ರಾಜಕೀಯ

ಸಂಪುಟ ವಿಸ್ತರಣೆ ಮತ್ತೆ ಮುಂದೂಡಲು ಸಿಎಂ ಕಸರತ್ತು

Lingaraj Badiger

ಬೆಂಗಳೂರು: ಪದೇಪದೆ ಒಂದಲ್ಲ ಒಂದು ಕಾರಣ ನೀಡಿ, ಸಂಪುಟ ವಿಸ್ತರಣೆ ಅಥವಾ ಪುನಾರಚನೆಯನ್ನು ಮುಂದೂಡುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಾರಿಯೂ ಮುಂದೂಡುವ ಕಸತರತ್ತು ಮುಂದುವರೆಸಿದ್ದಾರೆ.

ಸಂಪುಟ ವಿಸ್ತರಣೆ ಮತ್ತು ಪುನಾರಚನೆ ವಿಧಾನ ಪರಿಷತ್ ಮತ್ತು ಪಂಚಾಯತ್ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಂಪುಟ ವಿಸ್ತರಣೆಯನ್ನು ಮುಂದೂಡುವಂತೆ ಸಿಎಂ ಹೈಕಮಾಂಡ್‌ಗೆ ಮನವಿ ಮಾಡಲು ಮುಂದಾಗಿದ್ದಾರೆ.

ಒಂದು ವೇಳೆ ಹೈಕಮಾಂಡ್ ತಮ್ಮ ಮನವಿ ಬಗ್ಗದಿದ್ದರೆ, ಸದ್ಯ ಸಂಪುಟ ವಿಸ್ತರಣೆ ಮಾಡಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿ, ಸಂಪುಟ ಪುನಾರಚನೆ ಬೇಡ. ಇದು ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಸಲಹೆ ನೀಡಲಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪೂರ್ವಭಾವಿ ಸಭೆ ನಡೆಸಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ, ಸಂಪುಟ ವಿಸ್ತರಣೆ ಅಥವಾ ಪುನಾರಚನೆಯನ್ನು ಪರಿಷತ್, ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಚುನಾವಣೆ ಮುಗಿಯುವವರೆಗೆ ಮುಂದೂಡುವಂತೆ ಸಿಎಂ ಪಟ್ಟು ಹಿಡಿದಿದ್ದಾರೆ.

ಬಿಬಿಎಂಪಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಪ್ರತಿಪಕ್ಷ ಬಿಜೆಪಿ, ಸಂಪುಟ ಪುನಾರಚನೆಯಿಂದಾಗ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗುವ ಅಸಮಾಧಾನದ ಲಾಭವನ್ನು ಬಿಜೆಪಿ ಪಂಚಾಯತ್ ಚುನಾವಣೆಯಲ್ಲಿ ಪಡೆದುಕೊಳ್ಳಬಹುದು ಎಂಬುದು ಸಿಎಂ ಲೆಕ್ಕಾಚಾರ.

ಸಿಎಂ ಹಾಗೂ ಪರಮೇಶ್ವರ್ ಅವರು ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಭೇಟಿಗೆ ಸಮಯ ಕೋರಿದ್ದು, ಭೇಟಿಯ ಅವಕಾಶ ದೊರೆತರೇ ವಿಸ್ತರಣೆ ಹಾಗೂ ಪುನಾರಚನೆಯ ಹಿಂದಿನ ಒತ್ತಡಗಳು ಹಾಗೂ ಹಿರಿಯ  ನಾಯಕರ ನಿಲುವು ಏನಿದೆ ಎಂಬುದನ್ನು ವಿವರಿಸಲಿದ್ದಾರೆ.

SCROLL FOR NEXT