ಬೆಂಗಳೂರು: ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣ ವಿಧಾನಮಂಡಲದ ಉಭಯ ಸದನಗಳಲ್ಲೂ ಮಾರ್ಧನಿಸಿತು. ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡಿದ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ, ಕೆಜೆ ಜಾರ್ಜ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಈ ಸರ್ಕಾರ ಅವರ ರಕ್ಷಣೆಗೆ ನಿಂತಿದೆ. ಇದು ಕೊಲೆಗಡುಕ ಸರ್ಕಾರ ಎಂದು ಆರೋಪಿಸಿದರು.
ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿ ಪಕ್ಷದ ನಾಯಕ ಈಶ್ವರಪ್ಪ ನಡುವೆ ನೇರಾನೇರ ಮಾತಿನ ಚಕಮಕಿ ನಡೆಯಿತು. ಈಶ್ವರಪ್ಪನವರು ಇದು ಕೊಲೆಗಡುಕ ಸರ್ಕಾರ ಎಂದು ಹೇಳುತ್ತಿದ್ದಂತೆ ಕೋಪಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏರುಧ್ವನಿಯಲ್ಲಿ ಈಶ್ವರಪ್ಪನನ್ನು ಸದನದಿಂದ ಹೊರ ಹಾಕ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರ ಈ ಮಾತಿಗೆ ಈಶ್ವರಪ್ಪ ಏನ್ ಮಾತಾಡ್ತಾ ಇದ್ದೀರಿ..ಮನೆಗೆ ಹೋಗಿ ಹೇಳಿ..ನೀವ್ ಹೋಗಿ ಹೊರಗೆ ಎಂದು ತಿರುಗೇಟು ನೀಡಿದರು. ಈ ವೇಳೆ ಬಿಜೆಪಿ ಸದಸ್ಯರು ಇದು ಕೊಲೆಗಡುಕ ಸರ್ಕಾರ ಎಂದು ಘೋಷಣೆ ಕೂಗಿ ಕೋಲಾಹಲ ಎಬ್ಬಿಸಿದರು. ಇದರಿಂದಾಗಿ ಸಭಾಪತಿ ಡಿಎಚ್ ಶಂಕರಮೂರ್ತಿ ಅವರು ಕಲಾಪವನ್ನು 20 ನಿಮಿಷಗಳ ಕಾಲ ಮುಂದೂಡಿದರು.