ಕುಮಾರ ಸ್ವಾಮಿ, ಪ್ರಜ್ವಲ್, ಎಚ್.ಡಿ ದೇವೇಗೌಡ
ಬೆಂಗಳೂರು: ಜೆಡಿಎಸ್ ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇದೆ ಎಂದು ಹೇಳಿ ಪಕ್ಷದ ಹಿರಿಯ ಮುಖಂಡರಿಗೆ ಇರಿಸುಮುರಿಸು ಉಂಟು ಮಾಡಿದ್ದ ಪ್ರಜ್ವಲ್ ರೇವಣ್ಣ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರ ಸ್ವಾಮಿ ಅವರ ಬಳಿ ಕ್ಷಮೆ ಕೋರುವಂತೆ ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಜ್ವಲ್ ನನ್ನು ಮನೆಗೆ ಕರೆಸಿ ಮಾತನಾಡಿದ್ದೇನೆ, ಆತನಿಗೆ ತನ್ನ ತಪ್ಪಿನ ಅರಿವಾಗಿದೆ, ಕುಮಾರಸ್ವಾಮಿ ಬಳಿ ಕ್ಷಮೆ ಕೋರುವಂತೆ ಹೇಳಿದ್ದೇನೆ, ಆತ ಕೂಡ ಕ್ಷಮೆ ಕೋರಿದ್ದಾನೆ, ಪಕ್ಷದ ನಿರ್ಣಯಕ್ಕೆ ಬದ್ಧ ಎಂದು ಹೇಳಿದ್ದಾನೆ, ಪ್ರಜ್ವಲ್ ಭವಿಷ್ಯ ಕುಮಾರಸ್ವಾಮಿ ಕೈಯ್ಯಲ್ಲಿದೆ ಎಂದು ದೇವೇಗೌಡ ಪರೋಕ್ಷವಾಗಿ ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಯಾವುದೇ ಸೂಟ್ ಕೇಸ್ ಸಂಸ್ಕೃತಿಯಿಲ್ಲ ಎಂದು ಹೇಳಿರುವ ದೇವೇಗೌಡ, ಪ್ರಜ್ವಲ್ ಹೇಳಿಕೆ ಸಂಬಂಧ ಕುಮಾರಸ್ವಾಮಿ ಅಸಮಾಧಾನಗೊಂಡಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ಸಮರ್ಥಿಸಿಕೊಂಡಿದ್ದಾರೆ. ನಿಖಿಲ್, ಪ್ರಜ್ವಲ್ ಇಬ್ಬರೂ ನನಗೆ ಒಂದೇ, ಇಬ್ಬರು ಮಕ್ಕಳೇ, ನಿಖಿಲ್ ಏನಾದರೂ ಈ ರೀತಿ ಹೇಳಿಕೆ ನೀಡಿದ್ದರೇ ಹೀಗೆ ಆಗುತ್ತಿರಲಿಲ್ಲವೇ ಎಂದು ಪ್ರಶ್ನಿಸಿರುವ ದೇವೇಗೌಡರು ಇದನ್ನು ಮುಂದುವರಿಸುವುದು ಬೇಡ ಇಲ್ಲಿಗೆ ಮುಕ್ತಾಯಗೊಳಿಸಿ ಎಂದು ಸಲಹೆ ನೀಡಿದ್ದಾರೆ.