ಸಭೆಯಲ್ಲಿ ವೇಣುಗೋಪಾಲ್, ಪರಮೇಶ್ವರ್ ಮತ್ತು ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಒಗ್ಗಟ್ಟಿದೆ ಎಂದು ನಂಬಿದ್ದ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರಿಗೆ ಭಾರೀ ನಿರಾಶೆಯಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಒಳಗೊಳಗೆ ಭಿನ್ನಮತ ಹೊಗೆಯಾಡುತ್ತಿರುವುದು ವೇಣುಗೋಪಾಲ್ ಅವರ ಗಮನಕ್ಕೆ ಬಂದಿದೆ.
ಗೃಹ ಸಚಿವ ಜಿ. ಪರಮೇಶ್ವರ್ ಅವರ ಅಭಿಮಾನಿಗಳು ಅವರ ಪರವಾಗಿ ನಾಲ್ಕು ಪುಟಗಳ ಭಿತ್ತಿಪತ್ರ ಹಂಚಿದ್ದಾರೆ. ಪರಮೇಶ್ವರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರಿಸಬೇಕೆಂದು ಈ ಪಾಂಪ್ಲೆಟ್ ನಲ್ಲಿ ಒತ್ತಾಯಿಸಲಾಗಿದೆ, ಇದನ್ನು ನೋಡಿದ ವೇಣುಗೋಪಾಲ್ ಅವರಿಗೆ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅಭಿಪ್ರಾಯ ಮೂಡಿದೆ,
ಪರಮೇಶ್ವರ್ ಅಭಿಮಾನಿಗಳು ಎನಿಸಿಕೊಂಡ ಮಹದೇವಪುರದ ನಲ್ಲೂರಹಳ್ಳಿ ನಾಗೇಶ, ಮಾಗಡಿ ಜಯರಾಮ್ ಮತ್ತು ಬೈರಪ್ಪ ಅವರು 2013ರ ವಿಧಾನಸಭೆಯಲ್ಲಿ ಪರಮೇಶ್ವರ್ ಸೋಲಿಗೆ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಇಬ್ಬರು ನಾಯಕರ ನಡುವೆ ತೀವ್ರ ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಪರಮೇಶ್ವರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಒತ್ತಾಯಿಸಿರುವ ಭಿತ್ತಿಚಿತ್ರಗಳನ್ನು ಬುಧವಾರ ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಹಂಚಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸಿಲು ಒಲವು ತೋರಿದ್ದಾರೆ. ಲಿಂಗಾಯತ ಮುಖಂಡರನ್ನು ಅಧ್ಯಕ್ಷರನ್ನಾಗಿಸಿದರೇ ಅದರಿಂದ ಒಳ್ಳೆಯದಾಗುವುದಕ್ಕಿಂತ ಕೆಟ್ಟ ಪರಿಣಾಮ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
ಗೃಹ ಸಚಿವರಾಗಿರುವ ಪರಮೇಶ್ವರ್ ಅವರಿಗೆ ಸ್ವತಂತ್ರ್ಯವಾಗಿ ಯಾವ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿಲ್ಲ, ವಿಧಾನ ಪರಿಷತ್ ಸದಸ್ಯರಿಂದ ಆಯ್ಕೆಯಾಗಿರುವ ಪರಮೇಶ್ವರ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಅವರ ಅಭಿಮಾನಿಗಳು ದೂರಿದ್ದಾರೆ.