ಬೆಂಗಳೂರು: ಮೂರು ದಿನಗಳ ರಾಜ್ಯ ಪ್ರವಾಸದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದ ಸೋಷಿಯಲ್ ಮೀಡಿಯಾ ಘಟಕಕ್ಕೆ ಹೆಚ್ಚಿನ ಹೊಣೆಗಾರಿಕೆ ನೀಡಿದ್ದಾರೆ.
ಮುಂದಿನ ತಿಂಗಳು ತಾವು ಮತ್ತೆ ರಾಜ್ಯಕ್ಕೆ ಭೇಟಿ ನೀಡುವ ವೇಳೆ ಬಿಜೆಪಿ ಸೋಷಿಯಲ್ ಮೀಡಿಯಾ ಮೂಲಕ ನಾಲ್ಕು ಪಟ್ಟು ಜನರನ್ನು ತಲುಪುವಂತೆ ಟಾರ್ಗೆಟ್ ನೀಡಿದ್ದಾರೆ.
ಇತರ ಪಕ್ಷಗಳಿಗಿಂತ ಸೋಷಿಯಲ್ ಮೀಡಿಯಾ ಪ್ರಚಾರದಲ್ಲಿ ಬಿಜೆಪಿ ಮುಂದಿದೆ, ಆದರೂ ಇಷ್ಟು ಸಾಲದು ಎಂದು ಹೇಳಿರುವ ಶಾ, ನಮ್ಮ ಪ್ರತಿಸ್ಪರ್ಧಿಗಿಂತ ಮುಂಚೆಯೇ ವಿಷಯವನ್ನು ತಲುಪಿಸುವಲ್ಲಿ ನಾವು ಹಿಂದೆ ಬೀಳಬಾರದು, ಮುಂಬರುವ ವಿಧಾಸಭೆ ಚುನಾವಣೆಯಲ್ಲಿ ಮಿಷನ್ 150 ಗೆ ಇದು ಸಾಕಾಗದು, ಪ್ರಗತಿ ಪರಿಶೀಲನೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಾಲ್ಕು ಪಟ್ಟು ಹೆಚ್ಚಿರಬೇಕು ಎಂದು ರಾಜ್ಯ ಬಿಜೆಪಿ ಸೋಷಿಯಲ್ ಮೀಡಿಯಾ ಘಟಕಕ್ಕೆ ಅಮಿತ್ ಶಾ ಸಲಹೆ ನೀಡಿದ್ದಾರೆ.
ಸದ್ಯ ಕರ್ನಾಟಕ ಬಿಜೆಪಿಗೆ 2.32 ಲಕ್ಷ ಹಿಂಬಾಲಕರಿದ್ದಾರೆ. ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ 1.11 ಲಕ್ಷ ಹಿಂಬಾಲಕರಿದ್ದಾರೆ, ಇದು ಮುಂದಿನ ತಿಂಗಳು ತಾವು ರಾಜ್ಯಕ್ಕೆ ಆಗಮಿಸುವ ವೇಳೆಗೆ 5 ಲಕ್ಷ ಮತ್ತು 4.40 ಲಕ್ಷಕ್ಕೆ ಏರಿಕೆಯಾಗಬೇಕು ಎಂದು ಸೂಚಿಸಿದ್ದಾರೆ.
ಇತ್ತೀಚೆಗೆ ನಡೆದ ಸಮಾವೇಶದಲ್ಲಿ 3,500ಕ್ಕೂ ಹೆಚ್ಚು ಮಂದಿ ಬಿಜೆಪಿ ಸೋಷಿಯಲ್ ಮೀಡಿಯಾ ಘಟಕದ ಸದಸ್ಯರು ಹಾಜರಿದ್ದರು. ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ 5 ಸಾವಿರಕ್ಕೂ ಹೆಚ್ಚು ಸದಸ್ಯರು ತೊಡಗಿಕೊಂಡು ಕಾರ್ಯ ನಿರ್ನಹಿಸಬೇಕೆಂದು ಹೇಳಿರುವುದಾಗಿ ರಾಜ್ಯ ಬಿಜೆಪಿ ಸಾಮಾಜಿಕ ಮಾಧ್ಯಮ ಘಟಕದ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಸೋಷಿಯಲ್ ಮೀಡಿಯಾ ಘಟಕ ಆಯಾಯಾ ವಿಧಾನ ಸಭೆ ಕ್ಷೇತ್ರದ ವಾಟ್ಸಾಪ್ ಗ್ರೂಪ್ ಸೃಷ್ಟಿಸಿ, ಬಿಜೆಪಿ ಪರ ಮತದಾರರನ್ನು ಸೆಳೆಯುವಲ್ಲಿ ಕೆಲಸ ಮಾಡಿದ್ದವು. ನಾವು ರಾಜ್ಯದಲ್ಲಿ ಈಗಾಗಲೇ 2 ಸಾವಿರ ವಾಟ್ಸಾಪ್ ಗ್ರೂಪ್ ರಚಿಸಿದ್ದು, 5 ಸಾವಿರ ಗ್ರೂಪ್ ರಚಿಸಲು ನಮಗೆ ಟಾರ್ಗೆಟ್ ನೀಡಲಾಗಿದೆ ಎಂದು ಸದಸ್ಯರೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics