ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಆದರೆ ತೆರವಾಗುವ ಗೃಹ ಸಚಿವ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎಂಬುದು ಎಲ್ಲರ ಪ್ರಶ್ನೆಯಾಗಿದ್ದು ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕುತೂಹಲ ಮೂಡಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಿಧಾನ ಮಂಡಲ ಅಧಿವೇಶನದ ನಂತರವಷ್ಟೇ ಸಚಿವ ಸಂಪುಟ ವಿಸ್ತರಣೆ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಗೃಹ ಖಾತೆ ಸೇರಿದಂತೆ ಖಾಲಿ ಉಳಿದಿರುವ ಸಚಿವ ಸ್ಥಾನಗಳಿಗೆ ಯಾರನ್ನು ನೇಮಿಸಬೇಕೆಂಬುದರ ಬಗ್ಗೆ ಅಧಿವೇಶನದ ನಂತರ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ.
ತಮ್ಮ ನೇತೃತ್ವದಲ್ಲೇ ರಾಜ್ಯ ಕಾಂಗ್ರೆಸ್ ಚುನಾವಣೆ ಎದುರಿಸುತ್ತದೆ ಎಂದು ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ನಿರ್ಧರಿಸಿದೆ. ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸದಸ್ಯರು ನಿರ್ಧರಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವುದನ್ನು ನಿರಾಕರಿಸಿರುವ ಸಿದ್ದರಾಮಯ್ಯ, ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿಲ್ಲ ಎಂದಿದ್ದಾರೆ. ಇದೇ ವೇಳೆ ಎಐಸಿಸಿ ಮಾಧ್ಯಮ ವಿಭಾಗದ ಜವಾಬ್ದಾರಿಯನ್ನು ಹೊತ್ತಿರುವ ಮಾಜಿ ಸಂಸದೆ ರಮ್ಯಾ ಅವರ ಸೇವೆಯನ್ನೂ ಸಮರ್ಥವಾಗಿ ಬಳಸಿಕೊಳ್ಳುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಳೆ, ಬರಗಾಲದ ಬಗ್ಗೆಯೂ ಸಿಎಂ ಮಾತನಾಡಿದ್ದು, ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿಲ್ಲ, ಮಳೆಗಾಗಿ ಪೂಜೆ ಮಾಡಿಸುವುದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.