ಕಾರ್ಯಕಾರಣಿಗೆ ಚಾಲನೆ ನೀಡುತ್ತಿರುವ ಬಿಜೆಪಿ ನಾಯಕರು
ಮೈಸೂರು: ಭಿನ್ನಮತದ ಸುಳಿಯಲ್ಲೇ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಾಕಾರಣಿ ಶನಿವಾರ ಮೈಸೂರಿನಲ್ಲಿ ಆರಂಭವಾಗಿದ್ದು, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ 224 ಸ್ಥಾನಗಳ ಪೈಕಿ 150 ಸ್ಥಾನ ಗೆಲ್ಲಬೇಕು ಎಂಬುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ.
ರಾಜ್ಯ ಕಾರ್ಯಕಾರಣಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು, ನಾನು ಎಂದಿಗೂ ಕುರ್ಚಿಗೆ ಅಂಟಿಕೊಂಡವನಲ್ಲ. ಅಧಿಕಾರದ ದಾಹ ಇದ್ದಿದ್ದರೆ ಕುಮಾರಸ್ವಾಮಿ ಜೊತೆಗಿನ 20, 20 ತಿಂಗಳ ಸಮ್ಮಿಶ್ರ ಸರ್ಕಾರದ ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಚುನಾವಣೆಗೆ ಹೋಗುತ್ತಿರಲಿಲ್ಲ ಪರೋಕ್ಷವಾಗಿ ಕೆಎಸ್ ಈಶ್ವರಪ್ಪ ಅವರಿಗೆ ಟಾಂಗ್ ನೀಡಿದರು. ಅಲ್ಲದೆ 1991ರಲ್ಲಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ಇಲ್ಲದಿದ್ದ ಕಾಲದಲ್ಲಿ ಶ್ರೀಕಂಠದತ್ತ ಒಡೆಯರ್, ಎಲ್.ಜಿ. ಹಾವನೂರ, ವೆಂಕಟಸ್ವಾಮಿ ಅವರಂತಹ ನಾಯಕರನ್ನು ಕರೆತಂದಾಗ ಅವರೆಲ್ಲ ಬಂದರೆ ತಮ್ಮ ಕುರ್ಚಿಗೆ ತೊಂದರೆ ಎಂದು ಯಾವ ನಾಯಕರೂ ಭಾವಿಸಿರಲಿಲ್ಲ ಎಂದು ರಾಯಣ್ಣ ಬ್ರಿಗೇಡ್ ನಾಯಕರಿಗೆ ಮಾತಿನ ಚಾಟಿ ಬೀಸಿದರು.
ಕಾಂಗ್ರೆಸ್ ಪಕ್ಷ 150 ಸ್ಥಾನ ಗೆಲ್ಲಬೇಕು!
ಬಿಜೆಪಿ ರಾಜ್ಯ ಕಾರ್ಯಕಾರಣಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ಅವರು,ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 150 ಸ್ಥಾನಗಳನ್ನು ಗೆಲ್ಲಬೇಕು ಎಂದು ಹೇಳಿದರು. ಆಗ ವೇದಿಕೆಯಲ್ಲಿದ್ದವರಿಗೆ ಶಾಕ್ ಆಗಿತ್ತು. ಕೂಡಲೇ ಸಂಸದೆ ಶೋಭಾ ಕರಂದ್ಲಾಜೆ ಅವರು, ಕಾಂಗ್ರೆಸ್ ಅಲ್ಲ, ಬಿಜೆಪಿ 150 ಸ್ಥಾನ ಗೆಲ್ಲಬೇಕು ಎಂದು ಹೇಳಿ ಎಂದು ನೆನಪಿಸಿದರು.
ಇನ್ನು ರಾಜ್ಯ ಕಾರ್ಯಕಾರಣಿಯಲ್ಲೂ ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರ ನಡುವಿನ ಭಿನ್ನಮತ ಮುಂದುವರೆದಿದ್ದು, ವೇದಿಕೆ ಮೇಲೆ ಈಶ್ವರಪ್ಪ ಅವರು ಕೈಮುಗಿದರೂ ಯಡಿಯೂರಪ್ಪ ಅವರು ತಲೆ ತಗ್ಗಿಸಿ ಸುಮ್ಮನೆ ಕುಳಿತಿದ್ದರು. ಅಲ್ಲದೆ ಭಾಷಣದ ಆರಂಭದಲ್ಲಿ ಶ್ರೀನಿವಾಸ ಪ್ರಸಾದ್ ಹೆಸರು ಪ್ರಸ್ತಾಪಿಸಿದ ಯಡಿಯೂರಪ್ಪ ಅವರು ಜಗದೀಶ್ ಶೆಟ್ಟರ್, ಈಶ್ವರಪ್ಪ ಅವರ ಹೆಸರು ಹೇಳದೆ ಪ್ರತಿಪಕ್ಷ ನಾಯಕರು ಎಂದಷ್ಟೇ ಸಂಬೋಧಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿಯಲ್ಲಿ ಈಶ್ವರಪ್ಪ ಅವರ ಏಕಾಂಗಿಯಾಗಿದ್ದು, ಅವರು ಒಬ್ಬರೇ ಕುಳಿತು ತಿಂಡಿ ತಿನ್ನುತ್ತಿದ್ದರೂ ಅವರತ್ತ ಯಾವ ಪ್ರಮುಖ ನಾಯಕರು ಸುಳಿಯಲಿಲ್ಲ.
ಈ ಮಧ್ಯೆ, ಕಾರ್ಯಕಾರಿಣಿ ನಡೆಯುತ್ತಿದ್ದ ಸಭಾಂಗಣದ ಹೊರಗೆ ಮಾತನಾಡಿರುವ ಈಶ್ವರಪ್ಪ ಅವರು ಬ್ರಿಗೇಡ್ ನಿಲ್ಲುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ನಿದ್ದೆಗೆ ಜಾರಿದ ಬಿಜೆಪಿ ಪ್ರಮುಖರು!
ಇಲ್ಲಿನ ರಾಜೇಂದ್ರ ಕಲಾಮಂದಿರದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಒಗ್ಗಟ್ಟಿನ ಬಗ್ಗೆ ಪಾಠ ಮಾಡುತ್ತಿದ್ದರೆ, ಪಕ್ಷದ ಪ್ರಮುಖ ಮುಖಂಡರು ಭರ್ಜರಿ ನಿದ್ದೆಗೆ ಜಾರಿದ್ದು ಕಂಡುಬಂತು.