ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ದುಬಾರಿ ವಾಚ್ ವಿವಾದದ ಕುರಿತು ಚರ್ಚಿಸಲು ವಿಧಾನಸಭೆಯಲ್ಲಿ ಮಂಗಳವಾರ ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ನಿರ್ಧರಿಸಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎತ್ತಿರುವ ಈ ಪ್ರಕರಣವನ್ನು ಮುಂದುವರಿಸಲು ನಿರ್ಧರಿಸಿದೆ.
ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ಸುದೀರ್ಘವಾಗಿ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ.ವಿಧಾಲ ಮಂಡಲದ ಎರಡು ಸದನಗಳಲ್ಲಿ ನಿಲುವಳಿ ಸೂಚನೆಗೆ ಬಿಜೆಪಿ ತೀರ್ಮಾನಿಸಿದೆ. ದುಬಾರಿ ವಾಚ್ ವಿವಾದವೂ ಸೇರಿದಂತೆ ಬರ ಕಾಮಗಾರಿಯಲ್ಲಿನ ಲೋಪಗಳು, ಕುಡಿಯುವ ನೀರಿನ ಸಮಸ್ಯೆ, ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರ ನೇಮಕ/ಪದಚ್ಯುತಿ ಗೊಂದಲಗಳು, ಮಂತ್ರಿಗಳ ಭ್ರಷ್ಟಾಚಾರ ಮತ್ತು ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಕುರಿತು ಗಮನ ಸೆಳೆಯಲಾಗುವುದು ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಎಲ್ಲ ಶಾಸಕರೂ ಸದನದ ಕಲಾಪದಲ್ಲಿ ತಪ್ಪದೇ ಭಾಗವಹಿಸಿ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ದುಬಾರಿ ವಾಚ್ ಕುರಿತಂತೆ ಸಿಎಂ ಸ್ಪಷ್ಟೀಕರಣ ನೀಡಿದರೂ ಅನೇಕ ಗೊಂದಲಗಳಿವೆ ಎಂದ ಅವರು, ಈ ವಿಷಯದ ಕುರಿತು ಚರ್ಚೆಗೆ ಮೊದಲ ಆದ್ಯತೆ ನೀಡಲಾಗುವುದು. ನಂತರ ಒಂದೊಂದೇ ಎಲ್ಲ ವಿಷಯಗಳನ್ನು ಚರ್ಚೆಗೆ ಎತ್ತಿಕೊಳ್ಳಲಾಗುವುದು ಎಂದರು