ಈಶ್ವರಪ್ಪ ಮತ್ತು ಮುರುಳಿಧರ ರಾವ್
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಹಲವು ದಿನಗಳಿಂದ ಹೊಗೆಯಾಡುತ್ತಿರುವ ನಾಯಕರ ಭಿನ್ನಮತ ಶಮನ ಮಾಡುವಲ್ಲಿ ರಾಷ್ಟ್ರೀಯ ನಾಯಕರು ಕೂಡ ವಿಫಲರಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ,ಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗ ಸಮರ ಸಾರಿರುವ ಈಶ್ವರಪ್ಪ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿರುವ ಹೈಕಮಾಂಡ್ ಆದೇಶಕ್ಕೆ ಸೆಡ್ಡು ಹೊಡೆದಿದ್ದಾರೆ.
ಶನಿವಾರ ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ ರಾವ್ ರಾಜ್ಯದ ಹಲವು ನಾಯಕರ ಜೊತೆ ಭಾನುವಾರ ಕೂಡ ಸಮಾಲೋಚನೆ ನಡೆಸಿದರು.ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಹಿರಿಯ ಮುಖಂಡರಾದ ಗೋವಿಂದ್ ಕಾರಜೋಳ್, ಸೇರಿದಂತೆ ಹಲವು ಜೊತೆ ಸಭೆ ನಡೆಸಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಕಚ್ಚಾಟದ ಬಗ್ಗೆ ಅವರ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವವರು ಮತ್ತು ಈಶ್ವರಪ್ಪ ಬಣಗೆ ಸೇರದೇ ತಟಸ್ಥರಾಗಿ ಉಳಿದಿರುವ ಕೆಲ ನಾಯಕರು ರಾವ್ ಅವರನ್ನು ಭೇಟಿ ಮಾಡಿದರು.
ಮಾಧ್ಯಮಗಳಿಂದ ದೂರವೇ ಇದ್ದ ಮುರುಳಿಧರ ರಾವ್, ಯಾವುದೇ ಹೇಳಿಕೆ ನೀಡದಂತೆ ಪಶ್ರದ ನಾಯಕರುಗಳಿಗೆ ಸೂಚಿಸಿದ್ದರು. ಸರಣಿ ಸಭೆಗಳ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾವ್, ಪಕ್ಷದ ನಿಯಮಗಳನ್ನು ಮೀರಿದರೇ ಶಿಶ್ತುಕ್ರಮ ಎದುರಿಸುವ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರ ನಾಯಕರು ರಾಜ್ಯದಲ್ಲಿ ನಡೆಯುತ್ತಿರುವ ಪಕ್ಷದ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿ ಪಕ್ಷದ ಯಾವುದೇ ನಾಯಕರು, ಕಾರ್ಯಕರ್ತರು ಪಾಲ್ಗೊಂಡರೇ ಅದನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.ಜೊತೆಗೆ ಪಕ್ಷದ ಆಂತರಿಕ ವಿದ್ಯಮಾನಗಳನ್ನು ಮಾಧ್ಯಮದ ಮುಂದೆ ಹೇಳಕೂಡದೆಂದು ತಾಕೀತು ಮಾಡಿದ್ದಾರೆ.
ಈಶ್ವರಪ್ಪ ಬಣ ಆಯೋಜಿಸಿದ್ದ ಸೇವ್ ಬಿಜೆಪಿ ರ್ಯಾಲಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಮುರುಳಿಧರ ರಾವ್, ಭವಿಷ್ಯದಲ್ಲಿ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೇ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.ಜೊತೆಗೆ ಮಾದ್ಯಮಗಳ ಮುಂದೆ ಬೇಜವಾಬ್ದಾರಿ ಹೇಳಿಕೆ ನೀಡಕೂಡದೆಂದು ತಿಳಿಸಿದ್ದಾರೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಅವಕಾಶವಿದೆ, ಯಾವುದೇ ರೀತಿಯ ಸಮಸ್ಯೆಗಳನ್ನು ಅದರ ಪರಿಮಿತಿಯೊಳಗೆ ಚರ್ಚಿಸಿ ಬಗೆಹರಿಸಿಕೊಳ್ಳುವ ಅವಕಾಶವಿದೆ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ಬೆಳವಣಿಗೆಗಳನ್ನು ಕೇಂದ್ರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ವರದಿ ನೀಡುವುದಾಗಿ ಹೇಳಿದ್ದಾರೆ.