ಮೈಸೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಖಾಲಿಯಿರುವ ಮೂರು ಸಚಿವ ಸ್ಥಾನಗಳನ್ನು ಹೈಕಮಾಂಡ್ ಜೊತೆಗೆ ಚರ್ಚಿಸಿದ ನಂತರ ಭರ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಂಪುಟ ವಿಸ್ತರಣೆ ಸಂಬಂಧ ಇದುವರೆಗೂ ಹೈಕಮಾಂಡ್ ಜೊತೆ ಚರ್ಚಿಸಿಲ್ಲ ಎಂದ ಅವರು, ಆಷಾಡ ಮುಗಿದ ನಂತರ ಒಳ್ಳೆಯ ದಿನದಲ್ಲಿ ಸಂಪುಟ ವಿಸ್ತರಣೆ ಮಾಡಲು ಕಾಯುತ್ತಿದ್ದಾರೆ ಎಂಬುದನ್ನು ನಿರಾಕರಿಸಿದರು.
ಜೈಲು ಅಧಿಕಾರಿಗಳ ಲಂಚ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ಅಧಿಕಾರಿಗಳ ಅಶಿಸ್ತನ್ನು ಸರ್ಕಾರ ಸಹಿಸುವುದಿಲ್ಲ, ಅಧಿಕಾರಿಗಳು ಮಾಧ್ಯಮಗಳಿಗೆ ನೀಡಿದ ಹೇಳಿಕೆ ಹಾಗೂ ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಆರೋಪ ಸಂಬಂಧ ಸೂಕ್ತ ತನಿಖೆ ನಡೆಸಲು ಸೂಚಿಸಿದ್ದು, ಆರೋಪ ಸಾಬೀತಾದರೇ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.