಯ, ಕೋಟಿ ಕೋಟಿ ಲೂಟಿ ಎನ್ನುವುದೂ ಸೇರಿದಂತೆ ಸರ್ಕಾರಕ್ಕೆ ಮುಜುಗರ ತರುವ ಅನೇಕ ರೀತಿಯ ಘೋಷಣೆಗಳನ್ನು ವಿಧಾನಸಭೆ ಯಲ್ಲಿ ಬಿಜೆಪಿ ಸದಸ್ಯರು ಕೂಗಿದರು. ಆದರೂ ಸ್ಪೀಕರ್ ಕಾಗೋಡು ತಿಮ್ಮಪ್ಪ, ಪ್ರತಿಭಟನೆಯನ್ನೂ ಲೆಕ್ಕಿಸದೆ ವಿಧೇಯಕಗಳನ್ನು ಮಂಡಿಸುವಂತೆ ಸೂಚಿಸಿದರು.

ವಿಧೇಯಕಗಳ ಮಂಡನೆ: ಕಾನೂನು ಸಚಿವ ಜಯಚಂದ್ರ ಜಲಸಾರಿಗೆ ಮಂಡಳಿ ವಿಧೇಯಕ ಸೇರಿದಂತೆ ಕೆಲವು ವಿಧೇಯಕಗಳನ್ನು ಮಂಡಿಸಿ ಅಂಗೀಕಾರ ಪಡೆದರು. ಬಿಜೆಪಿ ಸದಸ್ಯರು ಜೋರು ಘೋಷಣೆಗಳನ್ನು ಕೂಗಲಾರಂಭಿಸಿದರು. ಇದರಿಂದ ವಿಚಲಿತರಾಗದ ಸ್ಪೀಕರ್ ನಸುನಗುತ್ತಲೇ ಪ್ರಶ್ನೋತ್ತರ ಕಲಾವನ್ನು ಎತ್ತಿಕೊಂಡರು. ನಂತರ ಉಪ ಲೋಕಾಯುಕ್ತ ಪದಚ್ಯುತಿ ವಿಚಾರ ಬರುತ್ತದೆ ಎಂದು ತಿಳಿಯುತ್ತಿದ್ದಂತೆ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೂಚನೆಯಂತೆ ಕಾಗದ, ಪತ್ರಗಳನ್ನು ಹರಿದು ಬಿಸಾಡಿ ಸದನದಲ್ಲಿ ಕೂಗಾಡಿದರು. ಒಟ್ಟಾರೆ ಆಂಜನೇಯ ಲಂಚ ಪ್ರಕರಣ ಶುಕ್ರವಾರದ ಕಲಾಪವನ್ನು ನುಂಗಿ ಹಾಕಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

SCROLL FOR NEXT