ರಾಜಕೀಯ

ಕುದುರೆ ವ್ಯಾಪಾರ ಭೀತಿ: ಪಕ್ಷೇತರ ಶಾಸಕರನ್ನು ಮುಂಬೈಗೆ ಶಿಫ್ಟ್ ಮಾಡಿದ ಕಾಂಗ್ರೆಸ್

Shilpa D

ಬೆಂಗಳೂರು:  ರೆಸಾರ್ಟ್‌ ರಾಜಕಾರಣ ರಾಜ್ಯಸಭೆ ಚುನಾವಣೆಗೂ ಕಾಲಿಟ್ಟಿದ್ದು, ಕಾಂಗ್ರೆಸ್‌ ಬೆಂಬಲಿತ 14 ಮಂದಿ ಪಕ್ಷೇತರ  ಶಾಸಕರು ಮುಂಬಯಿಗೆ ತೆರಳಿದ್ದಾರೆ.

ಕುದುರೆ ವ್ಯಾಪಾರದ ಭೀತಿ ಕಂಡು ಬಂದಿರುವುದರಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿರುವ ಪಕ್ಷೇತರ ಶಾಸಕರನ್ನು ಅನ್ಯ ಪಕ್ಷಗಳತ್ತ ವಾಲದಂತೆ ರಕ್ಷಿಸಿಕೊಳ್ಳಲು ಮುಂಬೈನ ಪಂಚತಾರಾ ಹೋಟೆಲ್‌ಗೆ ಸ್ಥಳಾಂತರ ಮಾಡಲಾಗಿದೆ.

ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್‌ನ ಕೆ.ಸಿ. ರಾಮಮೂರ್ತಿ ಹಾಗೂ ಜೆಡಿಎಸ್‌ನ ಫಾರೂಕ್‌ ನಡುವೆ ಪೈಪೋಟಿ ಏರ್ಪಟ್ಟಿದೆ. ಹೆಚ್ಚುವರಿ ಮತ ಅವಲಂಬಿತ ಈ ಸೀಟನ್ನು ಗೆಲ್ಲಲು ಉಭಯ ಪಕ್ಷಗಳಿಂದಲೂ ಪಕ್ಷೇತರರನ್ನು ಸೆಳೆಯುವ ಯತ್ನ ನಡೆಯುತ್ತಿದೆ. ಇದರ ಭಾಗವಾಗಿ ಮುಂಬಯಿಗೆ ಪ್ರಯಾಣ ಬೆಳೆಸಲಾಗಿದೆ.

ಕಾಂಗ್ರೆಸ್‌ ಶಾಸಕ ಎಸ್‌.ಟಿ.ಸೋಮಶೇಖರ್‌ ನೇತೃತ್ವದಲ್ಲಿ ಪಕ್ಷೇತರ ಹಾಗೂ ಕಾಂಗ್ರೆಸ್‌ನ ಕೆಲವು ಶಾಸಕರು ಸೇರಿದಂತೆ ಒಟ್ಟು 14 ಮಂದಿ ಶಾಸಕರು ಮುಂಬೈಗೆ ಸ್ಥಳಾಂತರಗೊಂಡಿದ್ದಾರೆ. ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ನ 3ನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಪರ ಮತ ಚಲಾಯಿಸಲು ಒಪ್ಪಿರುವ ಪಕ್ಷೇತರ ಶಾಸಕರನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಸಂಪರ್ಕಕ್ಕೆ ಸಿಗದಂತೆ ಎಚ್ಚರ ವಹಿಸಲು ಈ ಕ್ರಮ ಅನುಸರಿಸಲಾಗಿದೆ.

ಪಕ್ಷೇತರ ಶಾಸಕರಾದ ವರ್ತೂರು ಪ್ರಕಾಶ್‌, ಎಸ್‌.ಎನ್‌.ಸುಬ್ಟಾರೆಡ್ಡಿ, ಸತೀಶ್‌ ಸೈಲ್‌, ಮಂಕಾಳ ಸುಬ್ಬ ವೈದ್ಯ, ಎಂಇಎಸ್‌ನ ಅರವಿಂದ ಪಾಟೀಲ್‌, ಕರ್ನಾಟಕ ಮಕ್ಕಳ ಪಕ್ಷದ ಅಶೋಕ್‌ ಖೇಣಿ, ಕೆಜೆಪಿಯ ಬಿ.ಆರ್‌.ಪಾಟೀಲ್‌ ಅವರನ್ನು ಮುಂಬಯಿಗೆ ಶಿಫ್ಟ್ ಮಾಡಲಾಗಿದೆ.

ಪಕ್ಷೇತರ ಶಾಸಕರ ಪ್ರವಾಸಕ್ಕೆ ಕಾಂಗ್ರೆಸ್‌ ಶಾಸಕರಾದ ಎಸ್‌.ಟಿ.ಸೋಮಶೇಖರ್‌ ನೇತೃತ್ವ ವಹಿಸಿದ್ದು, ಬೈರತಿ ಬಸವರಾಜು ಹಾಗೂ ಮುನಿರತ್ನ ಸಹ ಮುಂಬೈಗೆ ತೆರಳಿದ್ದಾರೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದ್ದಾಗ ಅಲ್ಲಿನ ಶಾಸಕರಿಗೆ ಬೆಂಗಳೂರಿನಲ್ಲಿ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಆತಿಥ್ಯ ನೀಡಿದ್ದರು.

ತಮ್ಮದೇ ಪಕ್ಷದ ಕೆಲ ಶಾಸಕರನ್ನೂ ಮುಂಬೈ ಅಥವಾ ಬೇರೆಡೆ ಸ್ಥಳಾಂತರಿಸುವ ಬಗ್ಗೆ ಕಾಂಗ್ರೆಸ್‌ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

SCROLL FOR NEXT