ಬೆಂಗಳೂರಿನಲ್ಲಿ ನಿನ್ನೆ ನಡೆದ ಸಾರ್ಥಕ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಬೆಂಗಳೂರು: ಭಾರತೀಯ ಜನತಾ ಪಾರ್ಟಿ ರೈತ ವಿರೋಧಿ ಯೋಜನೆ ಹಾಗೂ ನೀತಿಗಳನ್ನ ಹೊಂದಿದೆ ಎಂದು ಆರೋಪಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ರೈತರ ಸಾಲ ಮನ್ನಾ ಮಾಡಲು ಕರ್ನಾಟಕ ಮತ್ತು ಪಂಜಾಬ್ ನಲ್ಲಿ ಕಾಂಗ್ರೆಸ್ ಸರ್ಕಾರಗಳು ಕೇವಲ 5 ನಿಮಿಷ ತೆಗೆದುಕೊಂಡರೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಒಂದು ತಿಂಗಳಿನಿಂದ ಮೀನ ಮೇಷ ಎಣಿಸಿದರು ಎಂದು ಆರೋಪಿಸಿದ್ದಾರೆ.
ಅವರು ನಿನ್ನೆ ಬೆಂಗಳೂರಿನಲ್ಲಿ ಸಾರ್ಥಕ ಸಮಾವೇಶ ರ್ಯಾಲಿ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಕೆಲ ಸಮಯಗಳ ಹಿಂದೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚೆ ನಡೆಸಿದ್ದೆ. ಕೇವಲ 5 ನಿಮಿಷಗಳಲ್ಲಿ ನಿರ್ಧಾರ ತೆಗೆದುಕೊಂಡೆವು. ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರ ಸಾಲವನ್ನು ಕೇವಲ 48 ಗಂಟೆಗಳಲ್ಲಿ ಮನ್ನಾ ಮಾಡುವುದಾಗಿ ಘೋಷಿಸಿದೆವು. ಬಿಜೆಪಿಯಂತೆ ಈ ವಿಷಯದಲ್ಲಿ ಯಾವುದೇ ನಾಟಕ, ತಮಾಷೆ, ಡ್ಯಾನ್ಸ್, ಪ್ರಚಾರ ಮಾಡಿಲ್ಲ ಎಂದು ಬಿಜೆಪಿಯನ್ನು ಅಣಕಿಸಿದರು.
ಪಂಜಾಬ್ ರಾಜ್ಯದಲ್ಲಿ ಕೂಡ ಇದೇ ಕ್ರಮ ಅನುಸರಿಸಲಾಯಿತು. ಅಲ್ಲಿನ ರೈತರ ಸಾಲ ಮನ್ನಾವನ್ನು ಮುಖ್ಯಮಂತ್ರಿ ಕೆಲವೇ ನಿಮಿಷಗಳಲ್ಲಿ ತೆಗೆದುಕೊಂಡರು. ಆದರೆ ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಲು ನಾನು ಆ ರಾಜ್ಯದಾದ್ಯಂತ 30 ದಿನಗಳು ಸುತ್ತಬೇಕಾಯಿತು. ಅಲ್ಲಿನ ಲಕ್ಷಾಂತರ ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿದನು. ಕೊನೆಗೂ ಉತ್ತರ ಪ್ರದೇಶ ಸರ್ಕಾರ ಬೇರೆ ದಾರಿಯಿಲ್ಲದೆ ರೈತರ ಸಾಲ ಮನ್ನಾ ಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ, ರೈತರ ಸಾಲ ಮನ್ನಾ ಮಾಡುವುದು ಕೇಂದ್ರ ಸರ್ಕಾರದ ನೀತಿಯಲ್ಲ ಎಂದು ಹೇಳಿಕೆ ನೀಡಿದ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ರಾಹುಲ್ ಗಾಂಧಿ ಟೀಕಿಸಿದರು.
ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ತಿಂದ ಬಳಿಕ ಆ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಆಹಾರ ಎಷ್ಟು ರುಚಿಕರವಾಗಿದೆಯೆಂದರೆ ಬಿಜೆಪಿ ನಾಯಕರು ಕೂಡ ಈ ಕ್ಯಾಂಟೀನ್ ಗೆ ಬಂದು ಆಹಾರ ಸೇವಿಸುತ್ತಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics